ಯೋಗಸಾಹಿತ್ಯ

ಯೋಗಸಾಹಿತ್ಯ
ಭಾವನೆಗಳ ಅಂಗಳದಲಿ ಪದಗಳ ಓಡಾಟ...!!

Saturday, July 30, 2016

ಬದಲಾಗೋ ಬದುಕು..!!

ಈ ಸೀಮಿತ ಬಾಳ್ವೆಯಲ್ಲಿ;
ಬದುಕಿನ ಲಯ ಬದಲೊ
ಇಲ್ಲ ಬದುಕಿರುವ ಜನ ಬದಲೊ!?
ದೊರೆವ ದೃಷ್ಟಿ ಬದಲೊ
ದೃಷ್ಟಿಕೋನವೇ ಬದಲೊ!?
ಹಿಂದಿನಂತೆ ಈಗಿಲ್ಲ,
ನೆನ್ನೆಯು ಇಂದಾಗಿ ಬದಲೊ!
ಭವ-ಬಾಂಧವ್ಯಗಳು
ಸಡಿಲಾಗಿ ಬದಲೊ!?
ಮೆಲುಕಿದ ಕ್ಷಣಗಳೆಲ್ಲ
ಬರೀ ನೆನಪಾಗಿ ಬದಲೊ!?
ಅದಲು ಬದಲಲ್ಲವಿದು
ಸದರಿ ಕೇವಲ ಬದಲೊ!!
ಒಮ್ಮೆ ಇತ್ತೆಂಬ ಕುರುಹನ್ನು
ನುಡಿದು ತಿಳಿಸೋ ತವಕದಲಿ
ಮಾತೆಲ್ಲ ತೊದಲೊ..ಮಾತೆಲ್ಲ ತೊದಲೊ..

ಯೋಧರ ಸ್ಮರಣೆ..

ಗತ್ತು ವೈರಿಗಳು ಸುತ್ತುವರಿದರೂ
ಮತ್ತು ಅಡಗಿಸಿದ ವೀರರು,
ನಮ್ಮ ಸ್ವತ್ತಿನ ಭೂಮಿಯನ್ನು
ಕಾಯ್ದು ವಿಜಯಿಸಿದ ಶೂರರು..
ಮಡಿದ ಜೀವಗಳ ಸ್ಮರಿಸೊ ದಿನವು ಇದು
ವೀರ-ಧೀರರ ಸ್ಮರಣೆಯು,
ಮಿಡಿವ ಮನಸುಗಳು ನಮ್ಮದಾಗಲಿ
ಅವರ ನೆನೆಯೊ ಆಚರಣೆಯು..

ಆಷಾಢದ ಫಲುಕುಗಳು..

