ಯೋಗಸಾಹಿತ್ಯ

ಯೋಗಸಾಹಿತ್ಯ
ಭಾವನೆಗಳ ಅಂಗಳದಲಿ ಪದಗಳ ಓಡಾಟ...!!

Wednesday, October 18, 2017

ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ..

ಸನ್ನಿವೇಶ ೧:
==========
ಮಗುವಿಗೆ ಒಂದು ಆಟಿಕೆ ತುಂಬಾನೇ ಇಷ್ಟ ಆಗುತ್ತೆ. ಅದನ್ನೇ ನೋಡುತ್ತಾ ನಡೆದ ಮಗುವನ್ನು ಗಮನಿಸಿದ ಅಮ್ಮ ಆಟಿಕೆಯನ್ನು ಕೊಡಿಸುತ್ತಾಳೆ.
ಮಗುವಿಗಂತು ಎಲ್ಲಿಲ್ಲದ ಖುಷಿ.
ಆಟಿಕೆ ಕೈಲಿಡಿದು ಬಾಚಿ ತಬ್ಬಿದಾಗ ಅಮ್ಮನಿಗಂತು ಕಂಬನಿ ತುಂಬಿದ ಸಂತೋಷ.
ಹಾಗೇ ಮುಂದೆ ಸಾಗಿದಾಗ ಇನ್ನೊಂದು ಮಗುವಿನ ಆಟಿಕೆ ನೋಡಿ, ಅದೇ ತನ್ನದಕ್ಕಿಂತ ಚೆನ್ನಾಗಿದೆ ಅನ್ನಿಸಿ, ಅಮ್ಮನನ್ನು ನೋಡಿ "ಯಾಕೆ ಈ ಥರದ್ದು ಕೊಡಿಸಿದೆ ಸುಮ್ನೆ, ಚೆನ್ನಾಗಿಲ್ಲ..!" ಅನ್ನೋ ಅಸಡ್ಡೆ ನೋಟ ಕಂಡು ಅಮ್ಮನಿಗೆ ಮತ್ತೆ ಕಂಬನಿ, ಈ ಸರ್ತಿ ಬೇಸರದ್ದು, ಮುಖದ ಮೇಲೆ ಸುಳ್ಳಿನ ನಗೆ ಬೀರುತ್ತಾ...

ಸನ್ನಿವೇಶ ೨:
==========
ಬಾಲ್ಯಾವಸ್ಥೆಯ ಹುಡುಗ ಸ್ನೇಹಿತರೊಡನೆ ಆಡುತ್ತಿದ್ದುದ ನೋಡುತ್ತ ಕುಳಿತಿದ್ದ ತಂದೆ, ಒಂದೆರಡು ಹುಡುಗರ ಗುಂಪು ಸೈಕಲ್ ತುಳಿದು ಹಾದುಹೋಗಿದ್ದನ್ನೇ ನೆಟ್ಟ ನೋಟದಲ್ಲಿ ನಿಂತು ನೋಡಿದ ಮಗನನ್ನು ಗಮನಿಸಿದ್ದರು.
ಮರುದಿನವೇ ಒಂದು ಸೈಕಲ್ ತಂದು ಕೊಟ್ಟರು. ಮಗನಿಗಂತೂ ಅಪ್ಪನ ಮೇಲೆ ಎಲ್ಲಿಲ್ಲದ ಪ್ರೀತಿ. ಮಗನ ಸಂತೋಷ ಕಂಡು ಅಪ್ಪನಿಗೆ ತೃಪ್ತಿ.
ಆನಂದದಿ ಸೈಕಲ್ ತುಳಿಯುತ್ತಿದ್ದ ಮಗನನ್ನು ನೋಡುತ್ತಾ ಕುಳಿತಿದ್ದರು ತಂದೆ. ಒಮ್ಮೆಲೆಗೆ ಸೈಕಲ್ ತುಳಿವುದ ನಿಲ್ಲಿಸಿ ಪಕ್ಕದಲಿ ಹಾದುಹೋದ ಅವನ ಸೈಕಲ್ಲಿಗಿಂತ ಹೆಚ್ಚು ಗೇರ್ ಗಳಿದ್ದು, stylish ಇದ್ದುದನ್ನು ನೋಡುತ್ತಾ ಬೇಸರದಿ ಮನೆಗೆ ಬಂದು ಸೈಕಲ್ ನಿಲ್ಲಿಸಿ ಹೋದ ಮಗನನ್ನು ಕಂಡು ಅಪ್ಪನಿಗೆ ದುಃಖ..

