ಯೋಗಸಾಹಿತ್ಯ

ಯೋಗಸಾಹಿತ್ಯ
ಭಾವನೆಗಳ ಅಂಗಳದಲಿ ಪದಗಳ ಓಡಾಟ...!!

Tuesday, August 27, 2019

ನಂಬಿಕೆ..!



ಶರಣಾದ ಜೀವಕ್ಕೆ ನಂಬಿಕೆಯೇ ಕಾಲ್ದಾರಿ,
ಸೋತ ದೈವವೇ ಇಳಿವನು ಬೆಳಕಾಗಿ ಕಾಲ್ಜಾರಿ...

Friday, August 23, 2019

ಹಂಗಿನ್ನೇಕೆ..!?


ಕಾಯುವಿಕೆಯ ಭಾವವಳಿಸಿ
ನಗವಿನಾ ಬೆಳಕು ಭವಿಸಿ
ನೆಮ್ಮದಿಯು ಪ್ರಖರತೆಯ ತಾರಾಗಣದಂತಿರಲು;
ಸೂರ್ಯ-ಚಂದ್ರ-ತಾರೆಗಳ ಹಂಗಿನ್ನೇಕೆ?

ಪರಿಹಾರ..!


ಉಸಿರೇ ನಿಂತು ಹೋಗೋ
ಒಂಟಿತನದ ಭಾವ
ಅತೀವ ಘನಘೋರ..
ಒಮ್ಮೆ ಬಂದಪ್ಪಿ
ಮುತ್ತನಿಡು ನೀನದುವೇ
ಸಮಂಜಸ ಪರಿಹಾರ..

ಮಾತು..ಮುತ್ತು..!


ತುಟಿಗಳವು ಶೃತಿಸುತಲಿ
ಲಯಬದ್ಧ ನುಡಿದಾಗ
ಹೊರಹೊಮ್ಮೊ ಸಂಗೀತವದು - ಮಾತು..
ಲಯ ತಪ್ಪಿ ಅದರುತಲಿ
ಉನ್ಮಾದ ಬೆಸೆದಾಗ
ಉಂಟಾಗೋ ಸಂಚಲನ - ಮುತ್ತು

ಚಳಿಗಾಲ


ಚಳಿಗಾಲದಲ್ಲಂತೂ ಸತತ ನಿವೇದನೆ..!!
ಮನವೊಲಿಕೆ ಕೈಗೂಡಲು -
ಜಂಟಿ ಕಾರ್ಯಾಚರಣೆ...
ಮುನಿಸು ಮನೆ ಮಾಡಲು -
ಒಂಟಿ ಜಾಗರಣೆ..!!!

ಮುನಿಸು...ಓಲೈಸು..!!


ಚಂದ್ರ ಸೂರ್ಯನೊಡನೆ ಪೋಟಿಗೆ ಬಿದ್ದು ಕಲಿತಿಹನು
ಸಂಜೆ ಬರುವುದು ಬೇಗ,
ಮೆಲ್ಲ ಚಲಿಸುತಲಿ ದಿಟ್ಟಿಸೋ ಆತನಿಗೆ
ಎಲ್ಲಿಲ್ಲದ ಆವೇಗ!
ಧಾವಂತಕೆ ಕಾರಣ ಕೇಳಲು ನಸುನಗುತಲಿ ಹೀಗಂದ-
"ಸಂಜೆಯಲ್ಲಿ ನಿಮ್ಮ ಚಾರಣ ನೋಡೋದೆ ಚಂದ..!!"
ಬಾ ನಲ್ಲೆ,
ಮುನಿಸ ತೊರೆದು, ಮನಸ ತೆರೆದು, ಮೆಲ್ಲ ನನ್ನೆಡೆ ಸರಿದು;
ಕಳವಳದಿ, ನಮ್ಮ ಸಾಂಗತ್ಯ ಕಾಣದೆ
ಹಪಹಪಿಸಿ ಕಳಕಳಿಯ ತೋರಿರುವ ಚಂದ್ರನಿಗಾಗಿ-
ಸಂಜೆ ಚಾರಣ ಮಾಡೋಣ,
ಅವನ ಪೋಟಿಗೊಂದು ಅರ್ಥವಾಗೋಣ..

Wednesday, March 27, 2019

ಇರುವನಕ ನೇಸರ..!

