ಯೋಗಸಾಹಿತ್ಯ

ಯೋಗಸಾಹಿತ್ಯ
ಭಾವನೆಗಳ ಅಂಗಳದಲಿ ಪದಗಳ ಓಡಾಟ...!!

Sunday, November 16, 2025

ಕರ್ಮ ಸಿದ್ದಾಂತ..!!

ಕರ್ಮವೆಂಬುದು ಕೇವಲ ಕ್ರಿಯೆ ತಾನು ಅಲ್ಲ -

ಭವಿತದ ಕನ್ನಡಿಯು

ಫಲನೀಡೊ ಸಸಿಯು,

ಕಾರ್ಪಣ್ಯ ರಹಿತಕ್ಕೆ

ಹಚ್ಚಿಡುವ ಸೊಡರು.

ಕರ್ಮವೆಂಬುದು ಕೇವಲ ಕ್ರಿಯೆ ತಾನು ಅಲ್ಲ -

ಮುಂದಿರುವ ದಾರಿಗೆ

ನಕಾಶೆಯ ಸುಳುಹು,

ಪ್ರತಿ ಹೆಜ್ಜೆ- ತಿರುವಿಗದೇ

ಬೆಳಕಿನಾ ಕಿಡಿಯು.

ಕರ್ಮವೆಂಬುದು ಕೇವಲ ಕ್ರಿಯೆ ತಾನು ಅಲ್ಲ -

ಕೊಟ್ಟು ಪಡೆವುದರ

ಉಳಿತಾಯ ಖಾತೆ,

ಬಡ್ಡಿಯ ಏರಿಳಿಕೆಗೆ

ದಿಕ್ಸೂಚಿ ಗುರುವು..

Friday, August 15, 2025

ಮನೆ..!!

ಮನೆಯೆಂದರೆ ಬರಿ ನೆಲೆಯಲ್ಲವದು -

ಕನಸು ನನಸಾದ ವಾಸ್ತವದ ಅರುಹು,

ಬಯಕೆ-ಬವಣೆಗಳ ಫಲಿತಕದೇ ಕುರುಹು,

ಭಾವಗಡಲ ಮಿಲನ ಸೂಚಿ

ತ್ಯಾಗದೊಪ್ಪಂದ ನದಿಯ ಸರಹು..


ಮನೆಯೆಂದರೆ ಬರಿ ನೆಲೆಯಲ್ಲವದು -

ಸ್ವಂತ ಸೂರಿನದ್ದೇ ಮೆಲುಕು,

ಆಸೆಯಳತೆಗೆ ಇಲ್ಲ ಅಳುಕು,

ಇಷ್ಟಾರ್ಜಿತಕ್ಕೆ ಕೈಯ ಚಾಚಿ

ಹಂತ-ಹಂತ ಜೀವಂತ ಸೆಳಕು.


ಮನೆಯೆಂದರೆ ಬರಿ ನೆಲೆಯಲ್ಲವದು -

ಪ್ರತಿ ಗೋಡೆಯಾ ಹಾಸ,

ನೆಲ-ಮಾಳಿಗೆ ಖಾಸಾ,

ಕಾರ್ಪಣ್ಯವೇ ಕೊಂಚ ನಾಚಿ

ಸಾಧನೆ-ಶಿಖರ ತಲುಪಿದ ಭಾಸ..


ಮನೆಯೆಂದರೆ ಬರಿ ನೆಲೆಯಲ್ಲವದು -

ನಿಟ್ಟುಸಿರಿನ ಅನಾವರಣ,

ಸೋಲೊಪ್ಪದ ನಿರಾಕರಣ,

ತೀವ್ರ ಸಾಧನೆಯ ಬಾಲಂಗೋಚಿ

ಫಲಿಸಿ ಶ್ರುತಿಸೋ ಅಂತಃಕರಣ..

Friday, August 8, 2025

ನಿಲ್ದಾಣರಹಿತ ಜೀವನ..!!