ಸನ್ನಿವೇಶ ೩:
==========
ದಿವಾಕರನಿಗೋ, ದೀಪ ಎಂದರೆ ಪಂಚಪ್ರಾಣ. ಅತೀವ ಪ್ರೀತಿ, ಅಕ್ಕರೆ. ಪ್ರೇಯಸಿ ಆಗಿದ್ದಾಕೆಯೊಂದಿಗೆ ಇತ್ತೀಚೆಗಷ್ಟೇ ಮದುವೆ ನಿಶ್ಚಯ ಆದದ್ದೇ ಆದದ್ದು ಆಕೆ ಬಯಸಿದ್ದೆಲ್ಲಾ ಕೊಡಿಸುವಷ್ಟು, ಈಡೇರಿಸುವಷ್ಟು ಹುಚ್ಚು.
ಎಷ್ಟು ಸೊಗಸಾಗಿ ಕೈ ಕೈ ಹಿಡಿದು ನಡೆದು ಹೋಗುತ್ತಿದ್ದಾಗ ಪಕ್ಕದಲ್ಲಿ ಹಾದು ಹೋದ ಬೈಕ್ ಒಂದನ್ನು ಕಂಡು "ನಮ್ಮತ್ರಾನು ಒಂದಿದ್ರೆ ಎಷ್ಟ್ ಚೆಂದ ಅಲ್ವ, ಜಾಲಿಯಾಗಿ ಇಬ್ರು ಶಿಕಾರಿ ಮಾಡಬೋದಿತ್ತು.." ಎಂದ ಕೆಲವು ದಿನಗಳಲ್ಲೇ ಬೈಕ್ ಒಂದನ್ನು ಖರೀದಿಸಿ ಊರೆಲ್ಲಾ ಸುತ್ತಾಡಿದರು. ಹಾಗೆ ವರ್ಷ ಕಳೆದ ಮೇಲೆ, "ಬೈಕ್ ಅಂದ್ರೆ ಸುಸ್ತು, ಈ ಬಿಸಿಲು-ಧೂಳಿಗೆ ಹುಷಾರ್ ತಪ್ಪುತ್ತೆ, ಅಲ್ನೋಡೋ ಅವ್ರು ಎಷ್ಟ್ ಚೆನ್ನಾಗಿ ಕಾರಲ್ಲಿ ಓಡಾಡ್ತಿದಾರೆ" ಅಂದ ಕೆಲವು ದಿನದಲ್ಲೇ ಕಾರ್ ಖರೀದಿಸಿ ಸುಖಮಯ(!) ಶಿಕಾರಿ ಮಾಡಿದರು. ನಡೆದಾಡುತ್ತಾ ಇದ್ದಾಗಿನ ನಲ್ಮೆಯ ಮಾತು, ಹರಟೆ, ಕೈ ಹಿಡಿದು ನಡೆಯುತ್ತಿದ್ದಾಗ ಅಲ್ಲಲ್ಲಿ ಜರುಗುತ್ತಿದ್ದ ಬೆರಳುಗಳ ಸಲ್ಲಾಪ, ಎಲ್ಲ ತುಂಟತನ ಕ್ರಮೇಣ ಕ್ಷೀಣಿಸಿ ಖಾಲಿಯಾದದ್ದು ಆಕೆಯ ಗಮನಕ್ಕೆ ಬರಲೇ ಇಲ್ಲ. ದಿವಾಕರನಂತೂ ಆಗಾಗ ಮೆಲುಕು ಹಾಕುತ್ತಲೇ ಇದ್ದ. ಆದರೂ, ದೀಪಾಳ ಮುಖದಲ್ಲಿ ನಕ್ಕಾಗ ಮೂಡೋ ಮಿಂಚನ್ನು ನೋಡಿ ಸಿಗುತ್ತಿದ್ದ ಸಂತೃಪ್ತಿಯ ಮುಂದೆ ತನ್ನ ಚಿಕ್ಕ ಚಿಕ್ಕ ಆಸೆಗಳು ಮುಖ್ಯವೆನಿಸಲಿಲ್ಲ.
ಒಮ್ಮೆ ಕಾರಿನಿಂದ ಕಿಟಕಿಯಾಚೆ ಕಂಡ ಇನ್ನೊಬ್ಬರ ಐಷಾರಾಮಿ ಕಾರನ್ನು ನೋಡಿ, "ನೋಡಲ್ಲಿ, ನೀನೂ ಇದೀಯ, ಇದ್ಯಾವ್ದೋ ವೇಸ್ಟ್ ಕಾರ್ ಇಟ್ಕೊಂಡು, ಇನ್ನು ಎಷ್ಟ್ ದಿನಾಂತ ಹಿಂಗೇ ಇರೋದು, ನಂಗಂತ ಏನು ಕೊಡ್ಸಲ್ಲ, atleast ಅಂಥಾ ಒಂದ್ ಕಾರನ್ನಾದ್ರು ತಗೋ ಸಾಕು.." ಎಂದವಳ ಮಾತನ್ನು ಕೇಳಿ ಒಳಗೊಳಗೇ ಮರುಗಿ, ಹತಾಶೆಯನ್ನು ಮರೆಮಾಚಿ ನಗುತ್ತ "ಸರಿ ನೋಡೋಣ.." ಅಂದವನ ಇಕ್ಕಟ್ಟಿನ ಭಾವನಾಲಹರಿ ದೀಪಾಳಿಗೆ ಕಾಣಿಸಲೇ ಇಲ್ಲ..

