ಯೋಗಸಾಹಿತ್ಯ

ಯೋಗಸಾಹಿತ್ಯ
ಭಾವನೆಗಳ ಅಂಗಳದಲಿ ಪದಗಳ ಓಡಾಟ...!!

Monday, November 27, 2023

ತುಷ್ಟಿ..!!!


ಸೆಲೆ ನಮ್ಮದೆಲ್ಲಿ? ನೆಲೆ ನಮ್ಮದೆಲ್ಲಿ?

ಗುಳೆ ಕಿತ್ತ ಜೀವನಕೆ ನಿಲ್ದಾಣವೆಲ್ಲಿ?

ಆ ನಾಡು ಈ ನಾಡು ಬೀಡೆಲ್ಲ ಸುತ್ತಲು,

ಪಯಣದ ಬೆನ್ನೇರಿ ಸವೆದಷ್ಟೂ ದಾರಿ.!


ಸಧ್ಯಕ್ಕೆ ವಿರಮಿಸೆ ಹಾಡದುವೆ ಪುಷ್ಟಿ,

ಕಟ್ಟಿಕೊಂಡಿರೋ ಪುಟ್ಟ ಗೂಡದುವೆ "ತುಷ್ಟಿ"..

Thursday, May 4, 2023

ಅಲೆ...


ಕಡಲ ಮೇಲಿನ ಅಲೆಗಳವು

ಚಂದಿರ ಭುವಿಗೆ ಬರೆದ ಕವಿತೆಯ ಸಾಲು,

ತೀರದಪ್ಪುಗೆಯ ನೀಡೆ ತಂದಿಹನು

ಭಾವದೇರಿಳಿತಗಳ ಬೆಚ್ಚನೆಯ ಶಾಲು..


ಒಂದರ ಹಿಂದೆ ಸಾವಿರ ಸರದಿ

ಒಲೈಸೋ ಆಸೇಲೂ ಬೆಂಬಿಡದ ಸವಾಲು,

ಕಂದರದ ಹಂದರದಡಿ ತುಡಿವ-

ಅಲೆಗಳವು ಭುವಿಗಾಲಿಂಗನದ ರುಮಾಲು..


ಸೂರ್ಯಾಸ್ತದ ಆದಿಗೆ ಶುರುವು

ಶಶಿ ಭುವಿಯ ವರಿಸುವ ಕಮಾಲು,

ಅಲೆಗಳೆತ್ತರವು ಧುಮ್ಮಿಕ್ಕಲು

ಅನುರಣಿಸಿದೆ ಭಾವೋತ್ಕಟತೆಯ ಖಯಾಲು.


ಚಂದಿರ ಭುವಿಯ ಮೈಹೊಳಪಿಗೆ

ಬೆಳಗಿದನು ಕಣ್ಮಿಂಚಿನ ಕಂದೀಲು;

ಆಯಸ್ಕಾಂತೀಯ ಸೆಳವಿಗೆ,

ಆಮಂತ್ರಣದ ನಲಿವಿಗೆ -

ರಂಗೋಲಿ ಬಿಡಿಸಲು ಭೂರಮೆಯ ಅಂಗಾಲು

ಅಲೆಗಳಪ್ಪಳಿಸಲು ಕಡಲ ಒಡಲ ಮಡಿಲೆಲ್ಲವು ಕಂಗಾಲು..

Tuesday, May 2, 2023

ಮಳೆ-ಬಿಂದು


ಹೂವು-ಎಲೆ ಮಳೆಯಲ್ಲಿ ಮಿಂದು

ಬಿಂದು ಬಿಂದು ಕಂಗೊಳಿಪಲಿಂದು

ನಲ್ಲೆ ಕಂಗಳ ನೆನಪು ತಂದು - 

ಮನಸು ಪ್ರಫುಲ್ಲವಾಗಿದೆ,

ಸನಿಹ ಸಲ್ಲಾಪ ಬೇಡಿದೆ..

Tuesday, January 31, 2023

ಸಂಧ್ಯಾಗಾನ..!!!

ಇನ ಮನ ಮೋಹನ ಸಂಧ್ಯಾಗಾನ

ಕಣಕಣ ಅನುರಣ ಮದನ ಪುರಾಣ;

ಸಂಚಿತಕರ್ಮ ಶೃತಿ ತಿಲ್ಲಾನ - 

ಮುಂಚಿತ ಸೂಚನೆ ಇರದಾ ಕದನ.

ಆಲಿಂಗನವೇ ಮೆದು ಸಂಧಾನ,

ಚುಂಬನ ದಳ್ಳುರಿ ತಾ ಸೋಪಾನ.

ಬಾಹುಬಂಧನ ಅಮಲಲಿ ನಯನ,

ಝೇಂಕಾರಕೆ ತನು ನಡೆಸಿದೆ ದಹನ.

ಮಿಲನವು ಬಾಳ್ವೆಯ ಸರಾಗಚರಣ,

ನಿರಾಳ ಕಿರಣಿಸೋ ಅಂತಃಕರಣ...