ಇರುವಿಕೆಯ ಅರಿವಿಲ್ಲ

ಬರುವಿಕೆಯ ಅರಿವಿಲ್ಲ

ನಿಲ್ದಾಣವಂತೂ ಎಲ್ಲುಂಟೊ ಅರಿವಿಲ್ಲ..

ತಡೆರಹಿತ ರೈಲೆಂಬ ಜೀವನದ ಬಂಡಿಯಿದು

ಎಳೆದು ನಿಲ್ಲಿಸಲು ಚೈನಂತು ಸಿಗಲಿಲ್ಲ!

ಬಂದಾಗ ಬಂದೆ, ಇದ್ದಾಗ ಇದ್ದೆ,

ಹಳೆ ನೆನಪು ಮೆಲುಕಾಕೋ 

ಕಾಲಕ್ಕೆ ಕಾದೆ..

Sunday, July 27, 2025

ಇನ್ನೆಲ್ಲಿ ಮಿತಿಯು..!?

ನಾಚಿಕೆಯೇ ನಿಲುವಾಗಿ,

ನನ್ನ ಸೆಳೆಯೋ ಸಲುವಾಗಿ,

ಬೆಳಕೊಂದು ರೂಪ ತಳೆದಂತೆ;

ತಾರಗಳೇ ಬೆರಗಾಗಿ,

ಬೇಡುತಲಿ ತಲೆಬಾಗಿ,

ಹೊಳಪೊಂದ ಕಾಡಿ ಪಡೆವಂತೆ;

ಸೀರೆಯಾ ಸೆರೆಯಲ್ಲಿ,

ಭಾವನೆಯ ತೊರೆಯಲ್ಲಿ,

ಸಂದಿಗ್ಧದಂತೆನ್ನ ಸ್ಥಿತಿಯು;

ಸೌಂದರ್ಯ ಚೇತನವೇ,

ನಡೆಯುತಲಿ ರಮಿಸಿರಲು,

ಆಲೋಚನೆಗಿನ್ನಿಲ್ಲ ಮಿತಿಯು..

ಮರೆತೋಯ್ತು ಮಾತು..!!

ಚೆಲುವಿನಾ ಉತ್ತುಂಗ,

ಮೋಹ ಭಾವತರಂಗ,

ಎನ್ನೊಡಲ ಸೀಳಿ ಬರುವಂತೆ;

ಕಡು ಚೇಷ್ಟೆಯ ಮಾರ್ಪು,

ಮಡಿವಂತಿಕೆಯ ಕಾಪು,

ಭೇದಿಸಿ ಸುಳಿ ಏಳುವಂತೆ;

ಆಷಾಢಕಿನ್ನು ಮೆಲುವಾದ ಗಡಿಪಾರು,

ಶ್ರಾವಣವು ಜೀವಕದೆ ಸಲೀಲ ಸೇತು;

ಮಾಸಮೊತ್ತದ ದೂರ ಕ್ಷಣಿಸೆ ಒಂಚೂರು,

ಬಾಹುಬಂಧನ ಶುರುವು ಇನ್ನೆಲ್ಲಿ ಮಾತು..

ಮರೆತೋಯ್ತು ಮಾತು..

ನೀನೇ ನೇರ ಹೊಣೆ..!!

ನಿನ್ನೊನಪು ಒಯ್ಯಾರ

ಗುಣಿಸುವಾ ಸಲುವೇ,

ಲೋಕದೆಲ್ಲಾ ಚೆಲುವ

ಮಣಿಸುವಾ ಸಲುವೇ,

ನೀನುಟ್ಟ ಸೀರೆಯದು ಬರಿ ಸೀರೆಯಲ್ಲ-

ನನ್ನುಸಿರ ಕ್ಷಣ ನಿಲಿಸೋ,

ಎದೆಬಡಿತ ಲಯ ಕೆಡಿಸೋ,

ಕಣ್ ಮಿಟುಕಿಸೊ ಸಹಜ ಕ್ರಿಯೆ

ಸ್ತಂಭಿಸಿ ಬೆರಗಾಗಿಸೋ,

ನಿನ್ನ ಕಡುಕೀಟಲೆಗೆ ಇಲ್ಲ ಕಡೆಗಣನೆ,

ಮುಂದಿನ ಪರಿಣಾಮಕೆಲ್ಲ ನೀನೆ ನೀರ ಹೊಣೆ..

