ಹಸಿರ ಸೆಲೆಯನು ಉಣಿಸೊ ಹೊಳೆಯಾಗಬೇಡ,
ಬರಡು ಮನವ ತಣಿಸೊ ಮಳೆಯಾಗು ಸಾಕು..
ಕೋಗಿಲೆಗೆ ಸ್ವರ ನೀಡುವೆ ನೀನೆಂದೆನಬೇಡ,
ಮೂಗನಿಗೆ ದನಿಯಾಗಿ ಜೊತೆ ನಿಲ್ಲು ಸಾಕು..!
ಇರುಳ ಆಗಸದಿ ಚುಕ್ಕಿ ನೀನಾಗಲುಬೇಡ,
ಮಬ್ಬು ಕವಿದವಗೆ ಬೆಳಕ ನೀಡಿರದುವೆ ಸಾಕು..
ಕಾಮನಾ ಬಿಲ್ಲಿಗೆ ಬಣ್ಣ ನೀ ಸೇರಿಸಲು ಬೇಡ,
ಮಾಸಿದ ಚಿತ್ರಕೆ ಬಣ್ಣ ನೀ ತುಂಬು ಸಾಕು..!
ಚಿಗರೆಗೆ ಓಡುವುದ ನೀ ಕಲಿಸಲು ಬೇಡ,
ಹೆಳವನಿಗೆ ಸರಿದಾಡೆ ಜೊತೆಯಾಗು ಸಾಕು..
ಹಸಿರು ಮರಕೆ ಎಲೆಯು ನೀನಾಗಲುಬೇಡ,
ಒಣಗಿದ ಕೊಂಬೆಯಲಿ ಸಣ್ಣ ತಳಿರಾಗು ಸಾಕು..!
ಬೀಸೊ ಗಾಳಿಗೆ ಕಂಪ ನೀ ತುಂಬಲು ಬೇಡ,
ಬಸವಳಿದವನ ಉಳಿಸೊ ಉಸಿರಾಗು ಸಾಕು..
ಹರಿವ ನೀರಿಗೆ ದಾರಿ ನೀ ತೋರಲು ಬೇಡ,
ನಿಂತ ಜೀವನವ ಮುನ್ನಡೆಸಿದರದುವೆ ಸಾಕು..ಅಷ್ಟೇ ಸಾಕು..!!