ಯೋಗಸಾಹಿತ್ಯ

ಯೋಗಸಾಹಿತ್ಯ
ಭಾವನೆಗಳ ಅಂಗಳದಲಿ ಪದಗಳ ಓಡಾಟ...!!

Sunday, December 27, 2015

ಬಹುಮಾನ..!!

ಒಲವ ಮಿಂಚಿನ ಆಗಮನ
ಒಬ್ಬಂಟಿಯಾಗಿದೆ ನನ್ನ ಪಯಣ..
ಹೃದಯ ಗೀತೆ ಹೊರಡಲು ಕಾರಣ ನಿನ್ನ ನಯನ,
ಬೇಕಿದೆ ನಿನ್ನೊಂದಿಗಿನ ಯಾನ.
ಚಡಪಡಿಸೋ ಈ ನನ್ನ ಮನ,
ಕನವರಿಕೆಗೆ ನೀನೇ ತಾನೆ ಕಾರಣ.!?
ತಣ್ಣನೆ ಗಾಳಿ ಮೈ ಸವರುತ್ತ ಸರಿದಿರಲು,
ನೀ ಸುಳಿದಂತೆ ನನಗನುಮಾನ...
ಸೋತೆನು ನಲ್ಲೆ ತನಿಖೆ ನೀನೇ ಮಾಡಿರಲು,
ಮುತ್ತೇ ನಿನಗೆ ನನ್ನ ಬಹುಮಾನ.. :)

ನಲ್ಲನ ಆತಂಕ..!!!

ಆಸು ಪಾಸಿನ ಗಾಳಿ ಸೋಕುತಲಿ ನಿನ್ನ
ಆಗಾಗ ಅಲೆದಿಹುದು ಏಕೆ ಕೇಳು;
ನಲ್ಲ ನಾನಿಲ್ಲಿ ಬಳಿಯಲ್ಲೇ ಇರುವೆನು
"ಕಾಳಜಿಯು ಬೇಕಿಲ್ಲ"ವೆಂದು ಹೇಳು..!!

Saturday, December 19, 2015

ಆಪ್ತತೆಯ ಹುಡುಕಾಟ..!

ಭಾವ-ಬರದ ಸಂತೆಯಲ್ಲಿ ತೆರೆದಿಟ್ಟ ಬದುಕು,
ಖರೀದಿಗೆ ಇಟ್ಟಂತಿದೆ ಬಾಂಧವ್ಯದ ಮೆಲುಕು..
ಯಾರು ಯಾರಿಗೆ ಆದರೊ,
ಯಾರು ಸಂಗಡ ನಿಂತರೊ!?
ಅಲ್ಪ ದಾರಿಯ ಪಯಣದಲಿ
ಕಂಡುಕೊಳ್ಳುವುದು ಹೇಗೆ!?
ಸನಿಹದಲಿ ಕೇಳದಂಥ ಆಪ್ತತೆಯ ದನಿಯು,
ದೂರಾದಾಗ ಕೀರಲಾಗಿ ಕಾಡುವುದು ಏಕೆ?
ದೂರ ನಡೆದು ಬಂದಾಗಿದೆ,
ಭಾವನೆಯ ಜೋಳಿಗೆ ಬರಿದಾಗಿದೆ;
ಅತೃಪ್ತ ಮನಸಿಗೆ ತೃಪ್ತ ಸಂತೋಷದ
ಸಣ್ಣ ಬೀಡೊಂದು ಬೇಕಾಗಿದೆ..

Sunday, December 13, 2015

ನನ್ನ ಶಾಮಲೆ..!!

ಕೋಪವನೆಲ್ಲ ಸಹಿಸಿ,                      
ಪ್ರೀತಿಯಿಂದಲೇ ನಗಿಸಿ,          
ಅರ್ಥೈಸಿಕೊಂಡ ಕೋಮಲೆ - ನನ್ನ ಶಾಮಲೆ..