ನೀನೇ ನೇರ ಹೊಣೆ..

Wednesday, July 16, 2025

ಮುಗಿವಿರದ ಯಾನ..

ಮಧುರ ರಮ್ಯವೀ ಅಮೂರ್ತ ಪ್ರೇಮ,
ದಶದಿಕ್ಕು ನೆಲೆಸೋ ಅಪೂರ್ವ ಧಾಮ;
ನಿಸ್ವಾರ್ಥ ಮೆರೆವ ಅಖಂಡನೀಯ,
ಒಳಿತನೇ ಬಯಸೋ ಅಭೇದ್ಯ ಮಾಯ..
ಮಾತು ಇಲ್ಲದೆ ಮೌನವೇ ತಿಳಿಸೋ
ಭಾವಲಹರಿಯದು ಚಂದ ರಮಣೀಯ;
ಅನಂತ ಸುನೀತ ನಿರ್ಮಲಾಲೀಲ
ಬಂಧ ಭಾವೈಕ್ಯದ ಉಲ್ಲಾಸಮೇಳ..
ಎದೆಬಡಿತ ಸಪ್ಪಳವ ಮೇಳೈಸೋ ಗಾನ,
ನಾ-ನೀನು ನೀ-ನಾನಾಗೋ ಮುಗಿವಿರದ ಯಾನ..

Thursday, July 3, 2025

ಗಂಗಾಪ್ರಹಾರ..!!!



ಚಂದ್ರಚೂಡನಿಗೂ ಬಿಡಲಿಲ್ಲವಂತೆ

ಗಂಗಾಪ್ರಕೋಪದ ಗೊಡವೆ;

ವಿಷಕಂಠನಿಗೂ ಉಸಿರು ಕಟ್ಟುವಂತೆ

ಜಲಪ್ರಳಯದಾ ಡಾವೆ..

ಮುನಿಸು ಸಾಕಿನ್ನು ಶಾಂತವಾಗೆಂಬೋ

ಮನವಿಗಿನ್ನಿಲ್ಲ ಗಣನೆ,

ಕಡುಕೋಪದಾ ತೊರೆಗೆ ಸಿಕ್ಕಾದಮೇಲೆ

ಆಶ್ಚರ್ಯಚಕಿತ ಬವಣೆ...

Wednesday, June 25, 2025

ನುರಿತ ಪ್ರೇಮಿ..

ನಿನ್ನ ಕಣ್ಸನ್ನೆ ಅರಿತ ನಾನೀಗ

ನಿನ್ನೊಲವ ಕುರಿತ ಹಂಗಾಮಿ;

ಶಾಶ್ವತ ಸಾಂಗತ್ಯ ತ್ವರಿತಗೊಳಿಸಿನ್ನು

ನಾನಾದೆನು ನುರಿತ ಪ್ರೇಮಿ..!!

Sunday, June 22, 2025

ज़िद्दी..!!

ये सोचते सोचते बरसो गुज़र गये, 

के 'किसी को मेरी तन्हाई का एहसास ज़रूर होगा..'

लम्हे फिसल गये, रास्ते बदल गये

पर मेरे ग़म का नशा तो ना उतरने की ज़िद कर बैठा !

Thursday, June 19, 2025

ಪರಿಣಾಮ..!

