ವೃತ್ತಿಯಲ್ಲಿ ಛಾಯಾಗ್ರಾಹಕ. ಭಾರಿ ಕೌಶಲ್ಯಮತಿ, ಹಾಗೂ ಸದಾ ಬೇಡಿಕೆಯಲ್ಲಿರುವವ. "Candid photography" ಅಂತಾರಲ್ಲ, ಅಂತಾದ್ನ ಸೆರೆಹಿಡಿಯೋನು. "Still photography" ಅಂದ್ರೆ ಇವನಿಗೆ ಆಗದ ಕೆಲ್ಸ. ಇದು ನಮ್ಮ ಕಥಾನಾಯಕನ ಪರಿಚಯ. ಹೆಸ್ರು ಯಶವಂತ್.
ಬಹುತೇಕವಾಗಿ, ಮದುವೆ ಸಮಾರಂಭಗಳನ್ನ ಸೆರೆಹಿಡಿಯೋದು ನೆಚ್ಚಿನ ಕಾರ್ಯ. ಬಣ್ಣಗಳು, ಚಿತ್ತಾರಗಳು, ರಂಗು ರಂಗಿನ ಉಡುಗೆಗಳು, ತರಹೇವಾರಿ ಭಾವ ಲಯಗಳು. ನಗು, ಸಂತೋಷ ತುಂಬಿದ ಚಹರೆಗಳು. ಮಗ/ಮಗಳ ಜೀವನ ರೂಪಿಸಿದ ತೃಪ್ತಿಯ ಹೊಳಪು ಹೆತ್ತವರ ಕಣ್ಣಲ್ಲಿ ಸೆರೆಹಿಡಿದು, ಮದುವೆ ಗಂಡು/ಹೆಣ್ಣಿನ ಕಣ್ಣಲ್ಲಿ ಹೊಸಜೀವನದ ಕುರಿತಾದ ನಿರೀಕ್ಷೆಗಳ ಬೆಳಕನ್ನು ಹಾಗೇ ಬಿಂಬಿಸಿ ಚಿತ್ರವಾಗಿಸೋದಂದ್ರೆ ಯಶವಂತನಿಗೆ ಎಲ್ಲಿಲ್ಲದ ಖುಷಿ.
ಯಾರೇ ಆಗ್ಲಿ, ನಾಟಕೀಯತೆ ಇಲ್ದಿರ, ಎಲ್ಲ ಸನ್ನಿವೇಶಗಳಲ್ಲೂ ತಾವು ತಾವಾಗೆ ಇರೋರಂದ್ರೆ ಅವನಿಗೆ ಬಲುಪ್ರಿಯ. ಅವನ ವ್ಯಕ್ತಿತ್ವವೂ ಅಂಥಾದ್ದೆ. "ಇಂಥ ಸಮಾರಂಭಗಳಲ್ಲೇ ನೋಡಿ, ಜನ ಅತೀವ ಸಂತಸದಿಂದ, ಎಲ್ಲವನ್ನು ಮರೆತು, ನಿಜವಾದ ನಗುವನ್ನ ಹೊರಹೊಮ್ಮಿಸ್ತಾರೆ" ಅಂತ ಆಗಾಗ ಹೇಳ್ತಿರ್ತಾನೆ.
ಒಮ್ಮೆ ಯಶವಂತನಿಗೆ ಸ್ನೇಹಿತನ ಮೂಲಕ ಒಂದು ಮದುವೆಯ ಚಿತ್ರಸೋಕೆ ಅವಕಾಶ ಸಿಗುತ್ತೆ. ಅವತ್ತು ಎಂದಿನಂತೆ, ನೈಜವಾಗಿ ಸೆರೆ ಹಿಡಿಯೋಂತ ಯಾವುದೇ ಅವಕಾಶಾನೂ ತಪ್ಪಿಸೋಕೆ ಇಷ್ಟ ಇಲ್ದಿರಾ, ಮದುವೆ ಮಂಟಪಕ್ಕೆ ಎಲ್ಲರಿಗಿಂತ ಮೊದಲೇ ಹಾಜರಾತಿ ಕೊಟ್ಟಿದ್ದ.