ಸಮಭಾವದ ನಂಬಿಕೆ ತರಿಸಿ,
ಸಹಬಾಳ್ವೆಯ ನಂಬಿಕೆ ಇರಿಸಿ,
ಸಾಂಗತ್ಯಕೆ ಅಣಿಯಾದವಳೆ - ನನ್ನ ಶಾಮಲೆ..

ದುಃಖ ತನ್ನಲ್ಲೇ ಅಡಗಿಸಿ,
ನಗೆಯ ಜೋಳಿಗೆಯ ತುಂಬಿಸಿ,
ಸ್ಫೂರ್ತಿ ಸೆಲೆಯಾದ ಬಾಲೆ - ನನ್ನ ಶಾಮಲೆ..

ಅಗಣಿತ ಭಾವನೆಯ ಗುಣಿಸಿ,
ಪ್ರೇಮ ದುಂದುಭಿಯ ನುಡಿಸಿ,
ಭವ್ಯ ಭವಿತಕ್ಕೆ ನಾಂದಿಯಾದವಳೆ;
ಅವಳೇ,ಅವಳೇ - ನನ್ನ ಶಾಮಲೆ..

Monday, November 9, 2015

ವಿರಹ..!!!

ವಿರಹದಾs ನೋವನ್ನು ನಾ ತಾಳಲಾರೆ
ನನ್ನೇಕೆ ನೀ ಹೀಗೆ ಬಿಟ್ಟು ಹೋದೆ!
ನೀ ಮಾಡಿ ಕೊಟ್ಟಂತ ಉಪ್ಪಿಟ್ಟು, ಒಬ್ಬಟ್ಟು -
ನಿಪ್ಪಟ್ಟು ನೆನಪಾಗಿ ನಿಂಗೆ ಕಾದೆ..  
      ನೀನು ಬರದಿದ್ದರೂ ತೊಂದರೆಯು ಇಲ್ಲ,
      ಅದ ಮಾಡೊ recipeಯ ಕೊಟ್ಟು ಕಳಿಸು;
     ಅದನೆಲ್ಲಾ ಮಾಡಿ ನಾ ನಿಂಗೂನೂ ಕೂಡ,
     parcelಉ ಕಳಿಸುವೆನು ಕರುಣೆ ತೋರ್ಸು.. 

ಜೀವನ ಸೂತ್ರ..!!

ಅಂಗುಲ ಜಾಗ ಅನ್ನದ ಗಡಿಗೆ,
ಮೈಯ ಮುಚ್ಚಲು ಮಾನದ ಉಡುಗೆ,
ಸ್ವಚ್ಛ ಮನಸಿರುವ ಮೆಚ್ಚಿಸೊ ನಡಿಗೆ,
ಇದ್ದರದುವೆ ಸುಖ ಜೀವನವು;
     ನೆಮ್ಮದಿ ಭಾವ ಬಾಳಿನ ತೊಡುಗೆ,
     ಅಖಂಡ ಕರುಣೆ ದೇವರ ಕೊಡುಗೆ,
     ಮೆಚ್ಚಿದ ಮಡದಿ ಸಂಗದ ನಡಿಗೆ,
     ಇದ್ದರೆ ಜನುಮ ಪಾವನವು.. 

ಕರುನಾಡು

ಕರುನಾಡು ನಮ್ಮದೆಂದೇಳಿ
ಎಲ್ಲರೂ ಒಂದೇ ಕೂಗಿನಲಿ;
ಸಮಭಾವದಿಂದ ಎಲ್ಲರ ಪೊರೆವ
ಈ ಅಂಬೆ ಕಲ್ಪವಲ್ಲಿ..
     ತಿಳಿಯಾದ ಆಗಸದಿ ಬಿಡದಲೇ ಸಾಗಲಿ,
     ಕನ್ನಡಿಗರ ಐಕ್ಯತೆಯ ಘೋಷವಿರುವ ಬಾನುಲಿ.
"ಮನುಜ ಮತ ವಿಶ್ವ ಪಥ"
ಎನ್ನುವಂಥ ನಾಣ್ಣುಡಿ;
ಜನಿಸಿದಂಥ ಭೂಮಿ ಇದು,
ಸಹಿಷ್ಣು-ಸಹಬಾಳ್ವೆಗೆ ಹಿಡಿದಂತೆ ಕನ್ನಡಿ.  
     ಭಾಷೆಯ ಮೇಲೆ ಮೋಹವಲ್ಲ,
     ಹರಿಸಿ ಎಲ್ಲರೂ ಪ್ರೀತಿಯ ಕೋಡಿ;
     ಎಲ್ಲ ನಮ್ಮವರೆನ್ನುತ ಕಲಿಸಿ,
     ಬೆಳೆಸಿ-ಉಳಿಸಿ ಅಸ್ತಿತ್ವ ಕಾಪಾಡಿ.. 