ನಿನ್ನುಸಿರು ಸೋಕಿದ ಪರಿಣಾಮ -

ಮನ ಮುಟ್ಟಿ ಮನ ತಟ್ಟಿ

ಪ್ರೇಮ ನೆಟ್ಟಂತಾಯ್ತು,

ನೋವಿನ್ನು ತುಟ್ಟಿ ನಲಿವೊಂದೇ ಗಟ್ಟಿ

ನನ್ನನ್ನು ನಿಂಗಿನ್ನು ಕಟ್ಟಿದಂತಾಯ್ತು..

ಮನನ..!

ಮನದ ಒಡ್ಡೋಲಗದಲ್ಲಿ

ನಿನ್ನೆನಪಿನ ಮನನ!

ಸುಧೆಯ ತೆರದಿ ನಿನ್ನ ಮಾತು -

ತಡೆಯಲೆಲ್ಲಿ ಸಾಧ್ಯವಿನ್ನು

ಒಲವು ಅಲ್ಲೇ ಜನನ..

ಮುತ್ತಿನ ದಾನಿ..!!

ಮೆದುಳ ಪದರದಾಳದಲ್ಲಿ

ಸಣ್ಣದೊಂದು ಗುಮಾನಿ,

ನೀನೇ ಇರಬೇಕು -

ಕೋಣೆಯಲ್ಲಿ ನಾ ವಿರಮಿಸಿರಲು,

ಕದ್ದು ಮುತ್ತನಿಟ್ಟ,

ಸಮಯೋಚಿತ ದಾನಿ..!

ತುರ್ತು ಗಮನ..!!

ನನ್ನೆಡೆಗೆ ಇಗೋ ಬೇಕಿದೆ 

ನಿನ್ನ ತುರ್ತು ಗಮನ,

ಎದೆಬಡಿತದ ಲಯದ ಕೊರತೆ

ನೀಗಿಸೋ ನಿನ್ನಾಗಮನ..

           ಅತೀವ ಸೆಳೆತ ನಿನ್ನ ನೋಟ

           ತೀಕ್ಷ್ಣ ಕೇಂದ್ರ ಬಿಂದು,

           ಸಸಾರವೆನಿಸೋ ಉಸಿರಾಟಕೂ

           ಕ್ಲಿಷ್ಟ ಸ್ಥಿತಿಯು ನಂದು.!

ರೂಢಿಯಲ್ಲಿ ಕಂಡರಿಯದ

ಸುಪ್ತ ಹರ್ಷದಂತೆ,

ಗಾಢವಾಗಿ ನೆಲೆಯೂರಿದೆ

ನಡೆಸಿ ಒಲವ ಸಂತೆ..

            ದೂರ ಭಾರ ಸಹಿಸಲೊಲ್ಲೆ

            ವಿರಹ ಇರಿವ ಬಾಕು,

            ಅಡಿಗಡಿ-ಅಣುರೇಣುವಿಗೂ

            ನಿನ್ನ ಸನಿಹ ಬೇಕು,

            ಸನಿಹದೊಸಗೆ ಸಾಕು..!

ಸೂರ್ಯ-ಸೂರ್ಯಕಾಂತಿ..!!

 


ಆಹಾ ಎಂಥ ಚೆಲುವ ಮೊಗವು

ಸೂರ್ಯಕಾಂತಿ ಮೆರುಗೊ ಲಲನೆ,

ನೇಸರನ್ನೇ ತಿರುಗಿ ತಿರುಗಿ

ದಿನವು ಪೂರಾ ಹೊಳೆವ ಚಲನೆ..


ಬೆಳಗಿನ ಕಿರಣ ಸೋಕಲೆದ್ದು

ನಗುವ ಧರಿಸಿ ನೋಡಲಂತೂ,

ಸೂರ್ಯ ತಾನೇ ನಾಚಿ ನುಣುಚಿ

ಕೆಂಪಗಾಗೋ ದೃಶ್ಯವೆಂತು..!


