ಯೋಗಸಾಹಿತ್ಯ

ಯೋಗಸಾಹಿತ್ಯ
ಭಾವನೆಗಳ ಅಂಗಳದಲಿ ಪದಗಳ ಓಡಾಟ...!!

Thursday, November 15, 2018

ದೀಪಾವಳಿ..!!

ಯಾವುದೋ "ದೀಪ",
ತಾನು "ಜ್ಯೋತಿ"ಯಾಗಿ, ಬಿಡದೆ "ಪ್ರಜ್ವಲ"ವಾಗಿ;
"ಪ್ರಣತಿ-ಪ್ರಾಂಜಲಿ-ದೀಪಿಕ", ಹೀಗೆ ಎಷ್ಟೆಷ್ಟೋ ರೀತಿಯಲ್ಲಿ
ಮನದ ಮಂದಿರವನ್ನು ಬೆಳಗಿ ಹಾವಳಿ ಕೊಟ್ಟ
ನೆನಪಿನ ದ್ಯೋತಕವೇ ದೀಪಾವಳಿ..

ಸಂಧ್ಯಾಕಾಲದ ಸ್ಫೂರ್ತಿ..!!

ಹಸಿರ ಚೈತನ್ಯ ಉದುರಿತೆ,
ಬೋಳು ಮರವೆ ನಾನೀಗ!?
ಗೋಧೂಳಿ ಸಮಯದಲಿ
ಅಂತ್ಯದ್ದೇ ಆವೇಗ..!
ಬರಡಾದ ನನ್ನನ್ನು ಹಂಗಿಸುವ ಮನಸೇಕೆ?
ಓ ರವಿಯೆ ನಿಂಗೇನು,
ಮರುಬೆಳಗು ಇಹುದಂತೆ..!

ಕೆಂಪೇರಿದ ಬಾನ ಮರೆಯಲಿಯ ಸೂರ್ಯ
ತಾ ನಗುತ ಮರವನ್ನು ಒಲುಮೆಯಲಿ ನೋಡಿ;
ಮುಳುಗುತಲಿ, ಚೈತನ್ಯ ಭವಿಸುತಲಿ ಉಸುರಿದನು;

ನಾ ದಿನವೂ ಮುಳುಗುವುದೇ ಸ್ಫೂರ್ತಿಯ ಧಾತು -

ಹೊಸತದುವೆ ಸಂಭವಿಸಿ ನೂತನವು ಜನ್ಮಿಸಿ
ಇರುಳಿನಾ ನಂತರವೇ ಬೆಳಗಿಹುದ ತಿಳಿಸಿ,
ಸ್ಥೈರ್ಯವನು ತರಿಸಿ ನಂಬುಗೆಯ ಇರಿಸಿ
ಭರವಸೆಗೆ ಭವಿತವು ಇರುವುದೆನ್ನಲು ಖಾತ್ರಿ..

ರಂಗಿನಾ ಮತ್ತು..!

ಪಡುವಣದ ಮೈಯೆಲ್ಲಾ ಹೊಂಬಣ್ಣದ ಬಿಂಬ,
ಬಿಂಬವಷ್ಟೇ ಅಲ್ಲವದು..ಬಾನ ಮೆರುಗಿನ ಜಂಭ..!
ಪ್ರಕೃತಿಯು ಆಕಳಿಸಿ ನಿದ್ದೆಗೆ ಜಾರೋ ಹೊತ್ತು,
ಉಣಬಡಿಸಿ ಬೀಗುತಿದೆ ರಂಗಿನಾ ಮತ್ತು...

Wednesday, September 12, 2018

ನೀನೆ ತಾನೆ ನನ್ ಅದ್ಭುತ..!


