ಯೋಗಸಾಹಿತ್ಯ

ಯೋಗಸಾಹಿತ್ಯ
ಭಾವನೆಗಳ ಅಂಗಳದಲಿ ಪದಗಳ ಓಡಾಟ...!!

Monday, October 17, 2016

ಮುದ್ದಾದ ವ್ಯೂಹ..!!


ಅಮ್ಮ ಕುಮುದಾಳ ಪ್ರಪಂಚದಲ್ಲಿ ಯೋಚಿಸೋದ್ಕೆ ಇರೋದು ಎರಡೇ; ತನ್ನ ಜೀವನ ವಾಸಕ್ಕೆಂದು ಬೆಂಗಳೂರಿನ ಬಸವನಗುಡಿಯಲ್ಲಿ ಇದ್ದ ಎರಡು bedroomನ ಮನೆಯ ನಿರ್ವಹಣೆ ಮತ್ತು ಆ ಮನೆಯಲ್ಲಿ ಜೀವ ತಂತುವಿನಂತೆ ಬೆಳೆದ 27 ವರ್ಷದ ಸ್ಫುರದ್ರೂಪಿ, ಯಶಸ್ವಿ ಮಗ ಸಮನ್ಯು.
          ಸಮನ್ಯುವಿಗೆ ಜೀವನದ ಎಲ್ಲಾ ಆತಂಕ, ಗೊಂದಲ, ಅಂಜಿಕೆಗಳ fullstop ಎಂದರೆ ಅಮ್ಮ. ಅಮ್ಮನ ಮಡಿಲು ಅವೆಲ್ಲವನ್ನೂ ದೂರಗೊಳಿಸಿ, ಸಂತೈಸಿ ತಮಾಷೆ ಮಾಡುತ್ತಾ ಮಗನ ಮುಖದ ಮೇಲೆ ನಗು ಅನ್ನೋ ಹೂ ಅರಳಿಸದೆ ಇರ್ತಿರ್ಲಿಲ್ಲ. ನೆನಪೂ ಕೂಡ ಇಲ್ಲದ ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡಿದ್ದ ಸಮನ್ಯುವಿಗೆ, ಅಮ್ಮನ ಅತೀವ ಪ್ರೀತಿ, ಎಣಿಕೆಗೂ ನಿಲುಕದ ತ್ಯಾಗದ ಸಂದರ್ಭಗಳು, ಸಮಾಜದಲ್ಲಿ ಒಂಟಿ ಹೆಣ್ಣು ಬದುಕಲು ಪಡುವ ಪಡಿಪಾಟಲನ್ನೆಲ್ಲ ದಾಟಿ ಬಂದುದರ ದೃಷ್ಟಾಂತ, ಎಲ್ಲವೂ ಅವನಿಗೆ “ಅಮ್ಮ ಎಂದರೆ ಎಲ್ಲ. ಅಮ್ಮ ಇಲ್ಲದೆ ಬೇರೇನೂ ಇಲ್ಲ. ಅಮ್ಮನಿಗಾಗೇ ಇನ್ನೆಲ್ಲ..” ಎಂಬಂಥ ಮನೋಭಾವನೆ ಆಳವಾಗಿ ಬೇರೂರಿ, ಬಾಲ್ಯಾವಸ್ಥೆ ದಾಟಿದಾಗಿನಿಂದಲೂ ಅಮ್ಮನನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಪಾಡುತಿದ್ದ.
          ಸಮನ್ಯು ಸಂಜೆ ಮನೆಗೆ ಬಂದಿದ್ದೆ, ದಿನಚರಿ ಹಾಗೂ ತನ್ನ ಭಾವ ಲಹರಿಯನ್ನೆಲ್ಲ ಅಮ್ಮನಿಗೆ ಒಪ್ಪಿಸಿಬಿಡುತ್ತಿದ್ದ. ಹೇಳಲೇಬೇಕಂಬ ನಿಯಮದಿಂದಲ್ಲ, ಅವನಿಗೂ ಕುಮುದಾಳಿಗಿಂತ ಬೇರೆ best friend ಇರಲಿಲ್ಲ. ಸಿನಿಮಾ, ನಾಟಕ, ಹೀಗೆ ಸ್ನೇಹಿತರ ಜೊತೆ ಸಮಯ ಕಳೆವ ರೀತಿಯಲ್ಲೇ ಅಮ್ಮನ ಜೊತೆಯಲ್ಲೂ ಸುತ್ತಾಡುತ್ತಿದ್ದ. ದಾರಿಯಲ್ಲಿ ಹೋಗುವಾಗ ಚಂದನೆಯ ಹುಡುಗಿಯರು ಹಾದು ಹೋದರೆ ಕುಮುದಾಳೇ ಸಮನ್ಯುವಿಗೆ ತೋರಿಸಿ ಗೇಲಿ ಮಾಡುವುದು ಕೂಡ ಸಾಮಾನ್ಯವೇ ಆಗುವಷ್ಟು ಸ್ನೇಹ ಸಂಬಂಧ ಅವರಿಬ್ಬರ ಮಧ್ಯೆ ಬೆಳೆದು ನಿಂತಿತ್ತು.
          ಇಷ್ಟು ಒಡನಾಟ ಇದ್ದದ್ದಕ್ಕೋ ಏನೊ, ಮಗನ ಅಭಿರುಚಿ ಅಮ್ಮನಿಗೆ ಬಹಳ ಚೆನ್ನಾಗಿ ಗೊತ್ತಿತ್ತು. ಎಲ್ಲ ವಿಷಯದಲ್ಲೂ. ಅವನು ಅಷ್ಟಾಗಿ ಬಾಯಿಬಿಟ್ಟು ‘ನನಗಿದು ಬೇಕು..’ ಎಂದು ಕೇಳಿದ್ದು ಕೆಲವರು ಬಾರಿ ಮಾತ್ರ. ಮಿಕ್ಕೆಲ್ಲಾ ಸಂದರ್ಭಗಳಲ್ಲಿ ಅಮ್ಮನೇ ಅರ್ಥ ಮಾಡಿಕೊಂಡು ಕೊಡಿಸಿದ್ದೇ.
          ಮಗ ಬೆಳೆದು ನಿಂತು, ಒಳ್ಳೆಯ ಕೆಲಸಕ್ಕೆ ಸೇರಿ, ತಾವು ಸ್ಥಿತಿವಂತರಾಗಿದ್ದೇವೆ ಎನಿಸಿದ ಮೇಲೆ ಕುಮುದಾಳಿಗೆ ಕಾಡುತ್ತಲೇ ಇದ್ದ ಒಂದೇ ಯೋಚನೆ ಮಗನ ಮದುವೆ ಬಗ್ಗೆ. ಏಕೆಂದರೆ, ಮುಂಚೆ ಮದುವೆ ಬಗ್ಗೆ ಮತಾಡಿದಾಗೆಲ್ಲ ‘ಮನೆ ಅಂತ ಹೆಂಗಿದ್ರು ಇದೆ, ಅದ್ರ ಬಗ್ಗೆ ಯೋಚ್ನೆ ಇಲ್ಲ. ಆದ್ರೆ ಮೊದ್ಲು ಒಂದ್ ಒಳ್ಳೆ ಸಂಬಳದ ಕೆಲ್ಸ ಅಂತ ಸಿಕ್ಕಿ settle ಆಗೋಣ. ಆಮೇಲೆ ಮದ್ವೆ ಮಕ್ಳು ಇದ್ದಿದ್ದೆ. ಅದು ಅಲ್ಲದೆ, ನಂಗೆ ಇರೋದು ಅಂತ ನೀನೋಬ್ಳೆ. ನಿನ್ನುನ್ನ ಮಹಾರಾಣಿ ಹಾಗೆ treat ಮಾಡ್ಕೊಂಡು ನೋಡ್ಕೊಳೋವ್ಳು ಅಲ್ದಿದ್ರೂ, ಮನೇಲಿ ಮನಃಸ್ತಾಪಗಳು ಆಗ್ದಿರೋಹಾಗೆ ಸಂಭಾಳಿಸ್ಕೊಂಡು ಹೋಗೋ ಹುಡುಗಿ ಸಿಗ್ಬೇಕಲ್ವ..’ ಅಂತ ಮುಂದೂಡ್ತಿದ್ದ. ಅದೂ ಸರೀನೆ ಅಂತ ಕುಮುದಾನು ಸುಮ್ಮನಾಗ್ತಿದ್ಲು. ಆದ್ರೆ, ಸಂಬಳ-ಕೆಲ್ಸ ಅಂತ ಕಥೆ ಹೊಡ್ದು ಅದೆಲ್ಲ ಆದ್ಮೇಲೂ ಸುಮ್ಮನೆ ಇದಾನಲ್ಲ ಅಂತ ಆಕೇನೇ ತಿಳಿದವರ ಹತ್ರ ವಿಚಾರುಸ್ಕೊಂಡು ಹುಡುಗಿ ಹುಡ್ಕೋಕೆ ಶುರು ಮಾಡಿದ್ಲು.
          ಇಲ್ಲಿ ಇವರ ಕಥೆ ಹೀಗಿರೋವಾಗ; ಸಮನ್ಯು ಹಾಗೂ ಕುಮುದಾರ ಬಾಂಧವ್ಯವನ್ನ, ಸಂಬಂಧದ ಉತ್ಕೃಷ್ಠ ಗಟ್ಟಿತನವನ್ನ ಸುಮಾರು ವರ್ಷಗಳಿಂದ observe ಮಾಡುತ್ತಾ, ಮೆಚ್ಚುತ್ತಾ ಬಂದಿದ್ದ ಹುಡುಗಿಯೊಬ್ಬಳು, ಇಂಥ ಮನೆಗೆ ಸೊಸೆ ಆದ್ರೆ ಎಷ್ಟು ಚೆಂದ ಅನ್ನೋಂತ ಕನಸನ್ನು ಕಾಣ್ತಿದ್ಲು. ಮಂದಸ್ಮಿತೆ, ಸೂಕ್ಷಮತಿ, ದಿಟ್ಟ ನಡೆ-ನುಡಿ ಇದ್ದ ಹಾಗೂ ಚೆಲುವೆಯೂ ಆಗಿದ್ದ ಆಕೆಯ ಹೆಸರು ಸಾನ್ವಿ.
ಪಕ್ಕದ ಬೀದೀಲಿ ಕುಮುದಾಳಿಗೆ ಶಾಂಭವಿ ಎಂಬವರ ಪರಿಚಯವಿತ್ತು. ಪರಿಚಯ ಅಂದ್ರೆ ಅಷ್ಟಾಗಿ ಏನೂ ಗೊತ್ತಿಲ್ದಿದ್ರೂ, ಹಬ್ಬ-ಹರಿದಿನಗಳಲ್ಲಿ ಮುತ್ತೈದೆಯರಿಗೆ ನೀಡುವ ಅರಿಶಿನ-ಕುಂಕುಮದ ಜರೂರತ್ತಿನ ಪರಿಚಯ ಅಷ್ಟೆ. ಹಾಗಾಗಿ, ಆಗಾಗ ತರಕಾರಿ ಕೊಳ್ಳುವಾಗಲೋ, ಹಾಲಿನ ಬೂತಲ್ಲೋ ಸಿಕ್ಕಾಗ ನಿಷ್ಕಳಂಕ ನಗುವಿನಿಂದ ಕೂಡಿದ ಮಾತುಕತೆ ಜರುಗುತ್ತಿತ್ತು. ಒಬ್ಬರ ಮೇಲೊಬ್ಬರಿಗೆ ಒಳ್ಳೆಯ ಅಭಿಪ್ರಾಯವೇ ಇತ್ತು. ಈ ಶಾಂಭವಿಯವರ ಏಕಮಾತ್ರ ಪುತ್ರಿಯೇ ಸಾನ್ವಿ.