ಪ್ರೇಮ ಪೀಠಿಕೆ..!!

ನಗುವಾಗ ದಂತವದು ಬೆಳ್ಳಕ್ಕಿ ಸಾಲು,
ಬೈತಲೆಯೋ ಜಲಪಾತ ಮುಂಗುರುಳ ಕವಲು;
ನೀ ನಡೆಯೆ ನಾಚಿದೆ ನೋಡಲ್ಲಿ ನವಿಲು,
ನಿನ್ ಮೈಯ ನುಣುಪದುವೆ ಬಿಳಿ ಮೋಡದೊಡಲು...
ಉಸ್ಸಪ್ಪ ಸಾಕಾಯ್ತು ಹಾಕಿ ನಾ ಕಾಳು,
ನುಡಿಯುತಲಿ ಸುಸ್ತಾಯ್ತು ಹೊಗಳಿಕೆಯ ಸೊಲ್ಲು;
ಸಿಕ್ಕಿದ್ರೆ ನಿನಗೆ ಖುಷಿಯೆಂಬ feelಉ,
ಸಾರ್ಥಕವು ಇಷ್ಟೊತ್ತು ಬಿಟ್ಟಿದ್ಕೆ ರೈಲು,
ಎಲ್ಲಾನು ಸುಳ್ಳಲ್ಲ ಸ್ವಲ್ಪಾನೆ ಓಳು..ಸ್ವಲ್ಪಾನೆ ಓಳು.. 

ದೇಶ ನಮ್ಮದು - ಭಾರತ

ದೇಶ ನಮ್ಮದು
ದೇಶ ನಮ್ಮದು
ದೇಶ ನಮ್ಮದು ಭಾರತ,
ಎನಿದೆಂತದು, ದುಷ್ಟ ನೀತಿಯು;
ಭ್ರಷ್ಟವಾಗಿದೆ ಅವಿರತ..
     ಯುವ ಜನಾಂಗವು ತುಂಬಿ ತುಳುಕಿದೆ,
     ಏಕತೆಗೆ ಕೊರತೆಯು;
     ಬಿಸಿಯ ನೆತ್ತರು ಫಲವನೀಯದೆ,
     ಮಲಗೆ ದೇಶ ಜರ್ಜರಿತವು..
ಅವನು ಅಲ್ಲಿರೆ, ಇವನು ಇಲ್ಲಿರೆ
ಅವರು ಎಲ್ಲೋ ಇರುತಿರೆ;
ದೇಶ ಉನ್ನತಿ ಮಾರ್ಗ-
ಕಾಣುವುದೆಲ್ಲಿ ಸಾಧ್ಯ ಗೆಳೆಯರೇ!?
     ಜಡತೆ ಬಿಡುತಲಿ ಧ್ಯೇಯ ನೆಡುತಲಿ,
     ಒಟ್ಟಿಗೇಳುವ ಎಲ್ಲರೂ;
     ಭ್ರಷ್ಟ ಮುಕ್ತದ ದೇಶ ನೋಡಲು
     ಸಮರ ಸಾರುವ ಯೋಧರು,
     ನಾವ್ ಯುವ ಜನಾಂಗದ ಯೋಧರು,
     ಭಾವಿತ ಬರೆಯೆ ಸನ್ನದ್ಧರು.. ಜೈ ಹಿಂದ್

ನಾಡ ಋಣ...!!