ಹೂವ ಪ್ರೇಮ ಸೆಳೆತ ಮೀರಿ

ದಿಕ್ಕು ತಪ್ಪೋ ಅಮಲು ಸೋಕಿ, 

ರವಿಯು ಭುವಿಯ ಬೆಳಗೊ ಕೆಲಸ 

ತೊಡರಿ ಕೆಡುವುದೊಂದು ಬಾಕಿ..!


ನಗುಮೊಗದಲೇ ದಿನದ ಶುರುವು

ಪ್ರೇಮ ಹೊನಲಿನಲ್ಲೆ ನಲಿವು,

ಎಂದೋ ಎಲ್ಲೋ ಮಿಲನ ಸಿಗುವ

ಆಸೆಗಂತು ಇಲ್ಲ ಬರವು.. 

Monday, April 7, 2025

ಯುಗಾದಿ..

ನೂತನ-ನವನವೀನ,

ತಾರುಣ್ಯ ಚೇತನ ಸುವಿಹಾರ ಯಾನ,

ಭವ್ಯ-ಬಂಧನದ ಶ್ರುತಿ ತಿಲ್ಲಾನ,

ಭೃಂಗ-ಶೃಂಗಾರದಾಲಿಂಗನ,

ಹೊಸ ಶುರುವಾತಿನ ಪಲ್ಲವಿ ಗಾನ;

ಸೂಚಿಸೋ ಹೊಸ ವರ್ಷ..

ಮನಸಿಲ್ಲವೇ ನಿಂಗೆ !!!?

ಮುಂಗುರುಳ ಉಯ್ಯಾಲೆ ಜೀಕುವಾ ಸಲಿಗೆ,

ಕಣ್ಣುಬ್ಬಿನ ಬಾಗಲಿ ಜಾರುವಾ ಸಲಿಗೆ,

ತುಟಿಯಂಚಲಿ ಗುಳಿಕೆನ್ನೆ ತಾಗುವಾ ಸಲಿಗೆ,

ಕರುಣಿಸೋ ಮನಸಿಲ್ಲವೇ ನಿಂಗೆ !?

          ಒಲವಿನಾ ಸಂತೇಲಿ ಕಳುವಾಗೋ ಘಳಿಗೆ,

          ಕಣ್ಮುಚ್ಚಿ ಕಣ್ತೆರೆಯೇ ನೀ ಕಂಡ ಘಳಿಗೆ,

          ನವಿರಾದ ನೆನಪನ್ನು ಮಾರುವಾ ಘಳಿಗೆ,

          ಎಷ್ಟೆಂದು ವ್ಯವಹರಿಸೋ ಮನಸಿಲ್ಲವೇ ನಿಂಗೆ !?

ಮನಸೊಂದು ಮಾರ್ದನಿಯ ಮಾಯಾವೀ ಮಳಿಗೆ,

ಕನಸನ್ನು ಕೊಳ್ಳುದಕೆ ಕಟ್ಟಿರುವ ಮಳಿಗೆ,

ಒಳಗೊಂದು ಓರೆಯಲಿ ಓಲೈಕೆ ಮಳಿಗೆ,

ತುಸು ಬಂದು ಓಡಾಡೋ ಮನಸಿಲ್ಲವೇ ನಿಂಗೆ !?

         ಕಣ್ ಕೋವಿ ಗುರಿಯಲ್ಲಿ ಸಿಕ್ಕಿರುವ ಸುಳಿಗೆ,

         ಏಕಮುಖ ಸಂಚಾರ ತಿರುವಿರದಾ ಸುಳಿಗೆ,

         ಉನ್ಮತ್ತ ನಿನ್ನತ್ತ ನಾ ಸುತ್ತೋ ಸುಳಿಗೆ,

         ದೂಡುತಲಿ ಕೈಚಾಚೊ ಮನಸಿಲ್ಲವೇ ನಿಂಗೆ !?

         ಕಾಡುತಲಿ ಬಿಗಿದಪ್ಪೊ ಮನಸಿಲ್ಲವೇ ನಿಂಗೆ !?

ಸ್ಥೂಲದಹಂ...!!!