          ಹೀಗೇ ಒಮ್ಮೆ ಭೇಟಿಯಾದ ಸಂದರ್ಭದಲ್ಲಿ ಕುಮುದಾ ಶಾಂಭವಿಯೊಂದಿಗೆ ಸಮನ್ಯುವಿನ ಮದುವೆ ಯೋಚನೆಯನ್ನು ಪ್ರಸ್ತಾಪಿಸುತ್ತಾಳೆ. ಶಾಂಭವಿಯು ಮನೆಯಲ್ಲಿ ಅದೇ ವಿಷಯವನ್ನು ಸುಮ್ಮನೆ ಏನೋ ಚರ್ಚಿಸುವುದರ ಮಧ್ಯೆ ಸಾನ್ವಿಯೊಂದಿಗೆ ಆ ವಿಷಯವನ್ನು ತಿಳಿಸುತ್ತಾಳೆ. ಸಾನ್ವಿಗೆ ಆ ಕ್ಷಣಕ್ಕೆ ಏನನ್ನಿಸಿತೋ, ‘ಅಮ್ಮ, ನಾನು ಸಮನ್ಯುನ ಮದುವೆ ಆಗ್ಲ? ಯಾಕೋ ತುಂಬಾ ಅನ್ನುಸ್ತಿದೆ, ಅವ್ರ ಮನೆಗೆ ಸೊಸೆ ಆಗಿ ಹೋದ್ರೆ ಚೆನ್ನಾಗಿರ್ತೀನಿ ಅಂತ. ಹಂಗೇನೆ, ಅತ್ತೆ ಮನೆ ತವರು ಮನೆ ಒಂದೇ ರಸ್ತೆಯ ಅಳತೆ ದೂರದಲ್ಲಿ ಇರುತ್ತೆ. ಓಡಾಡಕೂ ಅನುಕೂಲ..’ ಅಂತ ಕಿರುನಗೆ ಮಿಶ್ರಿತ ನಾಚಿಕೆ ಮುಖಭಾವದಲ್ಲಿ ಅಮ್ಮನ ಹತ್ರ ಹೇಳ್ತಾಳೆ. ಶಾಂಭವಿಗೆ ಮಗಳ ದಿಟ್ಟತನದ ಬಗ್ಗೆ ಗೊತ್ತಿದ್ರೂ, ಇಂಥ ವಿಷಯಾನ ಹೆತ್ತವರ ಮುಂದೆ ಹಿಂಗೂ ಒಂದೇ ಸರ್ತಿ ಹೇಳ್ಬಿಡ್ತಾರೆ ಅಂತ ಒಂದು ಕ್ಷಣಕ್ಕೆ ದಿಗ್ಭ್ರಾಂತಿ ಆಗಿ, ಮರುಕ್ಷಣ ಮಗಳ ಅನಿಸಿಕೆ ಏನೂ ತಪ್ಪಲ್ಲ ಅನ್ನಿಸ್ತದೆ. ‘ಆದರೆ, ನಿಮ್ಮಪ್ಪ ಹಾಗೂ ಕುಮುದಾ ಅವರನ್ನ ಹೇಗೆ ಒಪ್ಸೋದು.!?’ ಅಂತ ಶಾಂಭವಿ ಕೇಳಿದ್ದೇ ತಡ, ಅಮ್ಮನ support ಸಿಕ್ತಲ್ಲ ಅನ್ಕೊಂಡು ‘ನಾನು ನೋಡ್ಕೋತೀನಿ ಬಿಡು ಅದುನ್ನೆಲ್ಲ.’ ಅಂದವಳೇ, complete strategy ready ಮಾಡ್ಕೊಳಕೆ ಹೋಗೋವ್ಳಂತೆ ಅಲ್ಲಿಂದ ಎದ್ದು ಹೋಗ್ತಾಳೆ.
          ರಾತ್ರಿಯ ಕೂಲಂಕುಷ ಚಿಂತನೆಯ ನಂತರ ಗಟ್ಟಿಯಾಗಿ ನಿರ್ಧರಿಸಿ ಮರುದಿನ ಮಧ್ಯಾಹ್ನ ಕುಮುದಾರ ಮನೆಗೆ ಹೋಗ್ತಾಳೆ. ಸಾನ್ವಿಯ ಪರಿಚಯ ಇದ್ದ ಕಾರಣ shock ಅಂತೇನು ಆಗ್ದಿರ ಕುಶಲೋಪರಿ ಸಾಂಪ್ರತ ಎಂಬಂತೆ ಮಾತಾಡ್ತಾ ಕೂತಿರ್ತಾರೆ. ಸಾನ್ವಿ ಮತ್ತೆ ಒಮ್ಮೆಲೆಗೆ, ‘aunty, ನಾನು ನಿಮ್ಮ ಮಗನ್ನ ಮದುವೆ ಮಾಡ್ಕೊಬೇಕು ಅಂತ ಅನ್ಕೊಂಡಿದೀನಿ, please ಒಪ್ಪಿಗೆ ಕೊಡಿ. ನಿಮ್ಮ ಮಗನಿಗೂ ನಾನು ಅವನನ್ನ ಇಷ್ಟ ಪಡ್ತಿರೋ ವಿಷಯ ಹೇಳಿಲ್ಲ. ನಮ್ಮ ಮನೆಯ ಅನುಮತಿ ಕೇಳಿ, ನಿಮ್ಮ ಅನುಮತಿ ಪಡುದ್ಮೇಲೆ, ಸಮನ್ಯುಗೆ ವಿಷ್ಯ ತಿಳಿಸೋಣ ಅನ್ಕೊಂಡಿದ್ದೆ. ಯಾಕಂದ್ರೆ, ಸಮನ್ಯುವಿಗೆ ನೀವೇ ಜೀವ ಅಂತ ಗೊತ್ತು. ಅದುಕ್ಕೆ ಜೀವದ permission ತಗೊಂಡ್ ಬಿಟ್ರೆ ಜೀವನದ journeyಗೆ pass ಸಿಕ್ದಂಗೆ ಅಂತ ನಿಮ್ಮತ್ರ ಮೊದ್ಲು ಬಂದೆ.’ ಅನ್ನೋ sooper clarity ಮನೋಭಾವ ಹಾಗೂ ಸಂಬಂಧಗಳ ಬೆಲೆ ತಿಳಿದವರ ಹಾಗೆ ಮಾತಾಡಿದ ರೀತಿ ಕುಮುದಾಗೆ ಇಷ್ಟವಾಗಿ ಸೊಸೆ ಅಂತ ಸ್ವೀಕರಿಸಿದ್ದೂ ಆಯ್ತು.
          ಈ ಮಾತುಕತೆ ಆದ್ಮೇಲೆ, ಸ್ವಲ್ಪ ಕಾಲಹರಣದ ನಂತರದಲ್ಲೂ ಕುಮುದಾಳಿಗೆ ಒಂದು ವಿಷಯ ಕಾಡ್ತಾನೆ ಇತ್ತು. ಅದನ್ನ ಸಾನ್ವಿಗೆ ಹೇಳ್ದಿರ ಇರೋದ್ಕೂ ಆಗ್ದಿರ, ‘ಸಾನ್ವಿ. ನನ್ ಮಗ ಒಂದು ಪ್ರಶ್ನೇನು ಕೇಳ್ದಿರ ನಾನ್ ತೋರ್ಸಿದ್ ಹುಡುಗಿಗೆ ತಾಳಿ ಕಟ್ಬಿಡ್ತಾನೆ, ಅದ್ರಲ್ ನಂಗೇನು ಸಂಶಯ ಇಲ್ಲ. ಆದ್ರೆ, ನಾನ್ ಹೇಳ್ದೆ ಅಂತ ಅವ್ನು ಮದ್ವೆ ಆಗಬಾರದು ಅಲ್ವ. ಅವನ ಸಂಗಾತಿ ಆಗೋವ್ಳು ಅವನಿಗೆ ಇಷ್ಟ ಆಗ್ಬೇಕು. ಹಂಗಾಗಿ, ಇನ್ನ ನೀನುಂಟು ಅವನುಂಟು. ಅವ್ನು ಕೂಡ ನಿನ್ನ ಇಷ್ಟ ಪಡೋಹಾಗೆ ಏನಾದ್ರೂ ಆಗಿದ್ದೆ ಆದ್ರೆ ತಕರಾರೇ ಇಲ್ದಿರ ಓಲಗ ಊದಿಸಿ ಬಿಡೋಣಂತೆ.’ ಅಂದದ್ದೇ, ಸಾನ್ವಿಗೆ ಪೀಕಲಾಟಕ್ಕೆ ಸಿಲುಕಿದ ಪರಿಸ್ಥಿತಿ ಅನ್ನುಸ್ತು. ಆದ್ರೂ, ಆ logic ಸರಿಯಾಗಿದೆ ಅನ್ಸಿ, ‘ಸರಿ aunty, ನೀವ್ ಹೇಳ್ದಂಗೆ ಆಗ್ಲಿ.’ಅಂತ ಅಲ್ಲಿಂದ ಹೊರಡುತ್ತಾಳೆ.
          ಇನ್ಮೇಲೆ ಸಾನ್ವಿಗೆ ಶುರು ಆಗಿದ್ದೇ, ಸಮನ್ಯುವನ್ನು ವರಿಸುವ ಕಾರ್ಯ.
          ಹುಡುಗ್ರು ಹುಡುಗೀನ ವರಿಸೋ ರೀತಿ coffee shop, date ಇಂಥವೆಲ್ಲ ಇವನತ್ರ workout ಆಗಲ್ಲ ಅಂತ, ಮನೆಯಿಂದ ಹೊರಗೆಲ್ಲೂ ಈ ಆಸಾಮಿನ impress ಮಾಡಕೆ ಆಗಲ್ಲ ಅಂತ ಕುಮುದಾಳೊಂದಿಗೆ ಮಾತಾಡಿ, ಆಗಾಗ ಮನೆಗೆ ಬರುವ ಅನುಮತಿ ಪಡೆದು, ಸಮನ್ಯುವಿಗೆ ದಿನಾ ದರ್ಶನ ಕೊಟ್ಟು ತಾನೂ ಕೂಡ ಆತನ ಸಾಮೀಪ್ಯದಲ್ಲೇ ಸುಳಿದಾಡೋ masterplan ಮಾಡಿದಳು.
          ಮನೆಯಲ್ಲಿ ಓಡಾಡುತ್ತ, ಸಮನ್ಯು ಮುಖತಃ ಸಿಕ್ಕಾಗ ಮೆಲುನಗೆ ಬೀರುತ್ತ, ಆತನು ಕೂಡ ನಗೆ ಬೀರಿದ್ದೆ ಆದಲ್ಲಿ ತನ್ಮಯಳಾಗುತ್ತಿದ್ದಳು. ಕುಮುದಾ ಕೂಡ ಆಗಾಗ ಹುಷಾರು ತಪ್ಪುವ ರೀತಿಯಲ್ಲಿ ಹಾಸಿಗೆ ಹಿಡಿದಂತೆ ನಟಿಸುತ್ತ, ಸಾನ್ವಿ ಆಕೆಯ ಆರೈಕೆ-ಶುಶ್ರೂಷೆ ಮಾಡುವುದು, ಸಮನ್ಯುವಿನ ದೈನಂದಿನ ಕೆಲಸಗಳಲ್ಲಿ ಸಹಾಯ ಮಾಡುವುದು ಹೀಗೇ ನಡೆದಿತ್ತು. ಇಲ್ಲಿ ಗಮನಿಸ ಬೇಕಾದ ವಿಷಯವೆಂದರೆ, ಕುಮುದಾ ಹಾಗೂ ಸಾನ್ವಿ ಸ್ವಲ್ಪ ನಟಿಸುತ್ತಿದ್ದರೂ ಅವರ ಸಂಬಂಧ ಗಟ್ಟಿಯಾಗುತ್ತಾ, ಅತ್ತೆ-ಸೊಸೆ ಬಾಂಧವ್ಯ ಬಿಗಿಯಾಗುತ್ತಾ, ಮನೆ ಮಗಳಂತೆ ಆದದ್ದು ಮಾತ್ರ ಸುಳ್ಳಲ್ಲ. ಹಾಗೇ ಸಮನ್ಯುವಿಗೂ ಮನಸಿನ ಮೂಲೆಯಲ್ಲೆಲ್ಲೋ ನಿಧಾನವಾಗಿ ಸಾನ್ವಿಯ ಕಡೆಗೆ ಒಲವು ಮೂಡಿದ್ದು ಕೂಡ ನಿಜ.