ಹಸಿರದೇ ಮಡಿಲಲಿ ನಮ್ಮಯ ಜನ್ಮವು,
ಗುಡಿ ಗೋಪುರಗಳೇ ಕಾವಲಿದೆ;
ಜನತೆಯ ಸಾಗರ, ಮಮತೆಯ ಆಗರ,
ಕರುಣೆ-ಪ್ರೀತಿ ಜಲ ಬತ್ತದಿದೆ..
     ಗಾಳಿ ಸುಗಂಧ, ಮಾನವ ಬಂಧ,
     ಸಡಿಲಿಸದಂತೆ ಕಠಿಣವಿದೆ;
     ಪ್ರೀತಿಯ ಬಟ್ಟಲು, ಅಕ್ಕರೆ ತೊಟ್ಟಿಲು,
     ಇಲ್ಲಿ ಬರುವರಿಗೂ ಮೀಸಲಿದೆ.
ಸಮತೆಯ ಮಾದರಿ, ಆಗುತ ಸದರಿ,
ನಮ್ಮ ರಾಜ್ಯವೇ ಬೆಳಗುತಿದೆ;
ಕರ್ನಾಟಕವದೆ  ಏಕತೆ ತಾಣವು
ಎನ್ನುವ ವಾಣಿ ಮೊಳಗುತಿದೆ..
     ಅನ್ಯರು ಎನ್ನದೆ ಎಲ್ಲರೂ ಒಂದೆ,
     ಎನ್ನುತ ತೋಳಲಿ ಬಂಧಿಸಿದೆ;
     ಕನ್ನಡಾಂಬೆಯ ಋಣ ತೀರಿಸಲು,
     ಭಾಷೆಯ ಬೆಳಕನು ಹರಡಿಸಿರಿ,
     ನೀವ್, ಸಂಸ್ಕೃತಿ ಮರೆಯದೆ ಜೀವಿಸಿರಿ...
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ.. 

ನನ್ನ ಶಾಲೆ..

ವಿದ್ಯೆ-ಶಿಸ್ತಿನ ಆಗರ, ವ್ಯಕ್ತಿ ವಿಕಸನದ ಆಧಾರ,
ನನ್ನ ರೂಪಿಸಿದ ಗುರುಕುಲಕ್ಕೆ ನನ್ನದಿದೋ ವಂದನೆ.

ಅಕ್ಷರ ಜ್ಞಾನವನ್ನಷ್ಟೇ ಅಲ್ಲದೆ;
ಜೀವನ ಮೌಲ್ಯಗಳ ಅರಿವಿನ ಮೇವು,
"ನಾನು" ಅಲ್ಲವದು ಎಂದಿಗೂ "ನಾವು",
ಸ್ನೇಹ-ಪ್ರೀತಿಗಳೇ ಬಾಳ್ವೆಯ ಬುನಾದಿ ಎಂದು,
ನನ್ನ ರೂಪಿಸಿದ ಗುರುಕುಲಕ್ಕೆ ನನ್ನದಿದೋ ವಂದನೆ.

ಅಕ್ಷರ ಜ್ಞಾನವನ್ನಷ್ಟೇ ಅಲ್ಲದೆ;
ಸಹಬಾಳ್ವೆ, ಸಹಾಯಗಳ ಕುರಿತು,
ಕೋಪ, ದ್ವೇಷ, ವಿಕೃತಿಗಳ ಮರೆತು-
ಬಾಳುವ ಭಾವನೆಗೆ ಅಡಿಪಾಯ ಹಾಕಿ,
ನನ್ನ ರೂಪಿಸಿದ ಗುರುಕುಲಕ್ಕೆ ನನ್ನದಿದೋ ವಂದನೆ.

ಅಕ್ಷರ ಜ್ಞಾನವನ್ನಷ್ಟೇ ಅಲ್ಲದೆ;
ಸ್ಥಿತ ಪ್ರಜ್ಞೆ, ಸಮಂಜಸ ಚಿಂತನೆ,
ಸೂಕ್ಷ್ಮದ ಅರಿವು ಇರುವ ಮನರಂಜನೆ,
ಉಲ್ಲಾಸಭರಿತ ಜೀವನೋತ್ಸಾಹದ ಬಾಳ್ವೆ ನಡೆಸಲು,
ನನ್ನ ರೂಪಿಸಿದ ಗುರುಕುಲಕ್ಕೆ ನನ್ನದಿದೋ ವಂದನೆ. 