ನಿನ್ನ ಒಲವದು ಅಗಾಧ ಸಾಗರ,
ನಿನ್ನ ಮಡಿಲು ನೆಮ್ಮದಿಯ ಆಗರ;
ನಿನ್ನ ನಗುವು ತಂಗಾಳಿಯ ಚಾಮರ,
ನಿನ್ನ ಕೋಪ ಬುಸ್ಸೆನ್ನುವ ನಾಗರ.!
ನನ್ನ ಮೇಲೇಕೆ ಸಲ್ಲದ ಬೇಸರ!?
ಮನ್ನಿಸಪ್ಪಿಬಿಡು ನಾನು ಪಾಮರ;
ನಿನ್ನ ಜಪದಲ್ಲೇ ಜೀವವು ಕಾತರ,
ಪ್ರೀತಿ ಸುಧಿಸುವೆನಿರುವನಕ ನೇಸರ..

Sunday, March 24, 2019

ಅಥರ್ವನ ಲಾಲಿ ಹಾಡು..

ಚಂದಾಮಾಮನೇ ಬಂದು ಲಾಲಿ ಹಾಡ್ತಾನೋ ಕಂದ 
ಚಂದಾಮಾಮನೇ ಬಂದು ಲಾಲಿ ಹಾಡ್ತಾನೋ..
ನಿನ್ನ ಮಿಂಚೊ ಕಣ್ಣೋಟ
ನಿನ್ನ ತುಂಟ ಚೆಲ್ಲಾಟ 
ನೋಡೋಕಂತ ಬರುವ ಚಂದ್ರ ಲಾಲಿ ಹಾಡಿ ಹೋಗ್ತಾನೋ..

ಚಂದಾಮಾಮನೇ ಬಂದು ಲಾಲಿ ಹಾಡ್ತಾನೋ.. 
ಚಂದಾಮಾಮನೇ ಬಂದು ಲಾಲಿ ಹಾಡ್ತಾನೋ..

ಮುಂಜಾವು ನೀ ನಮಗೆ 
ಮುದ್ದು ನಗುವಿನಾ ಬೆರಗೆ 
ಆಟವಾಡುತಾ ನಮ್ಮ ನೋಡೋ ಕೆಂದಾವರೆ ಸೊಬಗೆ,
ನಿದ್ದೆ ಗುಮ್ಮ ನಿನ್ನ ಕಾಡಿ ಅಳಿಸೋವಾಗಲೆಲ್ಲ ನಮ್ಮ 

ಚಂದಾಮಾಮನೇ ಬಂದು ಲಾಲಿ ಹಾಡ್ತಾನೋ.. 
ಚಂದಾಮಾಮನೇ ಬಂದು ಲಾಲಿ ಹಾಡ್ತಾನೋ..

ಅಮ್ಮ ಬೇಕು ಅಂತ
ಮೊಂಡು ಮಾಡುವಂಥ 
ಅಮ್ಮ ಬಂದು ಅಪ್ಪಿದಾಗೂ ಸುಮ್ಮನಾಗದಂಥ
ಅತ್ತು-ಕರೆದು ನೀನು ನಿದ್ದೆ ಮಾಡದಾಗಲೆಲ್ಲ ನಮ್ಮ 

ಚಂದಾಮಾಮನೇ ಬಂದು ಲಾಲಿ ಹಾಡ್ತಾನೋ.. 
ಚಂದಾಮಾಮನೇ ಬಂದು ಲಾಲಿ ಹಾಡ್ತಾನೋ..
ಚಂದಾಮಾಮನೇ ಬಂದು ಲಾಲಿ ಹಾಡ್ತಾನೋ ಕಂದ 
ಚಂದಾಮಾಮನೇ ಬಂದು ಲಾಲಿ ಹಾಡ್ತಾನೋ..

Monday, March 11, 2019

ಖಯಾಲಿ..!!

ಸ್ನೇಹಿತನೊಬ್ಬ ಇತ್ತೀಚೆಗೆ ಬೆಳಿಗ್ಗೆ ಬೇಗ ಎದ್ದೋಳೊ ಖಯಾಲಿ ಬೆಳುಸ್ಕೊಂಡಿರುವ ಸ್ಫೂರ್ತಿಯಿಂದ ಬರೆದದ್ದು.
--------------------------------------------------------------------
ನಲ್ಲೆ ಜೊತೆ ಲಲ್ಲೆಯಾಡಿ
ಸೊಲ್ಲನ್ನೆಲ್ಲ ಖಾಲಿ ಮಾಡಿ
ಬೆಲ್ಲದಂಥ ಗಲ್ಲ ಗಿಲ್ಲಿ
ಲೋಕ ಎದ್ದು ಗುಲ್ಲಾಗೋಷ್ಟರಲ್ಲಿ
ಮೆಲ್ಲ ಮನಸಲ್ಲೇ ಮಲ್ಲನಾಗೋ
ಖಯಾಲಿನ!!??