          ಒಮ್ಮೆ ಮನೆಗೆ ಬಂದಾಗ ಇವರಿಬ್ಬರೂ ಏನೋ ಚರ್ಚಿಸುತ್ತಾ, ನಗೆಗಡಲಲ್ಲಿ ತೇಲುತ್ತಾ ಇದ್ದದ್ದನ್ನು ಗಮನಿಸಿದ ಸಮನ್ಯುವಿಗೆ, ಬಾಗಿಲಲ್ಲೇ ಅವರನ್ನು ನೋಡುತ್ತಾ, ‘ಸಾನ್ವಿನ ನಾನು ಮದುವೆ ಆದ್ರೆ ಈ ಅನುಬಂಧ ಹೀಗೆ ಇರುತ್ತಲ್ವ..’ ಅನ್ನಿಸಿ ಮೂಡಿದ ಮಂದಹಾಸದ ಮೊಗ್ಗು ಇನ್ನೇನು ಅರಳಿ ಹೂವಾಗ್ಬೇಕು ಅನ್ನೋಷ್ಟರಲ್ಲಿ ‘ನಾನೇನೋ ಇಷ್ಟ ಪಟ್ಟು ಅಮ್ಮನ ಹತ್ರ ಕೇಳುದ್ರೆ, ನಾ ಕೇಳ್ದೆ ಅಂತ ಅಮ್ಮ ಒಪ್ಕೊಳೋದು ಸರಿ ಅಲ್ಲ ಅಲ್ವ. ಅವಳಿಗೂ ಹಿಡಿಸ್ಬೇಕು.’ ಅಂತ ಯೋಚನೆ ಮಾಡುತ್ತಾ ಒಳಗೆ ಹೋಗ್ತಾನೆ.
          ಕೆಲವು ದಿನಗಳ ನಂತರ, ಅದೇ ಯೋಚ್ನೆ ಮತ್ತೆ ತಲೆ ಹೊಕ್ಕಿ, ‘ನನ್ನ ಆಲೋಚನೆ, ಆದ್ಯತೆಗಳ ಗುಣಕ್ಕೆ ಬಹಳ ಹೊಂದುವ ಹುಡುಗಿ ಹಾಗೆ ತೋರೋ ಸಾನ್ವಿನ ಮದುವೆ ಆಗೋದೇ ಸರಿ. ಅಮ್ಮನ್ನ ಒಂದ್ಸಾರಿ ಕೇಳಿ ನೋಡ್ತೀನಿ. ವಿಷಯ ಹೇಳ್ದಾಗ ಕಿಂಚಿತ್ತಾದ್ರೂ ನಿರಾಕರಣೆ ಭಾವ ವ್ಯಕ್ತ ಆದ್ರೆ drop ಆದ್ರೆ ಆಯ್ತು. ಪ್ರಯತ್ನ ಆದ್ರು ಪಡೋಣ.’ ಅಂತ ಅನ್ಸಿದ್ದೇ, ಮುಂದಿನ ಭಾನುವಾರ ಬೆಳಿಗ್ಗೆ ಅಮ್ಮನ ಜೊತೆ coffee ಕುಡಿಯುವ ಸಮಯದಲ್ಲಿ ವಿಷಯ ಪ್ರಸ್ತಾಪಿಸಿದ್ದೆ, ಕುಮುದಾ ಆ ಕ್ಷಣಕ್ಕೆ ಏನೂ ಮಾತಾಡದೆ ಒಳಗೊಳಗೇ ಖುಷಿಯಿಂದ ನಗುತ್ತ, coffee ಹೀರುತ್ತಾ, ಸಂತುಷ್ಟ-ಸಮಾಧಾನದ ಭಾವದಲ್ಲಿ ಮೌನವಾಗಿದ್ದದ್ದನ್ನು ಅಸಮ್ಮತಿಯೆಂದು ಭಾವಿಸಿದ ಸಮನ್ಯು ತಡ ಮಾಡದೆ, ‘ಅಮ್ಮ ನಿಂಗೆ ಇಷ್ಟ ಇಲ್ಲಾಂದ್ರೆ ಏನೂ ತೊಂದ್ರೆ ಇಲ್ಲ, just ಅನ್ನುಸ್ತು ಹೇಳ್ದೆ ಅಷ್ಟೇ’ ಅಂದು ಸುಮ್ಮನೆ ಕೂರುತ್ತಾನೆ. ಕುಮುದಾಳಿಗೆ ಒಮ್ಮೆಲೆಗೆ ಭಯದಂತಾದರೂ ಅದನ್ನು ತೋರಿಸಿಕೊಳ್ಳದೆ ಶಾಂತಚಿತ್ತಳಾಗಿ, ‘ಹೇ, ಹಾಗಲ್ವೋ. ಹುಡುಗಿಯನ್ನ ಮತ್ತೆ ಅವರ ಮನೆಯವರನ್ನ ಹೆಂಗೆ ಮಾತಾಡಿ ಒಪ್ಸೋದು ಅಂತ ಯೋಚುಸ್ತಿದ್ದೆ ಅಷ್ಟೇ.’ ಅಂದಳು. ಆ ಮಾತು ಕೇಳಿ ಹಿಗ್ಗ್ಗಿದ ಸಮನ್ಯು, ‘ಅದುನ್ನ ನಾನ್ ನೋಡ್ಕೋತೀನಿ ಬಿಡಮ್ಮ. ನೀನ್ ಒಪ್ಕೊಂಡ್ಯಲ್ಲ ಅಷ್ಟೇ ಸಾಕು.’ ಅಂತ ಒಲವನ್ನೇ ಜಯಿಸಿದ ಹುರುಪಿನಲ್ಲಿ ಎದ್ದು ಹೋಗುತ್ತಾನೆ. ಇತ್ತ ಕುಮುದಾ ಒಂದು ಸಣ್ಣ ನಗೆಯನ್ನು ಬೀರಿ ಸಾನ್ವಿಗೆ phone ಹಚ್ಚುತ್ತಾಳೆ.
          ಆ ವಿಷಯ ತಿಳಿದ ಕ್ಷಣ ಸಾನ್ವಿಗೆ; ಬೆಂದಿದ್ದ ಭೂಮಿಯು ವರುಣನ ಸಾಮೀಪ್ಯ ಬಯಸಿ ತಂಪಿಗಾಗಿ ಹಾತೊರೆದು ಕಾದಿರುವಾಗ ಅಕಾಲಿಕ ಮಳೆಯಾದಾಗ ಆಗುವ ಚಿರಂತನ ರೋಮಾಂಚನ ಆದಹಾಗೆ, ಹೂವು ಇರುಳೆಲ್ಲಾ ಮಂಜಿನ ಶೀತದಲ್ಲಿ ಶೇಖರಿಸಿಟ್ಟ ಒಡಲ ಮೇಲಿನ ಸಣ್ಣದೊಂದು ಬಿಂದುವು ಮುಂಜಾವಿನಲ್ಲಿ ಸೂರ್ಯನ ಬೆಚ್ಚನೆಯ ಶಾಖ ಸೋಕಿದೊಡನೆ ಮಿಂಚೊಂದು ಮೂಡಿ ಸಂತೃಪ್ತಿಯ ಭಾವದಲ್ಲಿ ಮಿನುಗುವ ಹಾಗೆ, ಮಂದಾರವೇ ಮಂದಹಾಸವಾದಂತ ನಗೆ ಬೀರುತ್ತಾ, ಶ್ರಮದ ಸಾರ್ಥಕತೆ ಫಲಿಸಿದ್ದಕ್ಕೆ ಸಹಕರಿಸಿದ ಕುಮುದಾಳಿಗೊಂದು thanks ಹೇಳಿ phone ಕೆಳಗಿಡುತ್ತಾಳೆ.
          ಇನ್ನೊಂದು ಬಾರಿ ಸಮನ್ಯುವನ್ನು ನೋಡಿದರೂ ಸಾಕು, ‘ತಡೆದಿಟ್ಟ ಪ್ರೇಮವನ್ನೆಲ್ಲಾ ಅವನಿಗೆ ಹೇಳಿಬಿಡುವುದೇ..’ ಅನ್ನುವ ರೀತಿಯಲ್ಲಿ ಇದ್ದಾಗಲೇ, phone ಸಣ್ಣದಾಗಿ ರಿಂಗಣಿಸುತ್ತದೆ. ‘ನಾಳೆ ಸಂಜೆ ಸಿಗೋಣ. ಸ್ವಲ್ಪ ಮಾತಾಡುವುದಿದೆ..’ ಎಂಬ ಚೊಕ್ಕವಾದ, ಭಾವಾತಿರೇಕವಿಲ್ಲದ ಒಂದು ಮೆಸೇಜ್ ಸಮನ್ಯುವಿನಿಂದ ಬಂದದ್ದೇ ‘ಇದೇ ಕಾರಣಕ್ಕೆ ನಂಗೆ ನೀನು ಅಷ್ಟು ಇಷ್ಟ ಆಗೋದು. ಭಾವ ಲಹರಿಯ ಸರಿಯಾದ ಬಳಕೆ ಗೊತ್ತಿರೋದೇ ನಿಂಗೆ..’ ಅಂದುಕೊಳ್ಳುತ್ತಾ ನಾಳೆ ಸಂಜೆ ಜರುಗಲಿರುವ ಆ ಅಮೂರ್ತ ಘಳಿಗೆಯ ನಿರೀಕ್ಷೇಲಿ ನಿದ್ದೆ ಬಾರದ ನಿದ್ದೇಲಿ ಮಲಗುತ್ತಾಳೆ.
          ಸಂಜೆ ಭೇಟಿಯಾಗಿ ಸ್ವಲ್ಪ ಕಾಲಹರಣ ಮಾಡುತ್ತಾ ಇದ್ದಾಗಲೇ ಸಮನ್ಯು ಯಾವುದೇ ತಡ ಮಾಡದೆ ತನ್ನ ಮನಸಿನ ಮಾತನ್ನೆಲ್ಲ ಹೇಳಿ ಮದುವೆಯ ಪ್ರಸ್ತಾಪಿಸುತ್ತಾನೆ. ಆಕೆಗಂತೂ ಹಿಗ್ಗೋ ಹಿಗ್ಗು. ಎಲ್ಲಿಲ್ಲದ ಸಂತೋಷ. ಮೊದಲು ಎದ್ದು ಹೋಗಿ ತಕ್ಷಣಕ್ಕೆ ಸಮನ್ಯುವನ್ನು ತಬ್ಬಿ ಎದೆಗೆ ಒರಗಿ ಹೃದಯ ಬಡಿತದ ಏರಿಳಿತವನ್ನು ಆಲಿಸಿ, ಪಿಸುಮಾತಲ್ಲೊಮ್ಮೆ ಆ ಹೃದಯಕ್ಕೆ ಧನ್ಯವಾದ ಹೇಳಬೇಕೆಂದು ಅನಿಸಿದರೂ; ಕುಂತಲ್ಲೇ ನಾಚುತ್ತಾ ಸಮ್ಮತಿಯನ್ನು ಸೂಚಿಸಿದಳು.
ಮುಂದಿನ ದಿನಗಳಲ್ಲಿ ಅಮ್ಮನ ಜೊತೆಗೆ ಸಾನ್ವಿಯ ಮನೆಗೆ ಹೋಗಿ ಹೆಣ್ಣನ್ನು ಕೇಳುವ ಶಾಸ್ತ್ರ ಮುಗಿಸಿ ಮದುವೆಯ ಮುಹೂರ್ತವನ್ನೂ ಗೊತ್ತುಮಾಡುತ್ತಾನೆ.
ಇಲ್ಲಿ, ಸಾನ್ವಿ-ಸಮನ್ಯು-ಕುಮುದಾ ಎಲ್ಲರಿಗೂ ಅವರವರದೇ ರೀತಿಯಲ್ಲಿ ಜಯಿಸಿದ ಸಂತೋಷ.