ದೇವರ ಉತ್ತರ

ಎಂದೂ ಬೇಸರವು ಕಾಡದಿರುವಂಥ,
ಮನದಿ ಗೊಂದಲದ ಗುರುತು ಇರದಂಥ,
ಚಂದ ಸಂತಸದ ಸ್ಫೂರ್ತಿ ತೋರೆನ್ನಲು;
ದೈವ ತೋರಿದ ಆ ನಿನ್ನ ನಗುವ...

ಆಯಸ್ಕಾಂತ

ಆಯಸ್ಕಾಂತೀಯ ಮಂದಸ್ಮಿತೆ ನೀನು,
ಮೋಹಗೊಂಡ ಮೂಕವಿಸ್ಮಿತ ನಾನು..

ಸಕಲವೂ ನೀನೆ..!!

ಗಾಳಿಯಲ್ಲಿ ನಿನ್ನಾಕಾರ ಬಿಡಿಸಿ
ನಿನ್ನ ಸ್ಪರ್ಶಿಸಿದ ಅನುಭೂತಿ ಪಡೆವಂತೆ,
ಹಾರೋ ಹಕ್ಕಿಗಳ ಕುಶಲ ಕೇಳಿ
ನಿನ್ನ ಬಗೆಗಿನ ವರದಿ ತಿಳಿವಂತೆ,
ಮಿನುಗೋ ತಾರೆಗಳ ಹೊಳಪ ನೋಡಿ
ನಿನ್ನ ಕಂಗಳದೇ ಪ್ರತಿಯ ಪಡೆದಂತೆ,
ನಲ್ಮೆ-ಅನುರಾಗ, ಜೀವನದ ಸುಯೋಗ
ಎಲ್ಲ ನಿನ್ನಲ್ಲೇ ವಿಲೀನಗೊಂಡಂತೆ,
ಭಾವ ಮೂಡಿಸೋ ತೆರದಿ ನೀನಿರಲು;
ನನ್ನ ಊಹೆಗಳಿಗೆಲ್ಲಿ ಕಡಿವಾಣ?
ಸಕಲವೂ ನನಗೆ ನಿನ್ನದೆ ಪ್ರತಿಬಿಂಬ.

Friday, September 18, 2015

ಋತುಗಾಲದೊಡತಿ..!!!

ಎಷ್ಟು ಋತುಗಳ ದರ್ಶನವೋ
ನಿನ್ನ ಮುಖಭಾವದಲ್ಲಿ..!?

ಕೋಪ ಬಂದಾಗ ಬೇಸಿಗೆಯು,
ಉರಿವ ಕಣ್ಣು ಸಿಡಿಮದ್ದು;
ತಲ್ಲಣಿಸೋ  ನಿನ್ನ ಯುದ್ಧ ಭೂಮಿಕೆಯು
ನೋಡಲೇಕೋ ಭಲೆ ಮುದ್ದು..

ದುಃಖತಪ್ತಳು ನೀನಾದರೆ ಅದೇ
ಜಡಿಯ ಮಳೆಗಾಲವಂತೆ;
ಮಗುವಿನಾ ತೆರದಿ ಮುಗ್ಧತೆ ಮೂಡಿ
ಚೆಂದ ಗೊಂಬೆಯಾದಂತೆ..

ನಗುವಿನಾ ಸಣ್ಣ ಸಿಂಚನವು ಸಾಕು
ನಲ್ಮೆಯ ವಸಂತದಂತೆ;
ಹೊಸ ಕಳೆ ಹೊಸತು ಭಾವ ಭಂಡಾರ
ಜೀವ ತಳೆದು ನಿಂತಂತೆ..