ಎಲ್ಲ ರೀತಿಯ ತಯಾರಿ ಮಾಡ್ಕೊಂಡು, ಸಂಗಾತಿಯಂತ ಬಿಂಬಗ್ರಾಹಿಯನ್ನು ನೇತುಹಾಕಿಕೊಂಡು ಓಡಾಡತೊಡಗಿದ. ಇವನು ವಿಶೇಷತೆಗಳನ್ನ ಮಾತ್ರ ಸೆರೆ ಹಿಡಿಯೋದ್ರಿಂದ, ಕಾರ್ಯವೈಖರಿ ಹೇಗಿರುತ್ತೆ ಅಂದ್ರೆ; ಮೋಡ ಆಗಸದಲ್ಲಿ ತೇಲಾಡ್ಕೊಂಡು, ಭೂಮಿ ಕಡೆ ಕಣ್ಣು ಹಾಯಿಸಿಕೊಂಡು, ಯಾವ ನೆಲದ ಮೇಲೆ ಪ್ರೇಮ ಕೈಂಕರ್ಯದ ಸುಳಿವು ಮೂಡುತ್ತೋ ಅಲ್ಲಿ ನಿಂತು ಮಳೆಯುಣಿಸಿ, ಚೈತನ್ಯದ ಸೆರೆಹಿಡಿಯೋ ಹಾಗೆ.
ಹೀಗೆ ಅಲೆದಾಡೋವಾಗ, ಬಿಂಬಗ್ರಾಹಿಯ ಕಣ್ಣಿನ ಮುಂದೆ ಯಾವುದೋ ಅನುರೂಪ ಬಿಂಬವೊಂದು ‘ಹಾಗೇ ಬಂದು ಹೀಗೆ ಹೋದ’ ಹಾಗೆ ಅನ್ನಿಸ್ತು. ಮತ್ತೆ ವಾಪಸ್ ನೋಡಿದಾಗ, autofocus mode ನಲ್ಲಿ ಇದ್ದಂಥ ಅದು, ಆ ಬಿಂಬವನ್ನು ಬಿಟ್ಟು ಮಿಕ್ಕೆಲ್ಲವನ್ನೂ ಮಂಜು ಮಂಜಾಗಿಸಿ, ಸುತ್ತಮುತ್ತಲಿನ ಬೆಳಕು-ಬಣ್ಣಗಳನ್ನೆಲ್ಲ ಸರಿದೂಗಿಸಿ ಕೊಟ್ಟಿದ್ದೆ 'ಕ್ಲಿಕ್' ಎಂಬ ಶಬ್ಧ ಕೇಳಿಸಿತು. ತನಗರಿವಿಲ್ಲದಲೆ ಆ ಅಮೂರ್ತ ಆಕೃತಿಯ ಬಿಂಬವನ್ನ ಸೆರೆಹಿಡಿದುಬಿಟ್ಟಿದ್ದ.
ಬಿಂಬಗ್ರಾಹಿಯಲ್ಲಷ್ಟೇ ಅಲ್ಲ..ತನ್ನ ಕಣ್ಣಿನಲ್ಲೂ ಕೂಡ..