ನನ್ನ ಊಹೆಗಳನೆಲ್ಲ ದಾಟುತಲಿ
ಭಾವ ಶಿಖರ ನನ್ನೊಂದಿಗೇರುತಲಿ
ಸಂಗ ಸಹಚರಿಸಿ ಚಿಂತೆ ದೂಡುವ
ನೀನೆ ತಾನೆ ನನ್ ಅದ್ಭುತ...
                 ಕಂಡ ಕನಸ ಸಂಪನ್ನವಾಗಿಸುತ
                 ಎಲ್ಲ ಮಾತಲಿಂಪನ್ನೆ ಆಲಿಸುತ
                 ಬಾಳ ಪಥದಲ್ಲಿ ಮುದವ ತುಂಬಿರುವ
                 ನೀನೆ ತಾನೆ ನನ್ ಅದ್ಭುತ...
ನಿನ್ನ ಗುಣವದಾಶ್ಚರ್ಯ ಚಿಹ್ನೆ
ನಿನ್ನ ನಗುವೆ ನೆಮ್ಮದಿಯ ಸೋನೆ
ಸಕಲ ಗೆಲುವಿಗೆ ಸ್ಫೂರ್ತಿಯಾಗಿರುವ
ನೀನೆ ತಾನೆ ನನ್ ಅದ್ಭುತ...
                 ದೈವವೇ ಹರಸಿದ ವರದಂತೆ ಸಂಭವಿಸಿ
                 ಅನುಗಾಲ ಒಳಿತಿನ ನಂಬಿಕೆಯನಿರಿಸಿ
                 ಚೈತನ್ಯ ಚಿಲುಮೆಯ ಧಾತುವಂತಿರುವ
                 ನೀನೆ ತಾನೆ ನನ್ ಅದ್ಭುತ...
                 ನೀನೇ ತಾನೇ ನನ್ ಅದ್ಭುತ...

Monday, August 27, 2018

ಕಾಡದ ಕ್ಷಣಿಕ ಕೋಪ..

ಕಡಲ ಹೊರಗೆಲ್ಲ ದಾಂಧಲೆಯ ಅಲೆ,
ಒಳಗೆ ನೆಲೆಸಿಹುದು ಶಾಂತತೆಯ ಸೆಲೆ;
ನಿನ್ನ ಮೇಲಿನ ನನ್ನ ಕೋಪವೂ ಕೂಡ -
ಆಗಾಗ ಉಕ್ಕುವುದದೇನೊ ಸತ್ಯ;
ಆದರೂ ಒಡಲಾಳದಲ್ಲಿರುವಂತ
ಒಲವಿನಗಾಧತೆಯ ಕಾಂತಿಗಿಲ್ಲ ಎಲ್ಲೆ..
ನಾ ನಿನ್ನ ನಲ್ಲ, ನೀ ನನ್ನ ನಲ್ಲೆ
ಕಾಡೋ ಕೋಪದಸ್ತಿತ್ವವದು -
ಇಂದಿಗೂ ಸುಳ್ಳೆ, ಎಂದೆಂದಿಗೂ ಸುಳ್ಳೆ..

ವರಮಹಾಲಕ್ಷ್ಮಿ ವ್ರತ..!

ಆದಿ ಲಕ್ಷ್ಮಿಯಿಂದ ಮೊದಲಾಗಿ ,
ಧಾನ್ಯ ಲಕ್ಷ್ಮಿಯಿಂದ ಹಸಿವು ನೀಗಿ,
ವಿದ್ಯಾ ಲಕ್ಷ್ಮಿಯ ಆಶೀರ್ವಾದ ಸದಾ ಇದ್ದು,
ಧ್ಯೇಯ ಮುಟ್ಟಲು ಗಜ ಲಕ್ಷ್ಮಿಯು ಶಕ್ತಿ ನೀಡಿ,
ಕಷ್ಟ-ಕಾರ್ಪಣ್ಯ ಎದುರಿಸಲು ಧೈರ್ಯ ಲಕ್ಷ್ಮಿಯು ಕೃಪೆ ತೋರಿ,
ಸಂಸಾರ ನೌಕೆಯಲಿ ಸಂತಾನ ಲಕ್ಷ್ಮಿಯು ಒಲಿದು,
ನಗು-ನೆಮ್ಮದಿ ಜೀವನಕೆ ವಿಜಯ ಲಕ್ಷ್ಮಿಯು ಬುನಾದಿಯಾಗಿರಲು,
ಧನ ಲಕ್ಷ್ಮಿಯು ತಾನಾಗೇ ಒಲಿವುದು ಖಾತ್ರಿ ಎಂಬ ನಂಬಿಕೆಯಿಂದ-
ಅಷ್ಟ ಲಕ್ಷ್ಮಿಯರ ಪೂಜಾ ದ್ಯೋತಕವಾದ
ವರಮಹಾಲಕ್ಷ್ಮಿ ವ್ರತದ ಶುಭಾಶಯಗಳು..

Sunday, July 15, 2018

ವೀರೋಚಿತ ವೇದನೆ..!!