ಏನೂ ನುಡಿಯದ ಮುನಿಸು ರೂಪವದು
ಕೊರೆವ ಚಳಿಗಾಲದಂತೆ;
ಮಾತನಾಡದೆ ಕಾಡೊ ಘಳಿಗೆಯದು
ರಮಣೀಯ ತಪನೆಯಂತೆ..

ಎಷ್ಟು ಋತುಗಳ ದರ್ಶನವೋ
ನಿನ್ನ ಮುಖಭಾವದಲ್ಲಿ..!?
ಸಂಘಟಿತ ಋತು ಪರ್ವವಿಹುದು
ನಿನ್ನ ಸಾಂಗತ್ಯದಲ್ಲಿ..ನಿನ್ನ ಸಾಂಗತ್ಯದಲ್ಲಿ..

Sunday, September 13, 2015

ಸಂಗೀತ ಶೋಭಿತೆ..ನನ್ನಾಕೆ..!!

ಚಿರಂತನ ಗಾನ ನಿನ್ನಯ ನಗುವಿನ 
ರಾಗವ ಬೆರೆಸಿ ಮೂಡುತಿದೆ;
ಪರವಶಗೊಳಿಸುವ ಚಂದದ ಮೋಹಕ
ಸುಂದರ ಸ್ವರಗಳ ಪೋಣಿಸಿದೆ. 
ಅಮಲಿನ ರೂಪದಿ ಸಂಗೀತವನು 
ನಿನ್ನಯ ಕಂಗಳು ಚಿಮ್ಮಿಸಿದೆ;
ಸೋಜಿಗವೆಂಬ ಇಂಪದು ಒಂದು
ನಾಭಿಯ ಮೂಲದಿ ಉದಿಸುತಿದೆ.
ಕಣ್ಣುಬ್ಬದುವೆ ತಕಿಟ ಧೀಂ ತನನ
ತಾಳದ ತರದಲಿ ನರ್ತಿಸಿದೆ;
ಕೇಶ ರಾಶಿಯದು ಸುಲಲಿತ ಗಾನದ
ಮೋಡಿಗೆ ಸಿಲುಕಿ ತೇಲುತಿದೆ.. 
ಕರದಲಿ ರಿಂಗಣ ಬಳೆಗಳ ಸದ್ದು
ಹಾಡಿನ ಶ್ರುತಿಯನು ಸರಿಪಡಿಸಿ,
ನನ್ನೆದೆ ತಾಳದ ಲಯ-ಗತಿಯನ್ನು
ಹಿಮ್ಮೇಳಕೆ ಸರಿದೂಗಿಸಿದೆ,
ಸಮ್ಮಿಲನಕೆ ಪ್ರತಿಪಾದಿಸಿದೆ..

Monday, August 3, 2015

ನೆನಪಿನ ಬಾಣ..

ನೆನಪೆಂಬುದಿಹುದಲ್ಲಿ ಕಾಲ ಗರ್ಭದ ಒಳಗೆ,
ಭೂಗತವಾಗದು ಏಕೆ ಕಾಣದಂತೆ;
ಆಗೊಮ್ಮೆ ಈಗೊಮ್ಮೆ ಕಣ್ಣೀರು ಚಿಮ್ಮಿಸಲು,
ಭಾವನೆಯೇ ಹೊಕ್ಕಿಹುದು ಬಾಣದಂತೆ-ಯೋಗರಾಜ..

ಪೀಠಿಕೆ..

ನೀ ಒಲವ ದೇವತೆ, ನಾ ನಿನ್ನ ಭಕ್ತ;
ನಿನ್ನ ಆರಾಧನೆಯಲೇ ನಾನಿನ್ನು ಆಸಕ್ತ.
ನೀ ನೋಡೋ ಗುಂಗಿಗೇ ನಾ ಪಾನಮತ್ತ,
ಎಲ್ಲ ಪೀಠಿಕೆಯು ನಿನ್ನೊಲವ ನಿಮಿತ್ತ...ನಿನ್ನೊಲವ ನಿಮಿತ್ತ...

smileಉ.. :)

ಯುದ್ಧ ನಿಲ್ಲಿಸಲೊಂದು ನಗುವು ಸಾಕು,
ಹಾಗೇ ಒಂದು smileಉ ಬಿಸಾಕು.. 