Tuesday, October 17, 2017

ಹರ್ಷಧಾರೆ..!

ಆರ್ಥಿಕ ಇಕ್ಕಟ್ಟಿನಲ್ಲಿದ್ದೂ ಪ್ರಿಯಕರನು, ತನ್ನ ಪ್ರಿಯೆಯ ಜನ್ಮದಿನಕ್ಕೆ ಚಂದನೆಯ ಚಿನ್ನದ ಉಡುಗೊರೆ ಕೊಡಲೇಬೇಕೆಂದಿದ್ದರೂ, ಆಗದ ಪರಿಸ್ಥಿತಿ. ತಿಂಗಳುಗಳ ಮುಂಚೆ ನಿತ್ಯ ಸಂಭಾಷಣೆಯ ನಡುವೆ ಇದರ ಕುರಿತು ತಮಾಷೆಗೆ ಮಾತಾಗಿತ್ತು. ಇದ್ದ ಚಿಲ್ಲರೆಯನ್ನೆಲ್ಲಾ ಒಗ್ಗೂಡಿಸಿ ಕಡೇಪಕ್ಷವೆಂಬಂತೆ ಬೆಳ್ಳಿ ಕಾಲ್ಗೆಜ್ಜೆಯನ್ನು ಕೊಂಡನು.
ಆಕೆಯನ್ನು ಸಂಧಿಸಿದಾಗ, ಹಿಂದೇಟು ಹಾಕುತ್ತಲೆ, ಮುಜುಗರದಿ ಇದ್ದವನ ಕಂಡು ಅರ್ಥೈಸಿಕೊಂಡವಳು, "ಹೂ ಇದ್ದರೂ ಸಾಕು ಕೊಡೊ" ಎಂದವಳ ಕಂಡು ಖುಷಿಯಲ್ಲಿ ಗೆಜ್ಜೆ ತೊಡಿಸಿದನು.
ಆತನ ಸಂಭ್ರಮ ನೋಡಿ ಅವಳಿಗೂ ಅತೀವ ಖುಷಿ.
ಗೆಜ್ಜೆ ತೊಡಿಸಿ ಸಂತೃಪ್ತಿಯ ನಗೆ ಬೀರುತ್ತಾ ತಲೆ ಎತ್ತಿದವನ ಮುಖವನ್ನು ಬೊಗಸೆಯಲ್ಲಿ ಹಿಡಿದು ಮುದ್ದಾಗಿ ಹೇಳಿದಳು, "ಗೆಜ್ಜೆ-ಬಂಗಾರಕ್ಕಿಂತ ನಿನ್ನ ನಗುವೇ ನನಗೆ ಅಮೂಲ್ಯ ಉಡುಗೊರೆ".
ಆ ಮಾತಿನಿಂದ ಮೌನ ಆವರಿಸಿ ಹರ್ಷಧಾರೆಯ ಶುರುವಾತು; ಇಬ್ಬರ ಕಣ್ಣಲ್ಲೂ ಹಾಗೂ ಪುಳಕಿತಗೊಂಡ ಅಲ್ಲೇ ಹಾದು ಹೋಗುತ್ತಿದ್ದ ಮೋಡದಲ್ಲೂ..

