ಯೋಗಸಾಹಿತ್ಯ

ಯೋಗಸಾಹಿತ್ಯ
ಭಾವನೆಗಳ ಅಂಗಳದಲಿ ಪದಗಳ ಓಡಾಟ...!!

Friday, September 18, 2015

ಋತುಗಾಲದೊಡತಿ..!!!

ಎಷ್ಟು ಋತುಗಳ ದರ್ಶನವೋ
ನಿನ್ನ ಮುಖಭಾವದಲ್ಲಿ..!?

ಕೋಪ ಬಂದಾಗ ಬೇಸಿಗೆಯು,
ಉರಿವ ಕಣ್ಣು ಸಿಡಿಮದ್ದು;
ತಲ್ಲಣಿಸೋ  ನಿನ್ನ ಯುದ್ಧ ಭೂಮಿಕೆಯು
ನೋಡಲೇಕೋ ಭಲೆ ಮುದ್ದು..

ದುಃಖತಪ್ತಳು ನೀನಾದರೆ ಅದೇ
ಜಡಿಯ ಮಳೆಗಾಲವಂತೆ;
ಮಗುವಿನಾ ತೆರದಿ ಮುಗ್ಧತೆ ಮೂಡಿ
ಚೆಂದ ಗೊಂಬೆಯಾದಂತೆ..

ನಗುವಿನಾ ಸಣ್ಣ ಸಿಂಚನವು ಸಾಕು
ನಲ್ಮೆಯ ವಸಂತದಂತೆ;
ಹೊಸ ಕಳೆ ಹೊಸತು ಭಾವ ಭಂಡಾರ
ಜೀವ ತಳೆದು ನಿಂತಂತೆ..

ಏನೂ ನುಡಿಯದ ಮುನಿಸು ರೂಪವದು
ಕೊರೆವ ಚಳಿಗಾಲದಂತೆ;
ಮಾತನಾಡದೆ ಕಾಡೊ ಘಳಿಗೆಯದು
ರಮಣೀಯ ತಪನೆಯಂತೆ..

ಎಷ್ಟು ಋತುಗಳ ದರ್ಶನವೋ
ನಿನ್ನ ಮುಖಭಾವದಲ್ಲಿ..!?
ಸಂಘಟಿತ ಋತು ಪರ್ವವಿಹುದು
ನಿನ್ನ ಸಾಂಗತ್ಯದಲ್ಲಿ..ನಿನ್ನ ಸಾಂಗತ್ಯದಲ್ಲಿ..

Sunday, September 13, 2015

ಸಂಗೀತ ಶೋಭಿತೆ..ನನ್ನಾಕೆ..!!

ಚಿರಂತನ ಗಾನ ನಿನ್ನಯ ನಗುವಿನ 
ರಾಗವ ಬೆರೆಸಿ ಮೂಡುತಿದೆ;
ಪರವಶಗೊಳಿಸುವ ಚಂದದ ಮೋಹಕ
ಸುಂದರ ಸ್ವರಗಳ ಪೋಣಿಸಿದೆ. 
ಅಮಲಿನ ರೂಪದಿ ಸಂಗೀತವನು 
ನಿನ್ನಯ ಕಂಗಳು ಚಿಮ್ಮಿಸಿದೆ;
ಸೋಜಿಗವೆಂಬ ಇಂಪದು ಒಂದು
ನಾಭಿಯ ಮೂಲದಿ ಉದಿಸುತಿದೆ.
ಕಣ್ಣುಬ್ಬದುವೆ ತಕಿಟ ಧೀಂ ತನನ
ತಾಳದ ತರದಲಿ ನರ್ತಿಸಿದೆ;
ಕೇಶ ರಾಶಿಯದು ಸುಲಲಿತ ಗಾನದ
ಮೋಡಿಗೆ ಸಿಲುಕಿ ತೇಲುತಿದೆ.. 
ಕರದಲಿ ರಿಂಗಣ ಬಳೆಗಳ ಸದ್ದು
ಹಾಡಿನ ಶ್ರುತಿಯನು ಸರಿಪಡಿಸಿ,
ನನ್ನೆದೆ ತಾಳದ ಲಯ-ಗತಿಯನ್ನು
ಹಿಮ್ಮೇಳಕೆ ಸರಿದೂಗಿಸಿದೆ,
ಸಮ್ಮಿಲನಕೆ ಪ್ರತಿಪಾದಿಸಿದೆ..