ಯೋಗಸಾಹಿತ್ಯ

ಯೋಗಸಾಹಿತ್ಯ
ಭಾವನೆಗಳ ಅಂಗಳದಲಿ ಪದಗಳ ಓಡಾಟ...!!

Thursday, November 15, 2018

ದೀಪಾವಳಿ..!!

ಯಾವುದೋ "ದೀಪ",
ತಾನು "ಜ್ಯೋತಿ"ಯಾಗಿ, ಬಿಡದೆ "ಪ್ರಜ್ವಲ"ವಾಗಿ;
"ಪ್ರಣತಿ-ಪ್ರಾಂಜಲಿ-ದೀಪಿಕ", ಹೀಗೆ ಎಷ್ಟೆಷ್ಟೋ ರೀತಿಯಲ್ಲಿ
ಮನದ ಮಂದಿರವನ್ನು ಬೆಳಗಿ ಹಾವಳಿ ಕೊಟ್ಟ
ನೆನಪಿನ ದ್ಯೋತಕವೇ ದೀಪಾವಳಿ..

ಸಂಧ್ಯಾಕಾಲದ ಸ್ಫೂರ್ತಿ..!!

ಹಸಿರ ಚೈತನ್ಯ ಉದುರಿತೆ,
ಬೋಳು ಮರವೆ ನಾನೀಗ!?
ಗೋಧೂಳಿ ಸಮಯದಲಿ
ಅಂತ್ಯದ್ದೇ ಆವೇಗ..!
ಬರಡಾದ ನನ್ನನ್ನು ಹಂಗಿಸುವ ಮನಸೇಕೆ?
ಓ ರವಿಯೆ ನಿಂಗೇನು,
ಮರುಬೆಳಗು ಇಹುದಂತೆ..!

ಕೆಂಪೇರಿದ ಬಾನ ಮರೆಯಲಿಯ ಸೂರ್ಯ
ತಾ ನಗುತ ಮರವನ್ನು ಒಲುಮೆಯಲಿ ನೋಡಿ;
ಮುಳುಗುತಲಿ, ಚೈತನ್ಯ ಭವಿಸುತಲಿ ಉಸುರಿದನು;

ನಾ ದಿನವೂ ಮುಳುಗುವುದೇ ಸ್ಫೂರ್ತಿಯ ಧಾತು -

ಹೊಸತದುವೆ ಸಂಭವಿಸಿ ನೂತನವು ಜನ್ಮಿಸಿ
ಇರುಳಿನಾ ನಂತರವೇ ಬೆಳಗಿಹುದ ತಿಳಿಸಿ,
ಸ್ಥೈರ್ಯವನು ತರಿಸಿ ನಂಬುಗೆಯ ಇರಿಸಿ
ಭರವಸೆಗೆ ಭವಿತವು ಇರುವುದೆನ್ನಲು ಖಾತ್ರಿ..

ರಂಗಿನಾ ಮತ್ತು..!

ಪಡುವಣದ ಮೈಯೆಲ್ಲಾ ಹೊಂಬಣ್ಣದ ಬಿಂಬ,
ಬಿಂಬವಷ್ಟೇ ಅಲ್ಲವದು..ಬಾನ ಮೆರುಗಿನ ಜಂಭ..!
ಪ್ರಕೃತಿಯು ಆಕಳಿಸಿ ನಿದ್ದೆಗೆ ಜಾರೋ ಹೊತ್ತು,
ಉಣಬಡಿಸಿ ಬೀಗುತಿದೆ ರಂಗಿನಾ ಮತ್ತು...