ಆಷಾಢ ಕಾಡೋ ಕಥೆ ಕೇಳ್ಬೇಡಿ,
ಇದ್ದಂತೆ ಅದೊಂದು ಪಿಡುಗು;
ಆಗಾಗ ಅಚಾನಕ್ಕು ಸದ್ದು ಮಾಡುತ್ತೆ
ಅಡಗಿದ್ದ ವಿರಹವೆಂಬ ಗುಡುಗು..
------*------*--------*--------*--------*--------*-------*-------
ನನ್ನಾಕೆಯದೊ,
ಒಲವಿಂದ ರಮಿಸಿ, ಮಧುರಿಸಿ ನೋಡುವಾಗ
ಮೈ ಝಂ ಅನ್ನಿಸೊ ಮಾಂತ್ರಿಕ ಕುಡಿನೋಟ;
ಆದರದೇ, ಕುಪಿತಗೊಂಡು ಶಪಿಸಿ ನೋಡುವಾಗ
ಮೈ ನಡುಗಿಸಿ ಸುಡಬಲ್ಲ ತಾಂತ್ರಿಕ ಕಿಡಿನೋಟ..
------*------*--------*--------*--------*--------*-------*-------
ನಿಜದಲಿ ನಿನ್ನ ನೆನಪೇ ಕಾಡುತ್ತೆ,
ಭಾವನೆಯೆಲ್ಲ ನಿನ್ ಹುಡುಕ್ಕೊಂಡ್ ಓಡುತ್ತೆ.
ಹತ್ರದ ಊರಿಗೆ ನೀ ಹೋದ್ರು ಕೂಡ
ಚಂದ್ರ ಲೋಕಕ್ಕೆ ನೀ ಹೋಗಿರೋಂಗ್ ಆಗೈತೆ..
------*------*--------*--------*--------*--------*-------*-------
ಸಾಕು ಈ ಜಗದ ಸಹವಾಸ,
ಇರಲು ನಿನ್ನ ಮನಸಲ್ಲಿ ನನ್ನ ವಾಸ.
------*------*--------*--------*--------*--------*-------*-------
ನಲ್ಲೆಯ ನೋಡಲು ಕಣ್ಣಿಗೆ ಕಾತರ,
ಬಂಧಿ ಮಾಡಲು ತೋಳಿಗೆ ಆತುರ,
ಸಿಕ್ಕರೆ ಸಾಕು ಒಮ್ಮೆ ನೀ ನನಗೆ:
ಮಾಯವಾಗುವುದು ಒಂಟಿತನದ ಬೇಸರ
------*------*--------*--------*--------*--------*-------*-------
ನೀನೇ ನನ್ನ ರೂಪದರ್ಶಿ , 
ನೀನೇ ನನ್ನ ಮಾರ್ಗದರ್ಶಿ;
ಭಾವನೆಗೆ ನೀನೇ ಕಾರ್ಯದರ್ಶಿ.
ಓ ನನ್ನ ನಲ್ಲೆ - 
ನೀನೇ ನನ್ ಊರ್ವಶಿ . . ನೀನೇ ನನ್ ಊರ್ವಶಿ..
------*------*--------*--------*--------*--------*-------*-------
ಚಂದನೆಯ ಚೆಂದುಟಿಗಳು
ಚುಂಬಕ ಚೆಲುವನ್ನು ಚೆಲ್ಲುತಿದೆ ; 
ಚೂರುಚೂರೇ ಛೇಡಿಸಲು,
ಚುಂಬಿಸುತ ಚಂದಿರನ್ನೊಮ್ಮೆ ಛಾಪಿಸಲು -
ಛಾವಣಿ ಚೂರಾದಂತೆ ಚೀರುತಿದೆ..
------*------*--------*--------*--------*--------*-------*-------
ಚಂದ್ರ ನನ್ನ ಹಿಂದೆ ಬರ್ತಿದಾನೆ ! 
ಯಾಕೆ ಅಂತ ಕೇಳಿದ್ಕೆ ಹೇಳ್ತಾನೆ ; 
"ನಿನ್ ಹಿಂದೆ ಬಂದ್ರೆ ಚಂದ್ರಿಕೆಯ ನೋಡೋ
ವಿಳಾಸ ಗೊತ್ತಾಗುಗುತ್ತೆ"  ಅಂತ !!!
------*------*--------*--------*--------*--------*-------*-------




Tuesday, July 19, 2016

ಹೈಕುಗಳು

ವ್ಯಕ್ತಿತ್ವದ ಕನ್ನಡಿಯಂತೆ, ಮನಸ ಬಿಂಬಿಸುವ ಪರದೆಯಂತೆ,
ಸೋಜಿಗ-ಸಂತೋಷ-ಸಂತಾಪ ಎಲ್ಲದಕೂ ಒಂದೇ ನಿಮಿತ್ತ ತಾಣದಂತೆ ಮೆರೆಯುವ;
ಭಾವ ಸೂಚಕ ಮಾಪನ --ಕಣ್ಣು..