Sunday, October 15, 2017

ಜೀವನ ಧಾತು..

ಅಂದದ ಚಂದದ ಭಾವುಕತೆ
ಒಮ್ಮೆಲೆ ಕಂಡರೆ ನೀನು,
ತಾಕಿಸಿ ತೋಳನು ಸಾಗು ಜೊತೆ
ನಾಚಲಿ ಭೂಮಿ-ಬಾನು.
             ಸೋಜಿಗಕೇನೇ ಈರ್ಷೆಯು ಮೂಡೊ
             ಸೌಂದರ್ಯವು ನಿಂದು,
             ಅಗಲಿಕೆಯನ್ನೇ ಅಸುನೀಗಿಸುವ
             ನೀನೇ ಜನ್ಮಬಂಧು.
ಕಾಂತನು ನೀನು ಕಾಂತೆಯು ನಾ
ಎಂಬ ಮನದ ಮಾತು,
ಆಡಿದ ಅಂದೇ ಉದಯಿಸಿತು
ಹೊಸಜೀವನ ಧಾತು..
ಹೊಸಜೀವನ ಧಾತು..

ಕಂಬಳಿಯ ನಿವೇದನೆ..!

ನಲ್ಲೆ ಬಂದಳೆಂದು ಒಲ್ಲೆ ಎನ್ನದಿರು ನನ್ನ,
ನಾ ಮೂಲೆಗುಂಪಲ್ಲವೆಂದೂ...
ಮಳ್ಳಿಯೋ, ಆಕೆ ಬೆಳಕಿನ ಬಳ್ಳಿಯೋ,
ದೂಡದಿರು ನೀ ನನ್ನನೆಂದೂ..
             ಎಷ್ಟೆಲ್ಲ ಕನಸುಗಳ ಜೊತೆಯಲ್ಲೆ ಕಂಡಿಹೆವು,
             ಎಂಥೆಂಥ ಘಳಿಗೇಲಿ ನಾವಿಬ್ರೂ ಅಪ್ಪಿದೆವು,
             ನೀ-ನನಗೆ ನಾ-ನಿನಗೆ ಎಂಬಂತೆ ಕಳೆದಂಥ
             ಮಧುರಾತಿ ಮಧುರವಾ ಕಾಲವಿತ್ತು..
ನಿನ್ನೆಲ್ಲಾ ಕನವರಿಕೆ ಗುಟ್ಟನ್ನು ಬಚ್ಚಿಟ್ಟ
ಜೀವದಾ ಗೆಳೆಯ ನಾನಾಗಿದ್ದೆನಾಗ,
ಇರುಳಿನಾ ಕೀರಲಿಗೆ ಭಯದಿ ನನ್ನಪ್ಪಿದ್ದೆ
ನಿಂಗೇನು ತಿಳಿದಿತ್ತು ನಂಗಾದ ಆವೇಗ..
             ಕನಸಿಂದ ಏದುಸಿರು ಬಿಟ್ಟಿದ್ದೆ ನೀನಂದು
             ನಂಗೂನು ಉದ್ವೇಗ ಆಗಿದ್ದು ಖಾತ್ರಿ,
             ಜೀವವೊಂದಿದ್ದಿದ್ರೆ ತೋರಿಸಿಯೆ ಬಿಡ್ತಿದ್ದೆ
             ಮಧುಚಂದ್ರವೆಂಬಂಥ ಜಾಗರಣೆ ರಾತ್ರಿ..

