ಯೋಗಸಾಹಿತ್ಯ

ಯೋಗಸಾಹಿತ್ಯ
ಭಾವನೆಗಳ ಅಂಗಳದಲಿ ಪದಗಳ ಓಡಾಟ...!!

Tuesday, October 11, 2022

ಹುರುಪು ಮೂಡಲಿ...

ನೊಂದು ಬರೆದ ಕವನ ನಂದು,

ಕಣ್ ಬಿಂದು ಶಾಯಿ ಆಯಿತಿಂದು.

ಬೆರಳ ಬಳಸಿ ಕಣ್ಣ ಒರೆಸಿ

ಅದೇ ಬೆರಳು ತಾ ಪದವ ಬೆರೆಸಿ;

ಭಾವ ಲುಪ್ತತೆ ಗುಪ್ತಗೊಳಿಸೊ

ಯಾವ ಯೋಚನೆ ಇಲ್ಲವೆನಿಸಿ.

          ಸಾಕು ಮಾಡು ಮನವೆ ಇನ್ನ,

          ನಕಲಿ ನಗುವ ಕವಚವನ್ನ.

          ಮುಕ್ತಗೊಳಿಸು ಮೂಕ ಮೌನ

          ಕಣ್ಣ ಜಲಧಿ ಕರಗಲಿ,

          ಶಕ್ತಗೊಳಿಸಾಲೋಚನೇನ

          ಸಣ್ಣ ಹುರುಪು ಮೂಡಲಿ.

ಬದುಕು..!!!

ಬದುಕು ಹೊಲಿಗೆ ಕಳಚಿದ ತುಂಡು ಬಟ್ಟೆ - 

ತೇಪೆ ಕಾರ್ಯವೇ ನಿರಂತರ ಕಸುಬು;

‘ಈಗ ಸರಿ’ ಎಂದರದೇ -

ಮುಂದಿನ ರಂಧ್ರದ ಬುನಾದಿ!


ಬಾಳೊಂದು ಏಕತಾನತೆಯ ಅರಿವೆ

ಅಂದುಕೊಂಡದ್ದೆ ಸುಳ್ಳಾಯ್ತೆ.!?

ಸಾವಿರ-ಸಾವಿರ ಬಣ್ಣ-ಬಣ್ಣದ

ಓರೆಕೋರೆಗಳ ದಂಡಂಥ ಕೌದಿಯದು..!


‘ಚಿತ್ತಾರ ಬಣ್ಣಗಳ ಚೆಂದವದು ಆಹಾ’ - 

ಎಂದು ಖುಷಿಯಲ್ಲಿ ಬೀಗುವುದೋ?

ಇಲ್ಲ, ಹುಳುಕಿನ ರಂಧ್ರಗಳ ಮುಚ್ಚಿರುವ

ನೊಂದ ಹಲವು ಭಾವಗಳ ಗೋರಿಗಳೋ !?


ತೇಪೆ ಸಹಿತ ಬಾಳ್ವೆಯಲ್ಲಿ ಬಿರುಕು ರಹಿತ ಬಾಳಲು,

ನೆಮ್ಮದಿಯೇ ನೂಲು ಸಾಂತ್ವನವೇ ಸೂಜಿ.. 

ಮಗರಾಯನ ಜೊತೆ ನಡಿಗೆ..



ಸಂಜೆ ನೇಸರನೆಡೆಗೆ

ಇರೆ ನಮ್ಮ ಕಾಲ್ನಡಿಗೆ -

ನಗುಮೊಗದಿ ಕೈಪಿಡಿದ ಮಗರಾಯನು

ತೊದಲುತಲಿ ಕೇಳಿದನು - 'ಅಪ್ಪ ಎಲ್ಲಿಗೆ'?

ಆ ಸಣ್ಣ ಕಣ್ಣಿನ 

ಬಹು ದೊಡ್ಡ ಪ್ರಶ್ನೆಗೆ

ಖುಷಿಯ ಉತ್ತರದಿ ನಾನು ಹೀಗೆಂದೆನು -

'ಮನೆಗೆ ಹೋಗೋಕೆ ಸೂರಿ ಮಾಮಂಗೆ ಟೈಮಾಯ್ತು,

ಟಾಟಾ ಹೇಳೋಕಂತ ಅಗೋ ಅಲ್ಲಿಗೆ..'