ಗಂಧ-ದುರ್ಗಂಧ ಸೂಚಿಸೊ ಜಂಟಿ ಕೊಳವೆ,
ಜೀವ ಧಾತು ಉಸಿರು-ಹೃದಯದ ಸೇತುವೆ,
ಬಿನ್ನಾಣಗಿತ್ತಿಯರ ಮೂಗುತಿ ಮೆರೆಯೊ ರಮಣೀಯ ತಾಣ--ಮೂಗು


ಕಿರುನಗೆಯ ತವರೂರು, ಭಾವ ಭಂಗಿಗಳು ನೂರಾರು,
ಮುಖಾರವಿಂದವ ಅರಳಿಸೊ ಶಕ್ತಿಕೇಂದ್ರ;
ನಲ್ಲ-ನಲ್ಲೆಯರ ಮೋಹಕ ತಾಣ,
ನೆಮ್ಮದಿ ಮನಸಿನ ನಲ್ಮೆಯ ಸೂಚಕ--ತುಟಿಗಳು

ಉತ್ಸಾಹದ ಮಿಲನ..

ಗದ್ಗದಿತ ಧ್ವನಿಯಲ್ಲಿ ಉದ್ಗಾರ ರೂಪದಲಿ
ಉಚ್ಛಾರ ಮಾಡುವುದು ನಿನ್ಹೆಸರನೇ;
ಸದ್ಭಾವದ ರೂಪದಲಿ ಸತ್ಕಾರವೆಂಬಂತೆ
ಉತ್ಸಾಹದಿ ಬೆರೆವೆ ನಾ ನಿನ್ನಲೇನೆ..

ಸಂಜೀವಿನಿ..

ಸೋಜಿಗವೆ ನಾಚುವ ಸಹಗಮನೆ ನೀನು,
ಸಂಗಾತಕೆ ಒಲಿದ ಸಹಚಾರಿ ನೀನು;
ಸಂಬಂಧ ಸಂಕೋಲೆ ಬೆಸೆದು ಜೊತೆಗಿರುವ
ಸಮಚಿತ್ತಧಾರಿ ಸಂಜೀವಿನಿ ನೀನು..

ಮುಚ್ಚಿಟ್ಟ ಬೇನೆ..

ಚಂದಿರನ ಚಂದವನು ಹೊಗಳುವರೇ ಎಲ್ಲ,
ಮೈಮೇಲಿನ ಹುಳುಕ ಕಂಡಿರೇನು!?
ನಗುವವನ ಮೊಗದಲ್ಲಿ ಬೆಳಕಿನಾ ಚಿಲುಮೆ,
ಮುಚ್ಚಿಟ್ಟ ಬೇನೆಯನು ಬಲ್ಲೆವೇನು!!?

ಸರಳತೆ..ವಿರಳತೆ..

ಸರಳತೆಯು ವಿರಳತೆಯ ಮೈತ್ರಿ ಮಾಡಿ
ಬಾಳು ಹೊಸ ಪೋಷಾಕಿನಲ್ಲಿ;
ಹೊಟ್ಟೆಗೆ ಹಿಟ್ಟಿಲ್ಲದಿದ್ದರೂನು
ಮುಡಿಗೆ ಮಲ್ಲಿಗೆಯೆಂಬ ಜನರೇ ಇಲ್ಲಿ..