          ಈ ಗೆಲುವಿನ ಉಮ್ಮಳ ಸಂತೋಷದ ನಡುವೆ ಸಾನ್ವಿ ಮತ್ತು ಸಮನ್ಯು ಪ್ರೇಮ ಪೋಷಾಕಿನಲ್ಲಿ ಮದುವೆಯ ಸಂಭ್ರಮಕ್ಕೆ ಅಣಿಯಾಗುತ್ತ ಅದಕ್ಕೆ ಬೇಕಾದ ಎಲ್ಲಾ ತಯ್ಯಾರಿಯಲ್ಲಿ ತಲ್ಲೀನ. :) 

Monday, October 10, 2016

ನೀನೇ..!!

ಪರಿಚಯವು ನೀನೇ,
ಪರಿಣಯವು ನೀನೇ,
ನನ್ನೊಲವ ಸಿಂಗಾರಕೆ ಪರಿಮಿತಿಯು ನೀನೇ.

ಪರಿಹಾರ ನೀನೇ,
ಪರಿತಾಪ ನೀನೇ,
ನನ್ನೆಲ್ಲ ಭಾವುಕತೆ ಪರಿಣಾಮ ನೀನೇ..

ಪರಿಕಲ್ಪನೆ ನೀನೇ,
ಪರಿಚಾರಕಿ ನೀನೇ,
ಎದೆಯೊಳಗೆ ನಡೆಯೊ ಪ್ರೇಮ ಪರಿಷತ್ತು ನೀನೇ..

ಪರಿಗಣನೆ ನೀನೇ,
ಪರಿಭ್ರಮಣೆ ನೀನೇ,
ಸಾಂಗತ್ಯಕೆ ಖಾತರಿಯ ಪರಿಪೂರ್ಣತೆ ನೀನೇ..

Sunday, October 9, 2016

ಅಮೂರ್ತ ಪ್ರೇಮ

ವೈಭವ ಇತಿಹಾಸದ ಅವಶೇಷಗಳ ನಡುವೆ ಚಿಗುರಿದ ಪ್ರೇಮ ಕಥೆ.

ಹಂಪಿ.. ವ್ಹಾ!! ಒಂದು ಕಾಲಕ್ಕೆ ವೈಭವಕ್ಕೆ ತದ್ರೂಪಿನಂತೆ ಹಿರಿಮೆಯ ಪತಾಕೆ ಹಾರಿಸಿದ ನಾಡು. ಈಗಿನ ಪರಿಸ್ಥಿತಿ ಆಗಿನ ಯಾರೂ ಊಹಿಸಲು ಅಸಾಧ್ಯ ಎಂಬಂತೆ ಆಗಿರುವುದು ವಿಪರ್ಯಾಸವೇ ಸರಿ.
ಹಾಗಿದ್ದರೂ, ಪಳೆಯುಳಿಕೆಗಳ ನಡುವೆಯೇ ನಮ್ಮ ಸಂಸ್ಕೃತಿ ವೈಶಿಷ್ಟ್ಯದ ಹಿರಿಮೆಯನ್ನು ಸಾರುತ್ತಿರುವುದಂತು ಅಷ್ಟೇ ಸತ್ಯ.

