ಮನೆಯೆಂದರೆ ಬರಿ ನೆಲೆಯಲ್ಲವದು -
ಕನಸು ನನಸಾದ ವಾಸ್ತವದ ಅರುಹು,
ಬಯಕೆ-ಬವಣೆಗಳ ಫಲಿತಕದೇ ಕುರುಹು,
ಭಾವಗಡಲ ಮಿಲನ ಸೂಚಿ
ತ್ಯಾಗದೊಪ್ಪಂದ ನದಿಯ ಸರಹು..
ಮನೆಯೆಂದರೆ ಬರಿ ನೆಲೆಯಲ್ಲವದು -
ಸ್ವಂತ ಸೂರಿನದ್ದೇ ಮೆಲುಕು,
ಆಸೆಯಳತೆಗೆ ಇಲ್ಲ ಅಳುಕು,
ಇಷ್ಟಾರ್ಜಿತಕ್ಕೆ ಕೈಯ ಚಾಚಿ
ಹಂತ-ಹಂತ ಜೀವಂತ ಸೆಳಕು.
ಮನೆಯೆಂದರೆ ಬರಿ ನೆಲೆಯಲ್ಲವದು -
ಪ್ರತಿ ಗೋಡೆಯಾ ಹಾಸ,
ನೆಲ-ಮಾಳಿಗೆ ಖಾಸಾ,
ಕಾರ್ಪಣ್ಯವೇ ಕೊಂಚ ನಾಚಿ
ಸಾಧನೆ-ಶಿಖರ ತಲುಪಿದ ಭಾಸ..
ಮನೆಯೆಂದರೆ ಬರಿ ನೆಲೆಯಲ್ಲವದು -
ನಿಟ್ಟುಸಿರಿನ ಅನಾವರಣ,
ಸೋಲೊಪ್ಪದ ನಿರಾಕರಣ,
ತೀವ್ರ ಸಾಧನೆಯ ಬಾಲಂಗೋಚಿ
ಫಲಿಸಿ ಶ್ರುತಿಸೋ ಅಂತಃಕರಣ..