Wednesday, July 13, 2016

ಸೂಜಿಗಲ್ಲಿನ ಕ್ಷಣಿಕತೆ


ವಿಶಾಲ ಬಾಳ ಸಾಗರದಿ
ಬಾಂಧವ್ಯ-ಭಾವನೆಗಳು ಅನಂತ;
ಆಧುನಿಕ ಯಂತ್ರಗಳು ಅಲ್ಲೊಂದು
ಸಣ್ಣ ಕಾಗದದ ದೋಣಿ.!
ಆದರೆ ಅದೊಂದು ಆಕರ್ಷಣೀಯ,
ಭಾರೀ ಸೆಳೆತ ಹೊಂದಿದ ಸೂಜಿಗಲ್ಲು.
ಮನುಜ ಮುಳುಗಡೆ-
ಭಾವ ಸಾಗರದಲ್ಲಲ್ಲ, ಸೂಜಿಗಲ್ಲಿನ ಆಳದಲ್ಲಿ.
ಬಾಂಧವ್ಯದ ಬೆಲೆಯೇನು?
ತನ್ನಸ್ತಿತ್ವದ ನೆಲಯೇನು?
ಎಂಬುದನರಿವಷ್ಟರಲ್ಲಿ; ಬಾಂಧವ್ಯ
ಕಳಚಿದ ಕೊಂಡಿ ಹುಡುಕುತ-
"ಕಾಪಾಡಿ" ಎಂದು ಕೈ ಚಾಚುವ ಪರಿ
ಅದೆಷ್ಟು ದಾರುಣ..
ಸೂಜಿಗಲ್ಲ ಕಾಗದದ ದೋಣಿ ಕ್ಷಣಿಕ ತೇಲಿ-
ಒದ್ದೆಯಾಗಿ ಮುಳುಗುವ ಮುನ್ನ,
ಎಚ್ಚೆತ್ತುಕೊಂಡು ಬಾಳ್ವೆ ನಡೆಸೋಣ
ಅರಿಯುತ ಬಾಂಧವ್ಯವೇ ಬೆಳಗೋದು ಬಾಳ್ವೆಯನ್ನ..

Tuesday, July 12, 2016

ಕೋಣ..ಕಿಂದರಿ..!



ಮನದ ಮದನಿಕೆಯು ಬೇಸರಗೊಂಡು,
ಲೌಕಿಕ ಭಾವ ಸಾಕನ್ಕೊಂಡು,
ಬೆಳ್ಳಂಬೆಳಿಗ್ಗೆ ಮನೆಯನು ಬಿಟ್ಟು
ಕೆರೆಯ ತಲುಪಿದನು ಮಾದಪ್ಪ.
ಏನೋ ಸಂಕ್ಟ, ಏನೋ ಗಲಿಬಿಲಿ,
ಕೆಚ್ಚೆದೆಯೊಳಗೂ ಕಾಣದ ಸರಪಳಿ,
ತನ್ನಂತಾನೆ ಪ್ರಶ್ನಿಸಿಕೊಳ್ಳುತಾ
ಕೆರೆಯ ನೀರಲಿ ಇಣುಕಿದನು.
ತನ್ನದೇ ಬಿಂಬ ಮೂದಲಿಸಿರಲು,
ವಿರಕ್ತಿ ಭಾವ ಮೈದುಂಬಿರಲು,
ಅಂಚಲ್ಲಿದ್ದ ಬಂಡೆಯ ಮೇಲೆ
ಜಪವ ಮಾಡಲು ಅಣಿಯಾದ.
ಏನೋ ವಟ ವಟ ಗೊಣಗಾಡ್ಕೊಂಡು,
ಅನಿಸಿದ್ದೆಲ್ಲ ಮಾತಾಡ್ಕೊಂಡು,
ನಿರಾಳವೆನಿಸಲು ಕಣ್ ಬಿಟ್ ನೋಡೆ
ಸುತ್ತಲೂ ಕೋಣದ ದಂಡಿತ್ತು..
ತಮ್ಮ ನಿತ್ಯದ ಸ್ನಾನದ ಹೊಂಡದಿ
ಯಾವನೋ ಬಂದು ಕೂತ್ಕೊಂಡವ್ನೆ!
ಎನ್ನುತ ಅವುಗಳು ಸುತ್ತುವರಿಯಲು-
ಕೋಣದ ಕಿಂದರಿ ಇವನಾದ;
"ಕೋಣದ ಮುಂದೆ ಕಿಂದರಿ ಬಾರಿಸು"
ಅನ್ನೋ ಮಾತಿಗೆ ಮೊದಲಾದ..

Monday, July 11, 2016

ಮುಕ್ತ..ಮುಕ್ತ..

