ಕಿರುಬೆರಳ ನೀ ಹಿಡಿದು ನನ್ನೊಂದಿಗೆ ನಡೆದಂತೆ,
ನಡೆಯುತಲಿ ಮೆಲ್ಲನೆಯೇ ಸಪ್ತಪದಿ ತುಳಿದಂತೆ,
ಹಾಲುಗೆನ್ನೆಯ ಹೆಣ್ಣೆ ಮನದೊಡತಿ ನೀನಾದಂತೆ,
ಕನಸೊಂದು ಮೂಡಿದೆ ನೀ ಕೇಳೆಯ..!?
ಮನಸಿನ ತಿಳಿ ಹಾಳೆಯಲಿ ಕವಿತೆಯದು ಬರೆದಂತೆ,
ನಿನ್ನ ನೆನಪ ಸ್ಫೂರ್ತಿಯಲಿ ಲೇಖನಿಯು ಸರಿದಂತೆ,
ಮುದ್ದಾದ ನಿನ್ನ ಹೆಸರೇ ಶೀರ್ಷಿಕೆಯು ಆದಂತೆ,
ಕಲ್ಪನೆಯದು ಕಾಡಿದೆ ನೀ ಕೇಳೆಯ..!?
ಕಣ್ಣ ನೋಟ ಬೀರಲದುವೆ ಕಾಡತೂಸು ಹೊರಟಂತೆ,
ಪ್ರೇಮ ಭಾವದಂತೆ ಬಂದು ಹೃದಯಕೆ ಮುತ್ತಿಟ್ಟಂತೆ,
'ನೀನೆ ನನ್ನ ಇನಿಯ'ನೆಂಬ ಅಮೃತವಾಣಿ ನುಡಿದಂತೆ,
ಯೋಚನೆಯದು ಸ್ಫುರಿಸಿದೆ ನೀ ಕೇಳೆಯ..!?
ಭಾವಲೋಕ ಭಂಡಾರಕೆ ಧಾತುವೆ ನೀನಾದಂತೆ,
ಪ್ರೇಮದ ಅಣು ಅಣುವಿಗೂ ನೀ ಉಣಿಸಿ ಪೊರೆದಂತೆ,
ಒಡಲ ಸಂಕುಲವೆಲ್ಲ ನಿನ್ನ ಆಧರಿಸಿ ಕುಳಿತಂತೆ,
ನಿಜವದುವೆ ನಿಂತಿದೆ ನೀ ನೋಡೆಯ..ನೀ ನೋಡೆಯ..!?
No comments:
Post a Comment