ಯೋಗಸಾಹಿತ್ಯ

ಯೋಗಸಾಹಿತ್ಯ
ಭಾವನೆಗಳ ಅಂಗಳದಲಿ ಪದಗಳ ಓಡಾಟ...!!

Tuesday, March 28, 2017

ಯುಗಾದಿ..

ಹೊಸ ದಿನ, ಹೊಸ ಮನ, ವಿನೂತನ;
ಬೇವು-ಬೆಲ್ಲಗಳ ಸಮಾಗಮ.
ತಳಿರು-ತೋರಣ ಓಳಿಗೆ ಹೂರಣ,
ಮಾಮರ ಕೋಗಿಲೆ ಸರೀಗಮ.
ಸುಂದರ ವರುಷ, ನಂದನ ಹರುಷ -
ಹೊಸ ಸಂವತ್ಸರ ಆಗಮನ;
ಕಳೆದಿರೋ ಎಲ್ಲ ನೋವನು ಅಳಿಸಿ,
ಪ್ರೀತಿ-ಸ್ನೇಹ-ಬಾಂಧವ್ಯವ ಗುಣಿಸಿ,
ಮೊಳಗಲಿ ಬದುಕಿನ ಹೊಸ ಗಾನ...

'ಯುಗಾದಿ' ಹಬ್ಬದ ಹಾರ್ಧಿಕ ಶುಭಾಶಯಗಳು...

Sunday, March 5, 2017

ಅಪ್ಪುಗೆಯ ಸಂಧಾನ...

ಚುಂಬನ ಚಂದನ ಕೆನ್ನೆಗೆ ಲೇಪನ,
ಅಧರದ ಸಿಂಚನ ಮತ್ತಿನ ಮಾಪನ;
ನೂತನ ಭಾವದ ಚೇತನ ರಮಿಸಲು-
ನಯನವು ನಡೆಸಿದೆ ಮಿಲನದ ಕದನ.

ತೋಳ್ಗೆ ತೋಳ್ಬೆಸೆದು ಮೌನದಿ ಗಾಯನ,
ಕೊಂಚ ಬೆದರುತಲಿ ಜನಿಸಿದ ಮದನ;
ನಿನ್ನಯ ಸನಿಹವೇ ನಂದನವೆನಿಸಲು-
ಮೈ ಝುಂಮ್ಮೆನಿಸಿದೆ ನುಡಿ ಸಂಚಲನ.

ನಡೆಸುವ ನಾವೇ ಒಲವಿನ ಮಂಥನ,
ದೂರದ ಭಾವಕೆ ಇಂದೇ ಪತನ;
ನಮ್ಮೀ ನಲುಮೆಯ ಕಥನ ರಮಿಸಲು-
ಜರುಗಲಿ ಅಪ್ಪುಗೆ ಕಿರು ಸಂಧಾನ.