ಬೆಳಿಗ್ಗೆ 6ಕ್ಕೆ alarm sound. Bus ಗೆ ಇನ್ನು time ಇದೆ. 8ಕ್ಕೆ ಅಲ್ವ, ಬಸ್ ಸ್ಟ್ಯಾಂಡ್ ಕಾಲ್ನಡಿಗೆ ದೂರದಲ್ಲೆ ಇದೆ. ಇನ್ನೊಂದ್ ಅರ್ಧ ಗಂಟೆ ಮಲಗಿ ಎದ್ದರೆ ಆಯ್ತು ಅಂತ ನಿದ್ದೆ ಕಣ್ಣಲ್ಲಿ snooze ಮಾಡಿ ಮತ್ತೆ ಮಲಕ್ಕೊಂಡೆ. ಅದೇನು ನಿದ್ದೆಯೋ, ಎಚ್ಚರ ಆದಾಗ 7:15!! ಗಡಿಯಾರದಲ್ಲಿ ಏನೋ ಭಯಂಕರ ರೂಪ ಕಂಡವನಂತೆ ಬೆಚ್ಚಿಬಿದ್ದು, ಹಾಸಿಗೆಯಿಂದ ಛಂಗನೆ ಎದ್ದವನೆ, ಶಾಸ್ತ್ರೋಕ್ತವಾದ ಸ್ನಾನ ಮುಗಿಸಿ, ಬ್ಯಾಗನ್ನು ಹೆಗಲಿಗೇರಿಸಿದವನೆ 7:55ಕ್ಕೆ ಬಸ್ ಸ್ಟ್ಯಾಂಡ್ ತಲುಪಿದೆ.

ಗಡಿಯಾರ ನೋಡಿದರೆ ಆಹಾ ಏನೋ ಸಾಧಿಸಿದ ಭಾವನೆ. "Yes man you made it.." ಅನ್ನೊ ಅಹಂ ಬಂದು ಬೆನ್ನು ತಟ್ಟಿ ಹೋದ ಭಾವ.. ಸರಿಯಾಗಿ 8ಕ್ಕೆ ಬೆಂಗಳೂರು ಬಸ್ ಬಂದಿದ್ದೇ ಕೂತವನೆ ನಿದ್ರಾದೇವಿಯ ವಶಕ್ಕೆ ಸಿಕ್ಕವನಂತೆ ಮಲಗಿಬಿಟ್ಟೆ.

ಸ್ವಲ್ಪ ದೂರ ಕ್ರಮಿಸಿದ್ದೆ, ಏನೋ ಹಿಂಸೆಯಂತಾಗಿ ಎಚ್ಚರ ಆಯ್ತು. "Oh no.." ಎಂಬಂಥ ಉದ್ಗಾರವೊಮ್ಮೆ ಮೂಡಿ, "ಇದು ಹೇಗೆ ಸಾಧ್ಯ. ಹೇಗೆ ಮರೆತೆ ನಾನು. ಛೇ. ಹೆಂಗಪ್ಪ ಇನ್ನ ಕಥೆ. ದೊಡ್ಡದಾಗಿ non-stop ಬಸ್ ಹತ್ತಿದೀನಿ. ಇನ್ನ ಬೆಂಗಳೂರ್ ಬರೋವರೆಗು ಹಿಂಗೆ ಯೋಚುಸ್ತಾ, ಚಡಪಡಿಕೆ-ಗೊಂದಲದಲ್ಲೆ ಕೂತಿರಬೇಕು." ಎಂದು ನನ್ನನ್ನು ನಾನೇ ಶಪಿಸಿಕೊಳ್ತ ಕಿಟಕಿ ಆಚೆ ಶೂನ್ಯ ನೋಟದಲ್ಲಿ ದಿಟ್ಟಿಸುತ್ತ ಕೂತಿದ್ದೆ. ಅತ್ಲಾಕಡೆ ನಿದ್ದೆನೂ ಬರ್ತಿಲ್ಲ, ಆ ಚಡಪಡಿಕೆನು ನಿಲ್ತಿಲ್ಲ. ಅದು ಹೆಂಗೆ ನಿಲ್ಲತ್ತೆ ಬಿಡಿ, ಒಂದು ಸಾರಿ ಶುರು ಆದ್ರೆ ಆ ಚಡಪಡಿಕೆಗೆ ಉಪಶಮನ ಸಿಕ್ಕಿ ಕೆಲಸ ಮುಗಿದರೇನೆ ಸಮಾಧಾನ.