ಗೆಜ್ಜೆಯ ಕರೆ..!

ಕಂದಮ್ಮನು ತಾ ಅಮ್ಮನ ಕರೆಯಲು
ಕಾಲ್ಗೆಜ್ಜೆಯ ದನಿ ಮೊಳಗಿಸಿರೆ,
ಅಮ್ಮನಿಗೇನೊ ಆ ದನಿಯಂತು
ಸಂಗೀತದ ರಸದೌತಣವು..
           ಮಗಳು ಮನೆಯಲ್ಲಿ ಆಟವನಾಡುತ
           ಪುಟಿಯಲು ಗೆಜ್ಜೆಯ ಮಾರ್ದನಿಯು,
           ಅಪ್ಪನಿಗೇನೊ ಎಲ್ಲಿಲ್ಲದ ಖುಷಿ
           ಅದುವೇ ನಾಟ್ಯದ ಅನುಭವವು..
ಪ್ರಿಯಕರ ಪ್ರೇಯಸಿ ಪಾದವ ಪಿಡಿದು
ಗೆಜ್ಜೆಯ ತೊಡಿಸುತ ಮೋಹಿತನು,
ಪ್ರೇಯಸಿ ನಾಚುತ ಬೆರಳಲಿ ಬರೆಯಲು
ಪ್ರಿಯಕರನೆದೆಯಲಿ ರಿಂಗಣವು..
            ನಟರಾಜನು ತಾ ನೂಪುರ ತೊಟ್ಟು
            ನಾಟ್ಯದ ಮೋದನ ಉಣಿಸಿದನು,
            ರಾಗದ-ಲಯಕೆ ಲಯದಾ-ತಾಳಕೆ
            ಜೀವವ ತುಂಬಿ ತಣಿಸಿದನು...
            ಧರೆಯನು ಚೇತನಗೊಳಿಸಿದನು..

ನೂಪುರ ನಾದ..!

ನೂಪುರ ಸಿಂಚನ ಮೈ ರೋಮಾಂಚನ
ಸಂಸ್ಕೃತಿ ಶೋಭೆ ವಿರಚಿತವು;
ನಾಟ್ಯದ ಸೊಬಗನು ಇಮ್ಮಡಿಗೊಳಿಸೊ-
ಸಾಧನ ಕೇಳಲು ಬಲುಹಿತವು..
ಸಂಗೀತವನೇ ಮುದಗೊಳಿಸುತಲಿ
ಕಲೆಯ ಔತಣವ ಉಣಬಡಿಸುತಲಿ
ನಾಟ್ಯದ ಶೋಭೆಯ ಪಸರಿಸಿ ಮೆರೆಯುವ
ನೂಪುರವದುವೆ ಸೋಜಿಗವು,
ನಾದದಿ ಪರವಶಗೊಳಿಸುತ ಕುಣಿಯುವ
ಗೆಜ್ಜೆಗೆ ಶರಣು ಈ ಜಗವು..