ತಿಳಿ ಹಸಿರು-ಹಳದಿ ಮಿಶ್ರಿತ ಸೀರೆ. ಉದ್ದವಲ್ಲದ-ಗಿಡ್ಡವೂ ಅಲ್ಲದ ಒಂದು ರೀತಿಯ ಆಕರ್ಷಣೆ ಇರುವಂತ ಮಾದರಿ ತಲೆಗೂದಲು. ಈಗ ತಾನೆ ತಯಾರಿಸಿದ ಬಿಲ್ಲನ್ನು ಕಣ್ಣ ಮೇಲೆ ಇಟ್ಟಿದಾರೆನೋ ಅನಿಸುವಂತ ಹುಬ್ಬು. ಬಿಂಬಗ್ರಾಹಿಯ ಬೆಳಕನ್ನೂ ನಾಚಿಸುವಂಥ ಕಣ್ಣು. ತೆಳು ಗುಲಾಬಿ ಬಣ್ಣದಲಿ ಮಿಂದೆದ್ದ ಅಧರಗಳು. ಕೊಂಚವೇ ಕೊಂಚ, ಹೆಚ್ಚಂತೂ ಖಂಡಿತ ಅಲ್ಲದಿರೊ ಮುಖದ ಮೇಲಿನ ಸೌಂದರ್ಯ ಲೇಪನ. ಎಲ್ಲದಕ್ಕೂ ಹೆಚ್ಚಾಗಿ, ನೈಜತೆ ತುಂಬಿರುವಂಥ ಆ ಚೆಂದ ನಗು ಯಶವಂತನಿಗೆ ಇನ್ನೇನನ್ನೂ, ಇನ್ಯಾರನ್ನೂ ಚಿತ್ರಸೋಕೆ ಆಗದಿರೊ ಹಾಗೆ ಮಾಡಿ, ಅದೆಷ್ಟು 'ಕ್ಲಿಕ್'ಗಳು ಹೊಮ್ಮಿದವೊ ಗೊತ್ತಿಲ್ಲ.
ತನ್ನ ಇಷ್ಟು ವರ್ಷಗಳ ಅನುಭವ ಬಳಸಿ, ಬೆಳಕು-ಬಣ್ಣಗಳ ವೈವಿಧ್ಯತೆ ಬೆರೆಸಿ, ಮೊದಲ ಪ್ರೇಮವಾದಂಥ ಭಾವನೆಯನ್ನು ಸೇರಿಸಿ, ಚೆಂದನೆಯ ಚಿತ್ರಗಳನ್ನು ಸೆರೆಹಿಡಿದ. ಸೆರೆ ಹಿಡಿಯೋಕೆ ಮುಂಚಿನ ಅಂದಾಜಿಗೆ ಸ್ವಲ್ಪವೇ ಏರುಪೇರಾದರೂ, ಆ ಚಿತ್ರವನ್ನ ತಕ್ಷಣ delete ಮಾಡುತ್ತಿದ್ದ. ಕಾರಣ memory ಕಡಿಮೆ ಆಗುತ್ತೆ ಅಂತಲ್ಲ, ಅವಳ ಸೌಂದರ್ಯಕ್ಕೆ ಅದು ಅವಮಾನ ಅಂತ ಅನ್ನಿಸಿ.
ಮದುವೆಯೇನೋ ಮುಗಿಯಿತು. ಬರಿಯ ಸೌಂದರ್ಯೋಪಾಸನೆ
ಮಾಡುತ್ತಾ ಆಕೆಯ ವಿವರ ಪಡಕೊಳೋದೆ ಮರೆತುಹೋಯ್ತು. ಇದಲ್ವಾ, ಇಕ್ಕಟ್ಟಿನ-ಚಡಪಡಿಕೆಯ-ಫಜೀತಿಯ ಅನುಭವ
ಅಂದ್ರೆ! ಅಲ್ಲಿ ನೆರೆದಿದ್ದ ಜನರನ್ನೆಲ್ಲ ಒಮ್ಮೆ ಪರಾಮರ್ಶಿಸಿದ
ಮೇಲೆ, ಅವಳು ಮದುವೆ ಸಂಬಂಧಿಕರ ಪೈಕಿ ಅಲ್ಲದಿರ, ಮದುಮಗಳ ಸ್ನೇಹಿತೆನೇ ಆಗಿರಬೇಕು ಎಂದು ಅಂದಾಜಿಸಿದ.
ಮದುವೆಯ ಅಂಗಳದಲ್ಲಿ
ಓಡಾಡುವ, ಉಪಸ್ಥಿತರಿರುವ ಚಂದನೆಯ ಹುಡುಗೀರೆಲ್ಲ ಮದುಮಗಳ ಕಡೆಯವ್ರು ಅನ್ನೋ ಅನಿಸಿಕೆ ಎಲ್ಲರಲ್ಲೂ
ಮೂಡೋದು ಸ್ವಲ್ಪ ತಮಾಷೆ ಅನ್ಸಿದ್ರು, ತುಂಬ ಸರ್ತಿ ಅದು ನಿಜ ಆಗಿರುತ್ತೆ.