ಜೀವಕಿನ್ನೇನು ಬೇಕು..!?

ಚಂದ ಸಪೂರ ಮೈಮಾಟ
ನಿನ್ನ ನಡಿಗೆ ನಾಜೂಕು;
ತುಂಟ ನಗುವಿನ ಚೆಲ್ಲಾಟ,
ದಾರಿ ತಪ್ಪಲದು ಸಾಕು..
ನೀನು ಮುಡಿದಿರೋ ಹೂವಿಗೂ ಕೂಡ
ಏನೋ ಗಳಿಸಿದ ಧಿಮಾಕು
ನಿನ್ನ ಸೋಕಿರುವ ಗಾಳಿ ಹೇಳುತಿದೆ
"ಜೀವಕಿನ್ನೇನು ಬೇಕು..ಜೀವಕಿನ್ನೇನು ಬೇಕು..!?"

ಸಂಚು.!

ಪೂರ್ವನಿಯೋಜಿತ ಸಂಚೇನು ಇದು?
ನಿನ್ನ ಕಂಡೊಡನೆ ಮರುಳಾಗಿಬಿಟ್ಟೆ..
ಕಣ್ಗಳ ಸಂಘಟಿತ ಹೊಂಚಿನs ಬಲೆಗೆ;
ನೋಡುತ್ತಾ ನಿಂತಲ್ಲೆ ನಾ ನಿಂತುಬಿಟ್ಟೆ.

ಬಾಳ ನಿಲ್ದಾಣ..

ನನ್ನ ಬಾಳ ದಾರಿ-
ಎಷ್ಟಾದರೂ ಕವಲೊಡೆಯಲಿ,
ಎಷ್ಟಾದರೂ ದಿಕ್ಕು ಬದಲಿಸಲಿ,
ಎಲ್ಲಾದರೂ ಹಾದಿ ತಪ್ಪಿ ಮತ್ತೊಂದೆಡೆ ತಿರುಗಲಿ;
ಭಯವಂತು ಇಲ್ಲ...
ಏಕೆಂದರೆ ಒಂದಂತು ಖಾತ್ರಿ-
ನನ್ನ ಎಲ್ಲ ದಿಕ್ಕು-ದಾರಿಗಳಿಗೂ
ಇರುವುದೊಂದೇ ನಿಲ್ದಾಣ - ನಿನ್ನ ಮನಸು.. 

Monday, July 27, 2015

ಬಾಲ್ಯ...ದೈವ ಭಿಕ್ಷೆ..

ಶುಭ್ರ ಮನಸಿನ ಕಪಟವರಿಯದ
ನಗುಮೊಗದ ದಿವ್ಯ ಸೃಷ್ಟಿ;
ಕೊಂಚ ಕೊಂಕಿಲ್ಲ, ಮೋಸವದು ಸಲ್ಲ,
ಬಾಲ್ಯ ಲೋಕವು ಸಮಷ್ಠಿ..
                 ಸಣ್ಣ ನಗುವೂ ಭರಪೂರ ಹಾಸ್ಯ
                 ಮುಕ್ತ ಮನದ ಸಂತೋಷ;
                 ಭಾವ ವ್ಯಕ್ತಿಸಲು ಹಿಂಜರಿಕೆಯಿಲ್ಲ
                 ಸಂತೃಪ್ತಿಯದೆ ಮಂದಹಾಸ..
ಸುಳ್ಳೆoದರೇನು!? ನಾ-ನೀನೆಂದರೇನು!?
ಸಂಘಟಿತ ದಿವ್ಯಭಾವ;
ಪ್ರತಿ ನಡಿಗೆಯದು ಜೊತೆ ಸಾಗೋ ಮಂತ್ರ
ಕಣ್ಣಾಗದೆಂದೂ ತೇವ..
                 ಬಾಲ್ಯ ಹಂತವದು ದೈವ ಭಿಕ್ಷೆ
                 ಬಾಳ ಶುರುವಾತಿಗೆಂದೇ;
                 ಜೀವನದ ಪೂರ ಉಳಿಸಿಕೊಂಡ್ ಹೋಗೆ
                 ಸ್ವರ್ಗ ನಮ್ ಕಣ್ಣ ಮುಂದೆ..
                 ಸ್ವರ್ಗ ನಮ್ ಕಣ್ಣ ಮುಂದೆ.. 