ನಿದಿರೆಯು ಎಲ್ಲ ದೂರಾಗಿಹುದು
ಕಾಣದ ತೀರದ ಲೋಕದೊಳು,
ವಿರಹದ ಮದಿರೆ ನಶೆ ಏರಿಹುದು
ತೀರದ ಮೋಹದ ಶಾಖದೊಳು..
ಬಂದೊಮ್ಮೆ ನನ್ನಪ್ಪಲು ಒಲ್ಲೆ ಎನ್ನುತ ನೀನು ಕಾಡಿರುವೆ,
ಯಾರಿಗೂ ಕೇಳದ ಹಾಗೆ ನಿನ್ನಯ ಒಡನಾಟವ ನಾ ಬೇಡಿರುವೆ..
ಲೋಕದಲೆಲ್ಲ ನಾನೇ ವೀರನು
ಜ್ವಲಿತ ವಿರಹದಾ ಕದನದಲಿ,
ಅದಕೇ ದಕ್ಕಿದೆ ವೀರೋಚಿತದಿ
ಬಳುವಳಿ ವೇದನೆ ರೂಪದಲಿ..

Wednesday, July 4, 2018

ಖಾತ್ರಿ..!

ಸಲಿಗೆಯ ಸುಲಿಗೆ ಮಾಡೆಂದಿಹುದು ನಿನ್ನ ಕಣ್ಣೋಟ,
ಮನವು ಮಾರ್ದನಿಸಿಹುದು ತೋರೆಂದು ಕಳ್ಳಾಟ;
ತಪಿಸೊ ತಾರುಣ್ಯಶೀಲ-
ನಾನಂತು ನಿನ್ನ ಲೋಲ;
ಪ್ರೇಮ ದಾರ್ಶನಿಕನಾದೆ ನೀ ಕಂಡ ಮೇಲೆ..
               ಅನಾಹತ ಭಾವವ ಬೀರೆಂದಿಹುದು ನಿನ್ನ ಒಡನಾಟ,
               ಒಲವು ಭೋರ್ಗರಿಸಿಹುದು ಇರೆ ನಿನ್ನ ಸುಳಿದಾಟ;
               ಅರಳೊ ಕೆಂದಾವರೆ ನೀನು-
               ಮುಂಜಾವು ರವಿ ನಾನು;
               ಪ್ರೇಮ ಸಂಜಾತ ಖಾತ್ರಿ ನೀ ಸಿಕ್ಕ ಮೇಲೆ..

Tuesday, March 27, 2018

ಭಾವಸೇತು..

ಸೂಟಿ ಕಣ್ಣದುವೇ ಪ್ರೀತಿ ಮಾರ್ದನಿಯು
ಕುಡಿನೋಟವೊಂದು ಸೂಜಿಗಲ್ಲು;
ಮೀಟಿ ಹೃದಯದ ವೀಣೆ ತಂತಿಯು
ನೆನಪೇ ಸಂಗೀತ ಧಮನಿಯಲ್ಲೂ..
          ನಾನು ನಿನ್ನೊಳಗೆ ಮೇಳಗೊಂಡಿರಲು
          ಮಳೆಗೆ ಭುವಿಗಿಳಿಯೆ ಸ್ಫೂರ್ತಿಧಾತು;
          ಚಂದ ಮಕರಂದ ನಿನ್ನ ಮಾತಿರಲು
          ನಮ್ಮ ಹೃದಯಕದೆ ಭಾವಸೇತು..

Saturday, March 3, 2018

ಮಿಲನದ ಹಾಡು..

ಧಮನಿಯ ದನಿಯದು ದೂರುತಿದೆ
ದೂರವು ದಾರುಣವೆನ್ನುತಿದೆ..
ದೇವಿಯು ನೀನು ದಾಸನು ನಾನು
ಮುತ್ತಿನ ಧೂಪವು ಕಾಯುತಿದೆ..
       ಒಲವಿನ ಅಪ್ಪುಗೆ ದೇಣಿಗೆ ನೀಡು
       ಸೆಳೆತದ ದಾಳಿಯ ಸಂಚನು ಹೂಡು
       ದೀನನು ನಾನು ಕರುಣಿಸಿ ಬೇಗ
       ಸನಿಹದ ಸರಪಳಿ ಬಿಗಿವುದ ನೋಡು..
       ಅಲ್ಲೇ ಶೃತಿಸಲಿ ಮಿಲನದ ಹಾಡು..

Friday, March 2, 2018

ರಗ್ಗಿನೊಡನೆ ಸಂವಾದ..

ಚಳಿಯು ಮದನ ರಗ್ಗು ರತಿಯು
ಮಾತುಕತೆಯಲಿ ಬಿರುಸಿದೆ;
ಮಾತಿನ ಕಥೆಗೋ, ಕಥೆಯ ಮಾತಿಗೋ,
ಶಾಖವಂತು ಆವರಿಸಿದೆ..