ಜಗತ್ತಿನ ಮೂಲೆ ಮೂಲೆಗಳಿಂದ ಹಂಪಿಯ ವೈಭವದ ನೆನಪುಗಳನ್ನು ಮೆಲುಕು ಹಾಕಲು ಎಷ್ಟೋ ಲಕ್ಷ ಮಂದಿ ಭೇಟಿ ಕೊಟ್ಟು, ಸುತ್ತಲೂ ಜನ-ನಿಬಿಡ ಪ್ರದೇಶವಾಗಿದ್ದರೂ, ಬೆಸೆದಿಹ ಬಾಂಧವ್ಯದ ಮೇಲಲ್ಲದೆ ಹುಟ್ಟಿನ ಮೂಲವನ್ನಷ್ಟೇ ಆಧರಿಸಿ ಅನಾಥರೆನಿಸಿಕೊಂಡಿದ್ದರೂ, ಜೀವಕ್ಕೆ ಜೀವ ಬೆಸೆದು, ಒಬ್ಬರ ಪ್ರಾಣಕ್ಕೆ ಒಬ್ಬರು ವಾಯುವಿನಂತೆ ಪ್ರೀತಿಸಿ ಜೀವಿಸುತ್ತಿರುವ ಪ್ರೇಮಿಗಳ ಕಥೆಯೇ ಇಲ್ಲಿ ಪ್ರಸ್ತುತ.

ಹಂಪಿಯ ಪ್ರತಿ ಮೂಲೆಯ ಪರಿಚಯ ಹೊಂದಿರುವ, ಜಾಗದ ಇತಿಹಾಸ ವೈಶಿಷ್ಟ್ಯತೆ ಎಲ್ಲವನ್ನೂ ಅರಿದು ಕುಡಿದ ಯುವಕ ಜಾನಿ. ಅಲ್ಲಿಗೆ ತಾನು ಹೇಗೆ ಬಂದು ಸೇರಿದ ಅಂತ ಯಾರಿಗೂ ಗೊತ್ತಿಲ್ಲ. ಅವನಿಗೂ ಕೂಡ. ಸುಮಾರು ಮೂರು ವರ್ಷದ ಸ್ಫುರದ್ರೂಪಿ ಬಾಲಕ ಹಸಿವಿನಿಂದ ಹಂಪಿಯ ಬೀದಿ ಬೀದಿಗಳಲ್ಲಿ ಅಲೆದು ಸಂತೆ ಬೀದಿ ತಲುಪಿದ. ಅಷ್ಟು ಜನಸಂದಣಿ ಇದ್ದರೂ, ಆ ಪುಟ್ಟ ಬಾಲಕನ ಕಂಡು ಮರುಗುವ ಜೀವತಂತು ಯಾರಲ್ಲೂ ಇರಲಿಲ್ಲ. ಒಬ್ಬ ಮಾಚಯ್ಯನನ್ನು ಬಿಟ್ಟು. ಮಾಚಯ್ಯ ಅಲ್ಲೇ ಸಂತೆ ಬೀದಿಯಲ್ಲಿದ್ದ ಅಕ್ಕಿ ಮಂಡಿಯಲ್ಲಿ ಕೂಲಿ ಮಾಡುತ್ತಿದ್ದ. ಅವನಿಗೂ ಜೊತೆಗಂತ ಯಾರೂ ಇರಲಿಲ್ಲ. ಆ ಪುಟ್ಟ ಬಾಲಕನ ರೋದನೆ ನೋಡಿ ತಾಳಲಾಗದೆ ಹೊತ್ತೊಯ್ದು ಅಲ್ಲೇ ಇದ್ದ ರಂಗಮ್ಮನ ಟಿಫಿನ್ ರೂಮಲ್ಲಿ ತಿಂಡಿ ಕೊಡಿಸಿ, ಯಾರೂ ದಿಕ್ಕು ಇಲ್ಲದ್ದನ್ನು ಗಮನಿಸಿದ ಮಾಚಯ್ಯ ಬಾಲಕನನ್ನು ತನ್ನಲ್ಲಿಯೇ ಇಟ್ಟುಕೊಳ್ಳಲು ನಿರ್ಧರಿಸಿದ. ಅದೇನು ತೋಚಿತೋ ಏನೋ, ಜನಾರ್ಧನ ಅಂತ ಹೆಸರಿಟ್ಟು ಸಲಹತೊಡಗಿದ. ರಂಗಮ್ಮನಿಗೂ ಜನಾರ್ಧನ ಎಂದರೆ ಭಲೇ ಪ್ರೀತಿ, ಅಕ್ಕರೆ.

ಭಾರಿ ಚುರುಕು ಹುಡುಗನಾಗಿದ್ದವ ಮುಂದೆ ಬೆಳೆದು, ಚಿಕ್ಕ ವಯಸ್ಸಿನಿಂದ ಆಟಾಡಿ, ಸುತ್ತಾಡಿ ಮೈಗೂಡಿಸಿಕೊಂಡಿದ್ದ ಹಂಪಿಯ ವಾತಾವರಣ ಅವನನ್ನು ಪ್ರವಾಸಿ ಮಾರ್ಗದರ್ಶಿಯನ್ನಾಗಿ ಮಾಡಿತು. ಅಲ್ಲಿಗೆ ಭೇಟಿ ಕೊಡುತ್ತಿದ್ದ ವಿದೇಶಿ ಪ್ರವಾಸಿಗರು ಅವನನ್ನು "ಜಾನಿ" ಅಂತಲೇ ಕರೆಯುತ್ತಿದ್ದರು. ಕಿಂಚಿತ್ತೂ ಮೋಸ-ವಂಚನೆ ಇಲ್ಲದೆ, ಪಡೆಯುತ್ತಿದ್ದ ಪಗಾರಕ್ಕೆ ಸರಿಯಾಗಿ ಕೆಲಸ ಮಾಡಿ ಹಂಪಿಯಲ್ಲಿ ತುಂಬಾ ಬೇಡಿಕೆಯ ಮಾರ್ಗದರ್ಶಿಯಾಗಿ ಬೆಳೆದು ನಿಂತ.

ಹಂಪಿಯ ಮುಖ್ಯ ಪ್ರೇಕ್ಷಣೀಯ ಸ್ಥಳ, ಅಂದಿನ ವೈಭವೋಪೇತ ವಿಜಯನಗರ ಸಾಮ್ರಾಜ್ಯದ ಆರಾಧ್ಯ ದೈವ ವಿರೂಪಾಕ್ಷ ದೇವಾಲಯ. ಅಲ್ಲೇ ದೇವಸ್ಥಾನದ ಹೊರಗೆ ಪೂಜೆಗೆಂದು ಹಣ್ಣು-ಕಾಯಿ ವ್ಯಾಪಾರ ಮಾಡುತ್ತ ಸಾಧಾರಣ ಜೀವನ ನಡೆಸುತ್ತಿದ್ದ ಶಾಂಭವಿ ಎಂದರೆ ಜಾನಿಗೆ ಪ್ರಾಣ. ಶಾಂಭವಿ ಕೂಡ ಜಾನಿಯನ್ನು ಮನಸಾರೆ ಪ್ರೀತಿಸುತ್ತಿದ್ದಳು. ಬಳ್ಳಾರಿಯಲ್ಲಿ ಯಾವುದೋ ಅನಾಥಾಶ್ರಮದಲ್ಲಿ ಬೆಳೆದು, ಬಾಲ್ಯಾವಸ್ಥೆಗೆ ಬಂದ ನಂತರ ಜೀವನೋಪಾಯವನ್ನು ಅರಸುತ್ತ ಹಂಪಿಗೆ ಬಂದು ಸೇರುತ್ತಾಳೆ. ಅಲ್ಲಿ ನೆರವಾಗೋದು ನಮ್ಮ ಜಾನಿಯ ಅನ್ನಪೂರ್ಣೇಶ್ವರಿ ರಂಗಮ್ಮ. ದುಡಿದು ಜೀವನ ಸಾಗಿಸಿ ಬಾಳ್ವೆ ಕಟ್ಟಿಕೊಳ್ಳುವ ಕನಸು ಹೊತ್ತು ಬಂದಿದ್ದ ಶಾಂಭವಿಗೆ ದೇವಸ್ಥಾನದ ಮುಂದೆ ಅಂಗಡಿ ಹಾಕಿಕೊಳ್ಳಲು ಅನುವು ಮಾಡಿಕೊಟ್ಟಳು. ಕಷ್ಟ, ನೋವು, ಬಾಂಧವ್ಯಹೀನ ಜೀವನವನ್ನೇ ನೋಡಿದ್ದ ಶಾಂಭವಿಗೆ ಆಸರೆ ಸಿಕ್ಕಿದ್ದು ದೈವ ನಿಶ್ಚಯವೇ ಸರಿ ಎಂದೆನಿಸಿತ್ತು.

ಹಾಗೆ ಮೊದಲಾದ ಪರಿಚಯವು, ಅವರದ್ದೇ ಚಿಕ್ಕ ಪ್ರಪಂಚದಲ್ಲಿ ಬದುಕಿನ ಬಗೆಗಿನ ಕಾಳಜಿ, ಜಾಗ್ರತೆ ಹಾಗೂ ಸಂಬಂಧಗಳ ವ್ಯಾಖ್ಯಾನವನ್ನು ಅರಿಯುತ್ತಾ, ಒಬ್ಬರ ಮೇಲೆ ಒಬ್ಬರು ಭಾವುಕ ಸಂಬಂಧವನ್ನು ಬೆಳೆಸಿಕೊಂಡು ಪರಿಣಯದ ಹಾದಿ ಹಿಡಿಯಿತು. ಶ್ರೀಮಂತಿಕೆ ಅಲ್ಲದ, ಸಮಾಧಾನದ, ನೆಮ್ಮದಿಯ ಜೀವನ-ಪ್ರೇರಣೆ ಹೊತ್ತು ಸಾಧಾರಣ ಜೀವನ ನಡೆಸುತ್ತಿದ್ದರು.