ಮುಂಚೆ ಹೀಗೆಯೆ ಒಮ್ಮೆ ಆದಾಗ ಅನುಭವಿಸಿದ ಪರದಾಟ ಅಷ್ಟಿಷ್ಟಲ್ಲ. ಜನ್ಮದಲ್ಲಿ ಇಂಥ ತಪ್ಪು ಮಾಡಿ ಕಷ್ಟಕ್ಕೆ ಸಿಲುಕಬಾರದು. ಸಮಯಕ್ಕೆ ಸರಿಯಾಗಿ ಮಾಡಿ ಮುಗಿಸಿದರೆ ಗೊಂದಲ-ಅವಮಾನ ಇರೋದಿಲ್ಲ ಅಂತ ಶಪಥ ಮಾಡಿಕೊಂಡಿದ್ದೆನಲ್ಲ, repeat ಆಗೋಯ್ತಲ್ಲ ರಾಮ ಅನ್ಕೊಂಡು, ಬೆಂಗಳೂರು ಬಂದೊಡನೆ ಮೊದಲು ಕಾರ್ಯಪ್ರವೃತ್ತನಾಗಬೇಕು. ಇಲ್ಲದಿದ್ದರೆ ಕಷ್ಟ ಇದೆ. Officeನಲ್ಲಿ meeting ಬೇರೆ ಇದೆ. ಅವರ ಮುಂದೆ ಹೇಗೆ ಚಡಪಡಿಕೇಲಿ ಕೂರೋದು.!!
ಹಿಂಗೆಲ್ಲ ಯೋಚನೆಯ ಜೊತೆ ಜೊತೆಗೆ ಬೆಂಗಳೂರು ಬಂದೇ ಬಿಡ್ತು.


ಉಸ್ಸಪ್ಪ ಅನ್ಕೊಂಡಿದ್ದೆ, ಚಕಚಕನೆ ಬಸ್ ಇಂದ ಇಳಿದು, ಸುತ್ತಮುತ್ತ ನೋಡಿದೆ. ಅಲ್ಲಿತ್ತು ನೋಡಿ. ದಡಬಡಿಸಿ ಓಡಂಗಿಲ್ಲ, ಯಾರಾದರು ಕಂಡಾರು ಅಂತ. ಸಾವಧಾನವಾಗಿ ಹೋಗಿ ಮುಗಿಸಿ ಹೊರ ಬಂದವನಿಗೆ ರಣರಂಗದಲ್ಲಿ ಸುತ್ತುವರಿದ ವೈರಿ ಸೇನೆಯನ್ನು ಭೇದಿಸಿ ಹೊರಬಂದವನಂತೆ relax ಆಗಿ ಜೇಬಿನಲ್ಲಿ ಕೈ ಹಾಕಿ, whistle ಹೊಡೆದುಕೊಂಡು style ಆಗಿ ಹೊರಗೆ ಬರುತ್ತಿದ್ದರೆ ಹಿಂದಿನಿಂದ "hello sir..ಮೂತ್ರ ವಿಸರ್ಜನೆಗೆ 1 ರುಪಾಯಿ. ಅದ್ನೂ ಕೊಡದಿರ ಹೋಗ್ತೀರಲ್ರಿ.." ಎಂದು ಗದರಿಸಿದ ಹಾಗಾಯ್ತು. ಪೇಚಿಗೆ ಸಿಕ್ಕವನಂತೆ ಸ್ವಲ್ಪ ನಾಚಿದಂತಾಗಿ, ವಿಚಿತ್ರ smile ಮಾಡುತ್ತ ಕಾಸು ಕೊಟ್ಟು ಅಲ್ಲಿಂದ ಕಾಲ್ಕಿತ್ತು ಹಿಂತಿರುಗಿ ನೋಡದೆ ನಡೆದು ಹೋದೆ..