==========================================
ಕಾಳಿದಾಸ ಹೇಳಿದನಾಗ, ಅರ್ಥ ಅಂತೂ ಆಗಿರ್ಲಿಲ್ಲ;
ಕಮಲೇ ಕಮಲೋತ್ಪತ್ತಿಹಿ..
ರಗ್ಗೊಡನೆ ಸಂವಾದಕ್ಕಿಳಿದೆ ಈಗ, ಅರ್ಥ ಆಯ್ತು ನೋಡಿ;
ಒಳಗೇ ಶಾಖೋತ್ಪತ್ತಿಹಿ..

==========================================

ಚಳಿ-ಬೆಳಕಿನ ಕಣ್ಣಾಮುಚ್ಚಾಲೆ..

ಹೊರಗೆ ಚಳಿಯ ತಡೆಯಲಾಗದೆ
ಬೆಳ್ಳಿ ಬೆಳಕು ನರಳಿದೆ,
ಬೆಚ್ಚಗಿರಲು ಮನೆಯ ನುಸುಳೇ
ಹೊರಗೆ ಮಬ್ಬಾವರಿಸಿದೆ..
ಸುತ್ತಲೆತ್ತಲೂ ಮಬ್ಬುಗತ್ತಲು
ತಂಡಿ ಚಳಿಯದೇ ಆರ್ಭಟ;
  ಬೆಳಕು ತಾನು ನಗುವ ಬೀರಿದೆ
ಮನೆಯ ಒಳಗಡೆ ನೆಲೆಸುತಾ..
ಚಳಿಯು ಅಷ್ಟು ಸುಲಭ ಬಿಡುವುದೇ!?
ಬೆಳಕ ಬೆನ್ನು ಹತ್ತಿದೆ;
ಸೊಂದಿಗೊಂದಿಯ ಬಿಡದೆ ತೂರುತ
ಸೂರಿನೊಳಗಡೆ ನುಸುಳಿದೆ..
ಬೆಳಕು ಬೆದರಿ ಧೈರ್ಯ ಚದುರಿ
ರಗ್ಗಿನಾಸರೆ ಪಡೆದಿದೆ;
ಸೂರಿನೊಳಗೂ ಮಬ್ಬು ಕವಿಯುತ
ಬೆಳಕು ರಗ್ಗೊಳಗವಿತಿದೆ..
ಕೊನೆಗೂ ಬೆಚ್ಚಗೆ ಮಲಗಿದೆ..

Monday, February 19, 2018

ಬೊಗಸೇಲಿ ವದನ..

ಕೊಳದ ಅಂಚಲ್ಲಿ ಚಂದ್ರನ ಬಿಂಬ;
ತಿಳಿಯನು ಕದಡದೆ ಬೊಗಸೇಲಿ ಮೊಗೆದೆನು,
ಆಹಾ! ಅದುವೇ ಪರಮಸುಖ..
ಹಾಗೇ ಸಂಚಲ್ಲಿ ಚುಂಬಿಸಲೆಂಬ;
ಖುಷಿಯ ಕನಸಿಂದ ಎಚ್ಚರಗೊಂಡೆನು,
ಆಗ ತಿಳಿದೆನದು ನಿನ್ನ ಮುಖ.!
ಅಷ್ಟು ಹತ್ತಿರದಿ ನೋಡೆ ಕಣ್ ಪಾಪೆ
ಕದಲದೆ ಸ್ತಂಭಿಸಿ ದಿಟ್ಟಿಸಿತು;
ಇನ್ನು ತಡೆಯುವಿಕೆ ಮಾತೇ ಇಲ್ಲ
ಎದೆಯ ಬಡಿತವನೇ ಹೆಚ್ಚಿಸಿತು...

ಅನಿವಾಸಿ.!!

ಒಲುಮೆಯ ನಗರದ ಭಾವಶಿಖರವ
ನಿನ್ನೊಡನೇರಿದ ಸಹವಾಸಿ ಆಗ,
ಹೊಸತು ಅಧ್ಯಾಯ ಶುರುವಿನ ಘಳಿಗೆ
ನಿನ್ನೊಡನಿರದಂಥ ಅನಿವಾಸಿ ಈಗ..

Saturday, February 17, 2018

ನಾ ಏನ್ ಮಾಡ್ಲಿ!!?