ಹಂಪಿಯಲ್ಲಿರುವ ಮಾತಾಂಗ ಬೆಟ್ಟದ ವಿಶೇಷತೆ ಏನು ಅಂದರೆ, ಮೇಲಿನಿಂದ ನೋಡಿದರೆ ಪೂರಾ ಹಂಪಿ ನಗರ ಕಾಣಿಸುತ್ತದೆ. ಅದರಲ್ಲೂ, ರಾತ್ರಿ ಹೊತ್ತು ನೋಡಿದರಂತೂ ಆ ದೃಶ್ಯಾವಳಿಯನ್ನ ಬಣ್ಣಿಸೋದೇ ಅಸಾಧ್ಯ. ವಿಜೃಂಭಿಸುವ ವಿಹಂಗಮ ನೋಟ. ಹಂಪಿಯನ್ನು ಇನ್ನಷ್ಟು ಅಲಂಕರಿಸಲೆಂದೇ ನಿರ್ಧರಿಸಿ ಬಂದಂತೆ ದಿನಕ್ಕೊಂದು ಅಲಂಕಾರಿಕ ರೂಪುರೇಷೆ ತಾಳಿ ಆಗಸದಲ್ಲಿ ಹಾಜರಾಗುವ ನಕ್ಷತ್ರಗಳ ದಂಡು. ಆ ಚಂದನೆಯ ನೋಟವನ್ನು ಸವಿಯೋದಂದ್ರೆ ಶಾಂಭವಿಗೆ ಬಲು ಇಷ್ಟ. ಅದೇ ಕಾರಣಕ್ಕಾಗಿ ಜಾನಿ ಆಕೆಯನ್ನು ಆಗಾಗ ಕರೆತಂದು ಪ್ರೇಮ ನಿವೇದಿಸಿ, ಅಕ್ಕರೆಯ ಮಾತುಗಳಿಂದ ಆಕೆಯ ಪ್ರೇಮವನ್ನು ದುಪ್ಪಟ್ಟು ಮಾಡಿಕೊಳ್ಳುತ್ತಿದ್ದ. ಶಾಂಭವಿಗೋ, ಜಾನಿಯ ಹೆಗಲನ್ನು ಆನಿಸಿ, ತೋಳನ್ನು ಬಳಸಿ ಕೂತು ಹಂಪಿಯ ಸಡಗರವನ್ನು ನೋಡುತ್ತಿದ್ದರೆ ಜೀವನದ ಸಾರ್ಥಕತೆ ಪಡೆದಷ್ಟೇ ಆನಂದ. "ಎಲ್ಲಿದ್ದೆ ನಾನು, ಇಲ್ಲಿಗ್ಯಾಕೆ ಬಂದೆ? ಜಾನಿಯ ಪರಿಚಯ ಹೇಗೆ, ಯಾಕೆ ಆಯ್ತೋ? ನನ್ನ ಜನ್ಮ ಸಾರ್ಥಕ್ಯವು ಜಾನಿಯ ಮಡಿಲಲ್ಲೇ ಇದ್ದದ್ದೇನೋ?"  ಅಂತೆಲ್ಲ ಯೋಚಿಸುತ್ತ ಒಮ್ಮೆ ತಿರುಗಿ ಜಾನಿಯನ್ನೇ ದಿಟ್ಟಿಸಿ ನೋಡುತ್ತಿದ್ದರೆ, ಅವನಿಗೆ ಅವಳ ಭಾವನೆಯೆಲ್ಲ ಅರ್ಥ ಆದವನಂತೆ ಸಮ್ಮತಿಯ ನೋಟದಲ್ಲಿ ಆಕೆಯ ಹಣೆಗೊಂದು ಆಪ್ಯಾಯಮಾನದ ಮುತ್ತನ್ನಿಟ್ಟು ತಲೆ ನೇವರಿಸಿ ಮತ್ತೆ ಹೆಗಲಿಗೆ ಆನಿಸಿಕೊಳ್ಳುತ್ತ ಮೇಲಕ್ಕೊಮ್ಮೆ ನೋಡಿ, ಆ ಅದೃಶ್ಯ ಶಕ್ತಿಗೊಂದು ಧನ್ಯವಾದ ಹೇಳಿ ಮತ್ತೆ ಹಂಪಿಯನ್ನೇ ದಿಟ್ಟಿಸಿ ನೋಡುವತ್ತ ಮರಳುತ್ತಿದ್ದ.

ಜಾನಿ, ದೈನಂದಿನ ಪ್ರಕ್ರಿಯೆಯಂತೆ ಅದೇ ಹುರುಪು-ಚೈತನ್ಯದಲ್ಲಿ ಮನೆಯಿಂದ ಹೊರಟು ಸಿಗುವ ಪ್ರವಾಸಿಗರಿಗೆ ಹಂಪಿಯನ್ನೆಲ್ಲ ಪರಿಚಯ ಮಾಡಿಸುತ್ತಿದ್ದರೆ, ಎಲ್ಲರೂ ಹುಬ್ಬೇರಿಸಿ ಉತ್ಸಾಹದಿಂದ ಆತನನ್ನು ಹಿಂಬಾಲಿಸುತ್ತ-ಆಲಿಸುತ್ತ ನಡೆಯುತ್ತಿದ್ದರು. ಹಂಪಿಯನ್ನು ವಿಶ್ವವೇ ಗಮನಿಸುವಂತೆ ಮಾಡಿದ ವಿಜಯನಗರ ಸಾಮ್ರಾಜ್ಯದಿಂದ ಮೊದಲುಗೊಂಡು, ವಿರೂಪಾಕ್ಷ ದೇವಾಲಯ, ಸಾಸಿವೆ ಕಾಳು ಗಣಪತಿ, ಉಗ್ರ ನರಸಿಂಹ, ಹಜಾರ ರಾಮ ದೇವಸ್ಥಾನ, ಆನೆಗೊಂದಿ, ಬಡವಿ ಲಿಂಗ, ಮಹಾನವಮಿ ದಿಬ್ಬ, ಆನೆ ಲಾಯ ಹೀಗೆ ಹಲವಾರು ಪ್ರೇಕ್ಷಣಿಯ ಸ್ಥಳಗಳನ್ನು ಪರಿಚಯಿಸಿ; ಅನನ್ಯ ಎನಿಸೋಂಥ ಸಪ್ತಸ್ವರ ಸಂಗೀತ ಹೊರಹೊಮ್ಮಿಸುವ ಕಲ್ಲಿನ ಕಂಭಗಳು, ವಿಶ್ವವಿಖ್ಯಾತ ಕಲ್ಲಿನ ರಥ ಹೀಗೆ ಮೊದಲಾದ ಸ್ಮಾರಕಗಳನ್ನು ತೋರಿಸುತ್ತ, ಸಮಯ ಸಿಕ್ಕಾಗಲೆಲ್ಲ ಶಾಂಭವಿಯನ್ನು ಭೇಟಿ ಮಾಡುತ್ತಿದ್ದ.

ಹಂಪಿಯ ಜನಪ್ರಿಯತೆಗೆ ಸುಂದರ-ಸೋಜಿಗ-ಮನೋಹರವಾದ ಇತಿಹಾಸ-ಪರಂಪರೆ ಎಷ್ಟು ಕಾರಣವೋ, ಅಲ್ಲಿ ಹಾಸು ಹೊಕ್ಕಾಗಿ ದಂಧೆಯಾಗಿ ಬೆಳೆದಿರುವ ಮಾದಕ ದ್ರವ್ಯ ವಹಿವಾಟು ಕೂಡ ಅಷ್ಟೇ ಕಾರಣ. ಇದನ್ನು ತಡೆಯಲು ತೀಕ್ಷ್ಣವಾದ ಕಾನೂನು ವ್ಯವಸ್ಥೆ ಇಲ್ಲ. ಬಹಳಷ್ಟು ವಿದೇಶಿಯರನ್ನು ಸೆಳೆಯುತ್ತಿರುವುದು ಕೂಡ ಅದೇ.

ಜಾನಿಗೆ ಒಮ್ಮೆ ವಿದೇಶಿಯರನ್ನು ಹಂಪಿ ಸುತ್ತಿಸುವ ಒಪ್ಪಂದ ಸಿಕ್ಕಾಗ ಶಾಂಭವಿ ಕೋಪಗೊಂಡು ಜಾನಿಯನ್ನು ತರಾಟೆಗೆ ತೆಗೆದುಕೊಂಡಳು. ಜಾನಿಗೆ ಏನಾಗಿತ್ತೋ ಅಂದು, ಸ್ವಲ್ಪ ಹತೋಟಿ ತಪ್ಪಿ ಆಕೆಯನ್ನು ಬೈದು ಹೋಗಿಬಿಟ್ಟಿದ್ದ. ಇದೇನು ಹೊಸತಲ್ಲ. ಜಾನಿಯ ವಾದ ಏನಂದ್ರೆ; ತನ್ನ ಕೆಲಸ ಎಷ್ಟೋ ಅಷ್ಟು ಮಾಡುವುದು, ಯಾರಾದರೇನು. ತಾನಂತೂ ಶಾಮೀಲು ಆಗೋದಿಲ್ಲ ಅಷ್ಟೇ. ಆದರೆ ಶಾಂಭವಿಯದ್ದು; ಇಂಥ ಜನರ ಸಹವಾಸವೇ ಸರಿ ಅಲ್ಲ ಎಂಬುದು.