ಅಹಂ ಸ್ಥೂಲಮಿದಂ ಚಿತ್ತ

ನಿರ್ಮಲ ಶಾಂತಿ ಇರುವುದೆತ್ತ!!?

ಕ್ಷಣಿಕ ದುರ್ಬಲ ಕೋಪ ನಿಮಿತ್ತ,

ಭಾರವೀ ಮನಸು ದುಃಖ ಉದಾತ್ತ..

      ಕ್ಷುಲ್ಲಕ ಕಾರಣ, ಕ್ಷೀಣಿತ ತಾಳ್ಮೆ,

      "ನಾನೇ ಸರಿ" ಕೀಚಕ ಜಾಣ್ಮೆ;

      ಮಸುಕು ನೋಟಕ್ಕೆ ಹಮ್ಮಿನ ಹೆಮ್ಮೆ -

      ಬೀಳಬೇಕಿದೆ ಚಾಟಿಯೇಟೊಮ್ಮೆ !!

ಕಾಣದು ಎದುರಲಿ ನೋವಿನ ರಾಶಿ,

ಕೋಪಕೆ ಸಿಕ್ಕಿರೋ ಮೆದುಳೇ ವಿದೂಷಿ!

ಸಣ್ಣ ಕಿರುನಗೆಗೂ ಭಾರೀ ಚೌಕಾಶಿ -

ಛಲದ ಚಿಗುರದುವೆ ಜಡತೆಯ ದೋಷಿ.. 

        ತಾಳ್ಮೆ-ಕರುಣೆ ಇರಲೆಂದೂ ಜೊತೆಗೆ,

        ಕೋಪ ನಿಷ್ಕರುಣೆ ಜ್ವಲಿಸಲಿ ಚಿತೆಗೆ;

        ನಗುವನುಣಬಡಿಸಿ ಸಹಚರರ ಕಥೆಗೆ,

        ಸನ್ಮತಿಯ ಭಾವವೇ ಶ್ರಾದ್ಧವದು ವ್ಯಥೆಗೆ..!!

ಒಪ್ಪಂದ..!!

ದಿನ ಕಳೆದಂತೆ ನೀ ನನಗೆ ಸಿಗದಿರೆ 

ಅದುವೇ ಸಂಜೆಗಾದಂತ ಗಾಯ;

ತಂಗಾಳಿಯ ಮಧ್ಯೆ ತಬ್ಬಿದಿಬ್ಬನಿಯಂತೆ

ಸಿಕ್ಕರದುವೇ ನಲ್ಮೆಯ ಸಹಾಯ..

       ಬೆಳಕಿನೋಕುಳಿಯದು ನೇಸರನ ಇಂಗಿತವು

       ನಾ-ನೀನು ರಂಗೇರಲೆಂದು;

       ಇಣುಕಿಣುಕಿ ಬಂದಿಹನು ಚಂದಿರನು ನೋಡಲ್ಲಿ

       ಪ್ರಣಯಕ್ಕೆ ಕಂದೀಲು ತಾನೆಂದು..

ಬೆರಳಿಗೆ ಬೆರಳನ್ನು ನೇಯ್ಗೆಯ ಮಾಡೋಂತ

ಕಸೂತಿ ಈಗಷ್ಟೇ ಕಲಿತೆ;

ಪ್ರಾವಿಣ್ಯತೇಗೂ ನಂಟಾಗಿರೋಂತ

ನಿಪುಣ ನಾನಾದೆನಂತೆ..!

         ಇಳಿಸಂಜೆ ತಿಳಿಯಾಗಿ ನಳನಳಿಸಿದಂತಾಗಿ

         ತಲುಪಿಸಿರೋ ಕಳಕಳಿಯು ಒಂದೇ;

         ನನ್ ತೋಳು ನಿನ್ ತೋಳು ಬೇರಲ್ಲ ಅಂತ 

         ಆಗಬೇಕೊಪ್ಪಂದ ಇಂದೇ..!!