ಭಾರಿ ಚಡಪಡಿಕೆಯಲ್ಲೇ ಊರು
ಬಿಟ್ಟು ತನ್ನೂರಿಗೆ ಹೊರಟು ನಿಂತ ಯಶವಂತನಿಗೆ, ಮೈಮರೆವು ಏನೆಲ್ಲಾ ಮಾಡಿಸಿಬಿಡುತ್ತೆ ಅಂತ ಅನಿಸಿ
ಬೇಸರದಲ್ಲೇ ಕೊರಗಿದ. ವಾಪಸ್ ಹೋದಮೇಲೆ ಸ್ನೇಹಿತನ
ಮೂಲಕ ಆಕೆಯ ಪತ್ತೆಹಚ್ಚಬೇಕು, 'ಮೊದಲ ಪ್ರೇಮ ಹೇಗೆ ಬಿಟ್ಟು ಕೊಡೋದು ಮಾರಾಯ, ಸ್ವಲ್ಪ ಆದ್ರೂ ಹುಡುಕೋಕೆ
ಕಷ್ಟಪಡೋಣ' ಅಂತ ಆಗಾಗ ಹೇಳಿಕೊಳ್ತಿದ್ದ. ಅಲ್ಲಿ ಸೆರೆಹಿಡಿದಿದ್ದ ಆಕೆಯ ಚಿತ್ರಗಳನೆಲ್ಲ ಅಚ್ಚು ಹಾಕಿಸಿ
ತನ್ನ ಕೋಣೆಯ ಗೋಡೆ ಮೇಲೆ ಅಲಂಕೃತಗೊಳಿಸಿದ. ಮದುವೆ album ready ಆಗಿದೆ ಎಂದು ಹೇಳಲು ಸ್ನೇಹಿತನಿಗೆ
ಕರೆ ಮಾಡಿ, ಕುಶಲೋಪರಿ ಮಾತುಗಳ ನಡುವೆಯೇ ಮಿಕ್ಕೆಲ್ಲವರುಗಳ ಬಗ್ಗೆ ಕೇಳುತ್ತಲೇ ಆಕೆಯಿದ್ದ ಗುಂಪಿನ
ಬಗ್ಗೆ ವಿಚಾರಿಸಿದ. ಅವರೆಲ್ಲ ಮದುಮಗಳ ಸ್ನೇಹಿತರು, ತನಗೂ ಪರಿಚಿತರು ಎಂದು ಹೇಳಿದ್ದೇ ತಡ, "ಈಗಿಂದ ಇವನೇ ನನ್ನ
ಪ್ರಾಣ ಸ್ನೇಹಿತ" ಎಂದು ಅನಿಸೋಕೆ ಶುರುವಾಯ್ತು. ಇನ್ನ ಇವನನ್ನ ಆದಷ್ಟು ಬೇಗ ಭೇಟಿ ಮಾಡಲೇ ಬೇಕು
ಅನ್ನಿಸಿ, "ಸರಿ ಯಾವಾಗ ಸಿಕ್ತಿಯೋ? ತುಂಬ ದಿನ ಆಯ್ತು ನಾವಿಬ್ರೂ ಜೊತೇಲಿ ಗುಂಡು ಹಾಕಿ"
ಎಂದು ಹೇಳಿದ. 'ಗುಂಡು ಹಾಕಿದಾಗ ಅಪರಿಚಿತರೂ ಪರಿಚಿತರಾಗಿ ಸಹಾಯ ಮಾಡಲು ಮುಂದಾಗ್ತಾರೆ, ಅಂಥಾದ್ರಲ್ಲಿ ಇವ ಮೊದಲೇ ನನ್ನ ಸ್ನೇಹಿತ ಸಹಾಯ ಮಾಡಲ್ವಾ!" ಅನ್ನಿಸಿ,
ಇಬ್ಬರೂ ಸಿಗೋ ದಿನದ ಖಾತರಿ ಪಡೆದು ಆ ದಿನಕ್ಕಾಗಿ ಕಾದಿದ್ದಾನೆ…