ಕಡಲ ಮೇಲಿನ ಅಲೆಗಳವು
ಚಂದಿರ ಭುವಿಗೆ ಬರೆದ ಕವಿತೆಯ ಸಾಲು,
ತೀರದಪ್ಪುಗೆಯ ನೀಡೆ ತಂದಿಹನು
ಭಾವದೇರಿಳಿತಗಳ ಬೆಚ್ಚನೆಯ ಶಾಲು..
ಒಂದರ ಹಿಂದೆ ಸಾವಿರ ಸರದಿ
ಒಲೈಸೋ ಆಸೇಲೂ ಬೆಂಬಿಡದ ಸವಾಲು,
ಕಂದರದ ಹಂದರದಡಿ ತುಡಿವ-
ಅಲೆಗಳವು ಭುವಿಗಾಲಿಂಗನದ ರುಮಾಲು..
ಸೂರ್ಯಾಸ್ತದ ಆದಿಗೆ ಶುರುವು
ಶಶಿ ಭುವಿಯ ವರಿಸುವ ಕಮಾಲು,
ಅಲೆಗಳೆತ್ತರವು ಧುಮ್ಮಿಕ್ಕಲು
ಅನುರಣಿಸಿದೆ ಭಾವೋತ್ಕಟತೆಯ ಖಯಾಲು.
ಚಂದಿರ ಭುವಿಯ ಮೈಹೊಳಪಿಗೆ
ಬೆಳಗಿದನು ಕಣ್ಮಿಂಚಿನ ಕಂದೀಲು;
ಆಯಸ್ಕಾಂತೀಯ ಸೆಳವಿಗೆ,
ಆಮಂತ್ರಣದ ನಲಿವಿಗೆ -
ರಂಗೋಲಿ ಬಿಡಿಸಲು ಭೂರಮೆಯ ಅಂಗಾಲು
ಅಲೆಗಳಪ್ಪಳಿಸಲು ಕಡಲ ಒಡಲ ಮಡಿಲೆಲ್ಲವು ಕಂಗಾಲು..

