ನೆಪ ಮಾತ್ರಕೆ ಬಂದು ಕನಸಿನಲಿ ನೆಲೆಸಿದೆ,
ನೆನಪಿನಾ ಹೂಚೆಲ್ಲಿ ಚಿತ್ತಾರ ನೀ ಬರೆದೆ,
ಆಗಸದಿ ತಟಕೇರಿ ನಿನ್ನ ನಾ ಓಲೈಸಲು,
ಬಾಳ ಬಾಂದಣದಿ ಏಕೆ ನೀನಿಲ್ಲವಾದೆ..!
ತರಗೆಲೆಯು ಚಿಗುರೆಂಬ ಭ್ರಾಂತು ಮೂಡಿಸಿದೆ,
ಹಳಸು ಪ್ರೀತಿಯ ನೀನು ಎಳಸೆಂದು ತೋರಿದೆ,
ಬಿಸಿಲು ಕುದುರೆ ಬೆನ್ನ ನಾ ಏರಲು ಬಿಟ್ಟು,
ಮರುಭೂಮಿಯಲಿ ಹಸಿರು ನೀನಾಗಿಬಿಟ್ಟೆ..!
ನೆನಪಲಿ ಗರಿಗೆದರಿ ನವಿಲಾಗಿ ನಿಂತೆ,
ಮೌನ ದುಂದುಭಿಯ ಮೊಳಗಿಸುತಲಿ ನಡೆದೆ,
ಭ್ರಮರದಂತೆ ನಾ ನಿನ್ನ ಒಲವ ಸವಿದಿರಲು,
ಮಕರಂದ ಬಡಿಸದೆ ನೀನೇಕೆ ಮಂಕಾದೆ..!
ತಾರೆಗಳ ಜಾತ್ರೆಯಲಿ ಚಂದಿರ ನಿಂತಂತೆ,
ನೀ ನನ್ನ ಬಾಳಿನಲಿ ಮಿನುಗುವ ಶಶಿಯಾದೆ...
ಮೇಲಿನ ಕಲ್ಪನೆಗಳು ತಪ್ಪೆಂದು ತಿಳಿಸುತಲಿ,
"ಜೊತೆಗಿರುವೆ ನಾನೆಂಬ" ಅಣಿಮುತ್ತು ಸುರಿಸಿದೆ....!
No comments:
Post a Comment