ಎರಡು ದಿನಗಳ ಬಳಿಕ ಆಕೆಯನ್ನು ಸಮಾಧಾನ ಪಡಿಸಿ ಇನ್ಮೇಲೆ ಇಂಥ ಒಪ್ಪಂದಗಳನ್ನ ತಗೋಳೋದಿಲ್ಲ ಅಂತ ತಿಳಿಸಲು ಆಕೆಯ ಅಂಗಡಿಗೆ ಹೋಗುತ್ತಾನೆ. ಅಂಗಡಿಯ ಬಳಿ ಶಾಂಭವಿಯ ಸುಳಿವೇ ಇಲ್ಲ! ಕೋಪ ಇನ್ನು ತಣ್ಣಗೆ ಆಗಿಲ್ವೇನೋ, ಮನೆಗೆ ಹೋಗಿ ನೋಡುವ ಎಂದು ಮನೆ ಕಡೆಗೆ ಹೆಜ್ಜೆ ಹಾಕುತ್ತಾನೆ. ಅಲ್ಲಿಯೂ ಕಾಣುವುದಿಲ್ಲ. ರಂಗಮ್ಮನನ್ನು ಕೇಳಿದರೆ, " ಬೆಳಿಗ್ಗೇನೆ ಅಂಗಡಿಗೆ ಅಂತ ಹೋದ್ಲಪ್ಪ. ಯಾಕೆ ಅಂಗಡಿ ಹತ್ರ ಇರಲಿಲ್ವಾ?" ಎಂದು ಕೇಳಿದ್ದಕ್ಕೆ, ಸುಮ್ಮನೆ ಗಾಬರಿ ಆಗುತ್ತಾಳೆ ಎಂದು "ಅಂಗಡಿ ಹತ್ರ ಹೋಗಿ ನೋಡ್ಲಿಲ್ಲ,  ಸರಿ ಬರ್ತೀನಿ. ಅಲ್ಲೇ ಹೋಗಿ ಭೇಟಿ ಮಾಡ್ತೀನಿ" ಅಂತ ಸಣ್ಣ ಸುಳ್ಳನ್ನು ಹೇಳಿ ಮುನಿಸಿನ ಮನದನ್ನೆಯನ್ನು ಹುಡುಕಲು ಹೊರಡುತ್ತಾನೆ..

ದಾರಿಯಲ್ಲಿ ಉದ್ವೇಗದಿಂದ ಸಾಗುತ್ತ ಎದುರಿಗೆ ಸಿಕ್ಕ ಸ್ನೇಹಿತರನ್ನೆಲ್ಲ ವಿಚಾರಿಸುತ್ತಾ, ತಾವಿಬ್ಬರೂ ಸಂಧಿಸಿದ್ದ ತಾಣಗಳನ್ನೆಲ್ಲ ಹಾಗೇ ಒಮ್ಮೆ ಪರೀಕ್ಷಿಸುತ್ತ ಸಾಗುತ್ತಾನೆ. ಪ್ರತಿಯೊಂದು ಜಾಗಕ್ಕೆ ಹೋಗುತ್ತಿದ್ದಂತೆ 'ಇಲ್ಲಾದ್ರೂ ಇರ್ತಾಳೆ' ಅನ್ನೋ ನಿರೀಕ್ಷೆ ಬೆಟ್ಟದಷ್ಟಾಗಿ ಅಲ್ಲಿ ಇಲ್ಲದ್ದನ್ನು ಮನಗಂಡು ಸಿಡಿಲು ಬಡಿದವನಂತಾಗಿ ಬೇಸರಗೊಳ್ಳುತ್ತಿದ್ದ. ನಗರದ ಎಲ್ಲ ತಿಳಿದ ಜಾಗಗಳಲ್ಲಿ ಹುಡುಕಿದ ನಂತರ ಬದುಕಿನ ಕೊನೆಯ ಆಶಾಕಿರಣದಂತೆ ಕಾಣುತ್ತಿದ್ದ ಬೆಟ್ಟದ ಕಡೆಗೆ ಓಡುತ್ತಾನೆ. ಒಂದೇ ಉಸಿರಿನಲ್ಲಿ ಕಾಲ್ಕಿತ್ತು, ಬೆಟ್ಟದ ತುದಿಯಲ್ಲಿ ತಾವು ಕೂರುತ್ತಿದ್ದ ಜಾಗಕ್ಕೆ ಹೋಗಿ ನೋಡಿದರೆ ಅಲ್ಲೂ ಕಾಣಿಸುವುದಿಲ್ಲ. ದಿಕ್ಕೇ ತೋಚದಂತಾಗಿ, ಶಕ್ತಿಹೀನನಂತಾಗಿ, ಕುಸಿದು ಬೀಳುತ್ತಾನೆ. ಹಾಗೆ ಕಣ್ಮುಚ್ಚಿರಲು ಒಮ್ಮೆಲೆಗೆ ಶಾಂಭವಿಯೊಂದಿಗೆ ಕಳೆದಂತ ಮಧುರ ಕ್ಷಣಗಳೆಲ್ಲ, ದಿವ್ಯ ಸಂಜೀವಿನಿಯಂತಿದ್ದ ಅವಳ ಮಾತುಗಳೆಲ್ಲ, ಚೈತನ್ಯ ಚಿಲುಮೆಯಂತಿದ್ದ ಅವಳ ಬೆಚ್ಚನೆಯ ಅಪ್ಪುಗೆ, ಎಲ್ಲದರ ನೆನಪು ಒಂದು ಸಿನೆಮಾ ರೀಲನ್ನು ಎಷ್ಟು ವೇಗಕ್ಕೆ ಸಾಧ್ಯವೋ ಅಷ್ಟು ವೇಗವಾಗಿ ತಿರುವಿದರೆ ಕಾಣುವ ಹಾಗೆ ಜಾನಿಯ ಸ್ಮ್ರಿತಿಪಟಲದಲ್ಲಿ ಸುರುಳಿ ಹಾಕುತ್ತಿದ್ದರೆ ತಲೆ ಭಾರದಂತಾಗಿ ಸಿಡಿಯುವುದೊಂದೇ ಬಾಕಿ ಎಂದನಿಸುತ್ತದೆ. ಊರೆಲ್ಲ ಹುಡುಕಿದೆ, ಇನ್ನೆಲ್ಲಿ ಹೋಗಿದ್ದಾಳೋ, ಮುಖ್ಯವಾಗಿ ಹೇಗಿದ್ದಾಳೋ ಎಂದು ಚಿಂತೆಗೀಡಾಗುತ್ತಾನೆ.

ಹೀಗೆ ಧೃತಿಗೆಟ್ಟರೆ ಏನೂ ಪ್ರಯೋಜನವಿಲ್ಲವೆಂದು, ಧೈರ್ಯ ತಂದುಕೊಳ್ಳುತ್ತ ಏನು ಮಾಡೋದೆಂದು ಸರಿಯಾಗಿ ಯೋಚಿಸಲು ನಿರ್ಧರಿಸಿ ಕಣ್ ಮುಚ್ಚಿ ಯಾವುದಾದರೂ ಜಾಗ ಮರೆತನೋ, ಎಲ್ಲೆಲ್ಲಿ ಹುಡುಕಾಡಿದನೊ ಅಲ್ಲೆಲ್ಲ ಏನೇನು ಗಮನಿಸಿದನೊ ಎಂದು ನೆನಪು ಮಾಡಿಕೊಳ್ಳುತ್ತ ಇದ್ದಂತೆ ಒಂದು ಗಲ್ಲಿಯಲ್ಲಿ ಕಂಡೂ ಗಮನಿಸದೆ ಸಾಗಿದ ದೃಶ್ಯ ನೆನಪಾಗಿ ಕುತೂಹಲದಿಂದ ಕಣ್ ಬಿಡುತ್ತಾನೆ.

ಮೊನ್ನೆ ಸಂಜೆ ಆ ಮಾದಕ ದ್ರವ್ಯ ವ್ಯಸನಿ ವಿದೇಶೀಯರೊಂದಿಗೆ ಆದ ಇರಿಸು ಮುರಿಸಿನಿಂದ ನಡೆದ ಸಣ್ಣ ಜಗಳ ನೆನಪಾಗಿ, ದಾರಿಯಲ್ಲಿ ಹುಡುಕುತ್ತ ಬರುವಾಗ ಒಂದು ಗಲ್ಲಿಯಲ್ಲಿ ಅದೇ ವಿದೇಶೀಯರು ಜಾನಿಯನ್ನು ನೋಡಿದೊಡನೆ ಮುಖ ಮರೆಸಿ ಬೇರೆ ರಸ್ತೆಗೆ ತಿರುವು ಪಡೆದದ್ದು ನೆನಪಾಯ್ತು. ಜಾನಿಯೊಂದಿಗೆ ಶಾಂಭವಿ ಇರುತ್ತಿದ್ದದ್ದನ್ನು ಗಮನಿಸಿದ್ದ ವಿದೇಶೀಯರು, ಹಂಪಿಯನ್ನು ತೋರಿಸುತ್ತಿದ್ದ ಜಾನಿಯೊಂದಿಗೆ ಅಂದು ಶಾಂಭವಿಯ ವಿಷಯಯನ್ನು ಪ್ರಸ್ತಾಪಿಸಿ, ಅಮಲಿನಲ್ಲಿದ್ದವರು ಆಕೆಯ ತೇಜೋವಧೆ ಆಗುವಂತೆ ಅಶ್ಲೀಲವಾಗಿ ಮಾತಾಡುತ್ತ ಉನ್ಮತ್ತರಾಗಿದ್ದರು. ಜಾನಿಗೆ ಅದನ್ನೆಲ್ಲ ಸಹಿಕೊಂಡು ಅವರೊಂದಿಗೆ ಮುಂದುವರಿಯುವ ಯಾವುದೇ ಇರಾದೆ-ಕಾರಣ ಇರಲಿಲ್ಲ. ಅವರೆಲ್ಲರ ಮೈ ಮೂಳೆ ಮುರಿಯುವುದನ್ನು ಬಿಟ್ಟು. ಮೊದಲೇ ಅಮಲಿನಲಿದ್ದವರಿಗೆ ಬಡಿಯಲು ಕಷ್ಟವೆನಿಸಲಿಲ್ಲ. ಅಲ್ಲೇ ಇದ್ದವರಲ್ಲಿ ಕೆಲವರು ಬಂದು ಜಾನಿಯನ್ನು ಸಮಾಧಾನ ಪಡಿಸಿರದಿದ್ದರೆ, "ಹಂಪಿಯ ಸರ್ಕಾರಿ ಆಸ್ಪತ್ರೆಯಲ್ಲಿ ಮಾದಕ ವ್ಯಸನದ ವಿದೇಶೀಯರ ಭರ್ತಿ" ಎಂದು ಮರುದಿನದ ಪತ್ರಿಕೇಲಿ ಅಚ್ಚಾಗೋದು ಖಾತ್ರಿ ಆಗ್ತಿತ್ತು.