ಹುಣ್ಣಿಮೆ ಚಂದ್ರನ ಸೆಳೆತಕೆ ಸಿಕ್ಕು
ತಿಂಗಳಿಗೊಮ್ಮೆ ಸಾಗರದಲೆಗಳು
ನಭದೆಡೆ ಪುಟಿಯಲು ಕಾರಣ ಕೇಳೆ
ನುಡಿದುದು ಇಷ್ಟೆ - "ನಾ ಏನ್ ಮಾಡ್ಲಿ!!?"
ನಿನ್ನಯ ಕಣ್ಗಳು ಆಯಸ್ಕಾಂತ
ಪ್ರತಿದಿನ ಹುಣ್ಣಿಮೆಯಂದದಿ ಕಾಡೆ
ಕನಸಲಿ ಮುಳುಗಿದ ನನ್ನನು ಕೇಳೆ
ನುಡಿವುದೂ ಅಷ್ಟೇ - "ನಾ ಏನ್ ಮಾಡ್ಲಿ!!?"

Friday, February 16, 2018

ಒನಪು..

ಭಾವದಾ ಕಡಲದುವೆ ಭೋರ್ಗರೆದು ಚಿಮ್ಮುತಿದೆ
ಹುಣ್ಣಿಮೆಯ ಶಶಿಯಂತೆ ನಿನ್ನ ನೆನಪು;
ನಾ ಮದನ ನೀ ರತಿಯು, ಉನ್ಮಾದದೇ ಚಿತ್ತ-
ದಾಳಿಯನು ಮಾಡಿಹುದು ನಿನ್ನ ಒನಪು..

ನೀನ್ ಜತಗಿದ್ರೆ ಸಾಕು..

ನಾನ್ ಎಂತ ಮಾಡ್ಲಿ ಹೇಳು
ನನ್ ಕಷ್ಟ ನೀ ಕಾಣೆ!!
ಉಸ್ರುಸ್ರಲ್ಲೂ ನಿನ್ ಗೆಪ್ತೀನೇ
ಬರ್ತೈತ್ ನೋಡ್ ನಿನ್ನಾಣೆ..
ಒತ್ತಾರೆದ್ದು ದೇವುರ್ ಪಟವ ನೋಡ್ಬುಟ್ ನೆನಿಯೋದ್ ನಿನ್ನೇ,
ಸುಮ್ ಸುಮ್ಕಾದ್ರೂ ಫೋನ್ ಹಚ್ಬುಡ್ತೀನ್ ನೆನ್ಪಾಗ್ತೀಯ ಶಾನೆ..
ಒಸಿ ಕಷ್ಟಾದ್ರೂ ಆಗ್ಲಂತೇಳಿ ಹಂಗೆ ನಕ್ಬುಡ್ ಸುಮ್ಕೆ,
ಪರ್ ಪಂಚಾನೆ ಗೆದ್ಬುಡ್ತೀನಿ ನೀನ್ ಜತಗಿದ್ರೆ ಸಾಕೆ..

Saturday, February 3, 2018

ಪ್ರೀತಿ ಸೋನೆ..

ಚಳಿಗಾಳಿಯಾ ನಡುವೆ ಸುಳಿದಂತ ನೆನಪು
ಕಿರುಶಾಖ ‌ಸೋಕಿಸಿ ಸಾಗಿಹೋಯ್ತು;
ತೋಳ್ತಾಕಿಸಿ ಕುಳಿತು ಪಿಸುಗುಟ್ಟಿದ ಮಾತು
ರಿಂಗಣಿಸಿ ಪ್ರೀತಿಯಾ ಸೋನೆಯಾಯ್ತು..

blood moon..

ಕಿರುಬೆರಳ ಹಿಡಿಯುತಲಿ ನಾವಿಬ್ಬರೂ ಸಾಗೇ
ಸ್ವರ್ಗಕ್ಕೇ ಕಿಚ್ಚಚ್ಚೊ ಆಸೆಯಾಯ್ತು,
ನಮ್ಮನ್ನು ನೋಡುತ್ತ ಹೊಟ್ಟೆಕಿಚ್ಚಲಿ ಚಂದ್ರ
`blood moon`u ಆದಂತೆ ಭಾಸವಾಯ್ತು....

ಅಮಲಿನ ಸಪಸ

ಸ್ವರಗತಿಯ ರಾಗದಲಿ ಸಪಸ ಹಾಡಿದರೂ
ನಿನ್ನ ದನಿಯ ಇಂಪೆಲ್ಲಿ ಬರುವುದುಂಟು..!!
ಎಲ್ಲೆಲ್ಲೂ ಹೂ ಘಮಲು ಸಿಂಪಡಿಸಿ ಹರಡಿದರೂ
ನಿನ್ನುಸಿರ ಅಮಲೆಲ್ಲಿ ಇರುವುದುಂಟು..!!?