ಯೋಗಸಾಹಿತ್ಯ

ಯೋಗಸಾಹಿತ್ಯ
ಭಾವನೆಗಳ ಅಂಗಳದಲಿ ಪದಗಳ ಓಡಾಟ...!!

Sunday, July 27, 2025

ಇನ್ನೆಲ್ಲಿ ಮಿತಿಯು..!?

ನಾಚಿಕೆಯೇ ನಿಲುವಾಗಿ,

ನನ್ನ ಸೆಳೆಯೋ ಸಲುವಾಗಿ,

ಬೆಳಕೊಂದು ರೂಪ ತಳೆದಂತೆ;

ತಾರಗಳೇ ಬೆರಗಾಗಿ,

ಬೇಡುತಲಿ ತಲೆಬಾಗಿ,

ಹೊಳಪೊಂದ ಕಾಡಿ ಪಡೆವಂತೆ;

ಸೀರೆಯಾ ಸೆರೆಯಲ್ಲಿ,

ಭಾವನೆಯ ತೊರೆಯಲ್ಲಿ,

ಸಂದಿಗ್ಧದಂತೆನ್ನ ಸ್ಥಿತಿಯು;

ಸೌಂದರ್ಯ ಚೇತನವೇ,

ನಡೆಯುತಲಿ ರಮಿಸಿರಲು,

ಆಲೋಚನೆಗಿನ್ನಿಲ್ಲ ಮಿತಿಯು..

ಮರೆತೋಯ್ತು ಮಾತು..!!

ಚೆಲುವಿನಾ ಉತ್ತುಂಗ,

ಮೋಹ ಭಾವತರಂಗ,

ಎನ್ನೊಡಲ ಸೀಳಿ ಬರುವಂತೆ;

ಕಡು ಚೇಷ್ಟೆಯ ಮಾರ್ಪು,

ಮಡಿವಂತಿಕೆಯ ಕಾಪು,

ಭೇದಿಸಿ ಸುಳಿ ಏಳುವಂತೆ;

ಆಷಾಢಕಿನ್ನು ಮೆಲುವಾದ ಗಡಿಪಾರು,

ಶ್ರಾವಣವು ಜೀವಕದೆ ಸಲೀಲ ಸೇತು;

ಮಾಸಮೊತ್ತದ ದೂರ ಕ್ಷಣಿಸೆ ಒಂಚೂರು,

ಬಾಹುಬಂಧನ ಶುರುವು ಇನ್ನೆಲ್ಲಿ ಮಾತು..

ಮರೆತೋಯ್ತು ಮಾತು..

ನೀನೇ ನೇರ ಹೊಣೆ..!!

ನಿನ್ನೊನಪು ಒಯ್ಯಾರ

ಗುಣಿಸುವಾ ಸಲುವೇ,

ಲೋಕದೆಲ್ಲಾ ಚೆಲುವ

ಮಣಿಸುವಾ ಸಲುವೇ,

ನೀನುಟ್ಟ ಸೀರೆಯದು ಬರಿ ಸೀರೆಯಲ್ಲ-

ನನ್ನುಸಿರ ಕ್ಷಣ ನಿಲಿಸೋ,

ಎದೆಬಡಿತ ಲಯ ಕೆಡಿಸೋ,

ಕಣ್ ಮಿಟುಕಿಸೊ ಸಹಜ ಕ್ರಿಯೆ

ಸ್ತಂಭಿಸಿ ಬೆರಗಾಗಿಸೋ,

ನಿನ್ನ ಕಡುಕೀಟಲೆಗೆ ಇಲ್ಲ ಕಡೆಗಣನೆ,

ಮುಂದಿನ ಪರಿಣಾಮಕೆಲ್ಲ ನೀನೆ ನೀರ ಹೊಣೆ..

ನೀನೇ ನೇರ ಹೊಣೆ..

Wednesday, July 16, 2025

ಮುಗಿವಿರದ ಯಾನ..

ಮಧುರ ರಮ್ಯವೀ ಅಮೂರ್ತ ಪ್ರೇಮ,
ದಶದಿಕ್ಕು ನೆಲೆಸೋ ಅಪೂರ್ವ ಧಾಮ;
ನಿಸ್ವಾರ್ಥ ಮೆರೆವ ಅಖಂಡನೀಯ,
ಒಳಿತನೇ ಬಯಸೋ ಅಭೇದ್ಯ ಮಾಯ..
ಮಾತು ಇಲ್ಲದೆ ಮೌನವೇ ತಿಳಿಸೋ
ಭಾವಲಹರಿಯದು ಚಂದ ರಮಣೀಯ;
ಅನಂತ ಸುನೀತ ನಿರ್ಮಲಾಲೀಲ
ಬಂಧ ಭಾವೈಕ್ಯದ ಉಲ್ಲಾಸಮೇಳ..
ಎದೆಬಡಿತ ಸಪ್ಪಳವ ಮೇಳೈಸೋ ಗಾನ,
ನಾ-ನೀನು ನೀ-ನಾನಾಗೋ ಮುಗಿವಿರದ ಯಾನ..

Thursday, July 3, 2025

ಗಂಗಾಪ್ರಹಾರ..!!!



ಚಂದ್ರಚೂಡನಿಗೂ ಬಿಡಲಿಲ್ಲವಂತೆ

ಗಂಗಾಪ್ರಕೋಪದ ಗೊಡವೆ;

ವಿಷಕಂಠನಿಗೂ ಉಸಿರು ಕಟ್ಟುವಂತೆ

ಜಲಪ್ರಳಯದಾ ಡಾವೆ..

ಮುನಿಸು ಸಾಕಿನ್ನು ಶಾಂತವಾಗೆಂಬೋ

ಮನವಿಗಿನ್ನಿಲ್ಲ ಗಣನೆ,

ಕಡುಕೋಪದಾ ತೊರೆಗೆ ಸಿಕ್ಕಾದಮೇಲೆ

ಆಶ್ಚರ್ಯಚಕಿತ ಬವಣೆ...