ಆಗ ರಸ್ತೆ ತಿರುವಿನಲ್ಲಿ ಭಯದಿಂದ ಹೋದರೇನೋ ಎಂಬ ಅಸಡ್ಡೆಯಲ್ಲಿ ಮುಂದೆ ಸಾಗಿದ ಜಾನಿಗೆ ಈಗ ಅದು ನೆನಪಾಗಿ ಅದೇ ಜಿದ್ದನ್ನು ಸಾಧಿಸಿ ಅವರೇನಾದರು ಶಾಂಭವಿಯನ್ನು ಹೊತ್ತೊಯ್ದರೇನೋ ಎಂಬ ಸಂಶಯ ಬಂದು ಧಡಕ್ಕನೆ ಎದ್ದು ಓಡತೊಡಗಿದ.

ಆ ರಸ್ತೆಯ ಆಸುಪಾಸಲ್ಲೆಲ್ಲ ಹುಡುಕಿದ ನಂತರ ಎಲ್ಲೂ ಕಾಣದಿದ್ದಾಗ ಅಲ್ಲೇ ಮೂಲೆಯಲ್ಲಿದ್ದ ಬೀಡ ಅಂಗಡಿಗೆ ಹೋಗಿ 'ಇಲ್ಲಿ ಯಾರಾದರೂ ವಿದೇಶಿಯರನ್ನು ಕಂಡ್ಯ ಅಣ್ಣ?' ಎಂದು ಕೇಳುತ್ತಾನೆ. ಅದಕ್ಕೆ ಬೀಡ ಅಂಗಡಿಯವ, 'ಹೌದು ಕಣಪ್ಪ. ಒಂದು ತಾಸಿನ ಮುಂಚೆ ವಿದೇಶೀಯರ ಒಂದು ಗುಂಪು ತಮ್ಮ ಚೀಲವನ್ನೆಲ್ಲಾ ಹೊತ್ಕೊಂಡು ಇಲ್ಲಿಗೆ ಬಂದ ಬಸ್ಸಿನಲ್ಲಿ ಹೋದ್ರು' ಎಂದು ಹೇಳುತ್ತಾನೆ. ಕೇಳಿದವನೆ ಜಾನಿಗೆ ಮತ್ತೆ ದಿಕ್ಕು ತೋಚದಂತಾಗುತ್ತದೆ. ಬೀಡ ಅಂಗಡಿಯನು ಜಾನಿಯನ್ನು ಗಮನಿಸಿ 'ಏನಾಯ್ತಪ್ಪ, ದುಡ್ಡು ಕೊಡದಿರ ಮೋಸ ಮಾಡಿ ಹೋಗ್ಬಿಟ್ರ!' ಅಂತ ಕೇಳುತ್ತಾನೆ. ಜಾನಿಗೆ ಶಾಂಭವಿಯ ಯೋಚನೆ ಬಿಟ್ಟು ಬೇರೆ ಏನೂ ತೋಚದೆ, ಯಾರ ಮಾತೂ ಕಿವಿಗೆ ಬೀಳದೆ ಇದ್ದಾಗ ಅಲ್ಲಿ ಒಂದು ಬಸ್ ಬಂದು ನಿಲ್ಲುತ್ತದೆ.

ಆ ಬಸ್ಸಿಂದ ಒಂದು ಪರಿಚಿತ ಆಕಾರ ಇಳಿದು ಬರುತ್ತಿರುವುದನ್ನು ಗಮನಿಸಿದ ಜಾನಿಗೆ; ಎದೆಗೂಡಿನ ಪ್ರಾಣ ಪಕ್ಷಿ ಹೇಳದೆ ಎಲ್ಲೋ ವಿಹಾರಕ್ಕೆಂದು ಹೋಗಿ ಬಂದ ಹಾಗೆ, ಸಂತೆಯ ದೊಂಬಿಯಲ್ಲಿ ಕೈ ಬಿಡದೆ ಸಾಗುತ್ತಿದ್ದ ಮಗುವೊಂದು ಅಚಾನಕ್ಕಾಗಿ ಕಳೆದು ಹೋಗಿ ಮತ್ತೆ ಕಂಡ ಹಾಗೆ, ಕಳೆದುಕೊಂಡ ಆಟಿಗೆಯು ಮಗುವಿಗೆ ಸಿಕ್ಕಾಗ ಆಗುವ ಅನುಭವದ ಹಾಗೆಲ್ಲ ಅನ್ನಿಸಿ, ಅದು ಶಾಂಭವಿಯೇ ಎಂದು ಖಾತ್ರಿ ಮಾಡಿಕೊಳ್ಳಲು ಕಣ್ಣುಜ್ಜಿಕೊಂಡು ಓಡಿ ಹೋಗಿ ಆಕೆಯ ಮುಂದೆ ನಿಂತುಕೊಂಡನು. ಶಾಂಭವಿಯು ಅನಿರೀಕ್ಷಿತವಾಗಿ ಜಾನಿಯನ್ನು ಕಂಡೊಡನೆ "ನೀ ಇಲ್ಲೇನು ಮಾಡುತ್ತಿದೀಯಾ? ಇವತ್ತು ಕೆಲಸಕ್ಕೇನು ರಜೆನ, ಇಷ್ಟು ಬೇಗ ಕೆಲಸದಿಂದ ಬಂದಿದಿಯ! ಇಲ್ಲ ನೀನೇ ಬಿಡುವು ಮಾಡಿಕೊಂಡೆಯ? ನಂಗೆ ಬೇಕಾದಾಗ ಮಾತ್ರ ದಮ್ಮಯ್ಯ ಅಂದ್ರು ಪುರುಸೊತ್ತು ಮಾಡ್ಕೊಳೋದಿಲ್ಲ, ಅಷ್ಟೇ ಬಿಡು ನನ್ ಮೇಲೆ ಎಲ್ಲಿ ಪ್ರೀತಿ ನಿಂಗೆ!!? ನಂಗಂತೂ ಸಮಯ...." ಅಂತೆಲ್ಲ ಮಾತಿನ ಮೇಲೆ ಮಾತಾಡುತ್ತಿದ್ದರೆ, ಜಾನಿ ತನ್ನ ಅಂಗೈಯ್ಯಿಂದ ಆಕೆಯ ಬಾಯಿ ಮುಚ್ಚಿ, "ಸಾಕು ಮಾಡು ಮಾರಾಯ್ತಿ. ಆಗ್ಲಿಂದ ನಿಂಗಾಗಿ ಹುಡುಕಿ ಹುಡುಕಿ ತುಂಬಾ ದಣಿವಾಗಿದೀನಿ. ನಿನ್ನ ನೋಡಿ ಎಲ್ಲೋ ಹೋದ ಜೀವ ಬಂದಂತಾಗಿದೆ." ಎಂದು ಬಿಕ್ಕುತ್ತಾ ಶಾಂಭವಿಯನ್ನು ಬಿಗಿದು ಅಪ್ಪಿಕೊಳ್ಳುತ್ತಾನೆ.


"ಅಯ್ಯೋ, ನಿನ್ನನ್ನು ಬಿಟ್ಟು ಎಲ್ಲಿ ಕಳೆದು ಹೋಗ್ಲಿ. ನಾಳೆ ನಿನ್ನ ಜನುಮ ದಿನ ಅಲ್ವಾ. ಪೇಟೆಗೆ ಹೋಗಿದ್ದೆ ಉಡುಗೊರೆ ತರೋಣ ಅಂತ. ಹಾಗೇ ಅಲ್ಲಿ ಪರಿಚಯದವ್ರು ಸಿಕ್ಕಿದ್ರಿಂದ ಕಾಲಹರಣ ಆಗೋಯ್ತು. ಅದ್ಕೆ ನಿಧಾನ ಬಂದೆ." ಎನ್ನುತ್ತ ಜಾನಿಯ ಕೆನ್ನೆಗಳನ್ನು ತನ್ನ ಬೊಗಸೆಯಲ್ಲಿ ಹಿಡಿದು ನಲ್ಮೆಯ ನಗೆ ಬೀರುತ್ತಾ "ಬಾ ಮನೆಗೆ ಹೋಗುವ. ಬೆಳಿಗ್ಗೆ ಬೇಗ ಎದ್ದು ವಿರೂಪಾಕ್ಷನ ದರ್ಶನ ಮಾಡಿ ಆಶೀರ್ವಾದ ಪಡೆಯುವ. ನಮಗೆ ಬೇಗ ಮದ್ವೆ ಆಗ್ಲಿ ಅಂತ.." ಎಂದು ಸಣ್ಣ ನಾಚಿಕೆಯ ನಗೆ ಬೀರುತ್ತಾ, ಇಬ್ಬರೂ ಕಿರುಬೆರಳುಗಳಿಗೆ ಪ್ರೇಮದ ಬೀಗ ಜಡಿದು ಮನೆಯ ಕಡೆ ನಡೆದು ಹೋದರು.