ಮಾಘ ಮಾಸದಿ ಕೋಗಿಲೆ,
ಹರುಷದಿ ಹಾಡುವ ತೆರದಿ;
ತನುವು ಇಂದು ನಲಿದಿದೆ,
ನಿನ್ನ ನೆನೆದು ಕುಣಿದಿದೆ..
ತುಂಬು ಚಂದ್ರನ ಇರುಳಲಿ, ಕಡಲು,
ಉಕ್ಕಿ ಜಿಗಿಯುವ ತೆರದಿ;
ಭಾವ ಇಂದು ಪುಟಿದಿದೆ,
ಚೆಲುವ ನೆನೆದು ಅರಳಿದೆ..
ಮೈಯ ಸೋಕಲು ಸೋನೆ, ಬನವು,
ಹಸಿರ ತುಂಬುವ ತೆರದಿ;
ಮನವು ಇಂದು ಕರೆದಿದೆ,
ನಗೆಯ ಸೋನೆ ಬಯಸಿದೆ..
ಧರೆಗೆ ಬರಲು ಮಳೆಯು, ಬಾನಿನ,
ಸನಿಹ ತರುವ ತೆರದಿ;
ಇರುವ ಅಂತರವನು ಕದಡಿದೆ,
ಮಾತು ಸನಿಹವನು ಬರಿಸಿದೆ..
No comments:
Post a Comment