Saturday, May 2, 2015

ಅನಿರೀಕ್ಷಿತ ಸಂಗಾತಿ..!!!

ನಾನೊಬ್ಬ software engineer. ಕೇಳಕ್ಕೇನೋ 'ಆಹಾ..' ಅಂತ ಅನ್ಸಿದ್ರೂ ಕೂಡ, ವಾಸ್ತವದಲ್ಲಿ 'ಅಯ್ಯೋ..' ಅನ್ಸೋಂತ ಕೆಲ್ಸ ನೋಡಿ.. ಆದಾಯ ಏನೋ ಇದೆ, ಕೆಲವು ಸರ್ತಿ 'ಅಗತ್ಯಕ್ಕಿಂತ ಸ್ವಲ್ಪ ಜಾಸ್ತಿನೇ ಏನೋ..' ಅನ್ನಿಸೋಷ್ಟು; ಆದ್ರೆ 60-70% ಜನಕ್ಕೆ ಮಾಡ್ತಿರೋ ಕೆಲಸದಲ್ಲಿ ಅಷ್ಟಾಗಿ ಖುಷಿ, ತೃಪ್ತಿ ಇಲ್ದೆ ಇರೋ ವೃತ್ತಿ ಅನ್ನೋ ಖ್ಯಾತಿಗೆ ಹೆಸರಾಗಿರೋದೆ ಇದರ ವಿಶೇಷ. 'ಹೊಸತೇನಿದೆ ಮಾರಾಯ..!?' ಅಂತ ಬೆಳಗ್ಗೆ ಎದ್ದಾಗೆಲ್ಲ ಪ್ರಶ್ನೆ ಮಾಡ್ಕೊಳ್ತಾ, ಹಾಡಿದ್ದೆ ಹಾಡೋ ಕಿಸಬಾಯಿದಾಸ ಅನ್ನೋದ್ಕೆ ಸಾಕ್ಷಿ ಹಾಗೆ, ಮಾಡಿದ್ನೇ ಮಾಡಿ ಅದಕ್ಕೆ ತಿಂಗಳಿಗೆ ಸರಿಯಾಗಿ ಸಂಬಳ ಎಣಿಸಿಕೊಳ್ಳೋದ್ಕೆ ಸಹಾಯ ಮಾಡೋ ಕೆಲಸ. Routine..
            ಇಂಥ routineಗಳ ನಡುವೆ; party, pubs, travelling,  ಹೀಗೆ ತಮ್ಮನ್ನು ತಾವು ತೊಡಗಿಸಿಕೊಳ್ತಾರೆ. ಆದ್ರೂ, ಸಂಗಾತಿ ಅಂತ, ಭಾವನೆಗಳನ್ನ ಹಂಚಿಕೊಳ್ಳೋಕೆ ಯಾರೂ ಇಲ್ದೆ ಇರೋ ಇದೆಲ್ಲಾ ಪ್ರಯತ್ನಗಳು ನೀರಿನ ಮೇಲೆ ನಿಲ್ಲೋಂತ ಎಣ್ಣೆಯ ಹನಿಗಳ ಹಾಗೆ.  ಅಷ್ಟು ಜೊತೇಲೇ ಇದ್ರೂ ನಮ್ಮೊಳಗೆ ಬೆರೆಯದ, ನಮ್ಮೊಳಗೆ ಒಂದಾಗದ, ಜಾರಿಹೋಗೋ ಕ್ಷಣಿಕ ಸರಕುಗಳು. ಜೊತೆಯಲ್ಲಿ ಸೇರಿ, ಒಂದಾಗಿ, ಸಿಹಿ ನೀಡೊಂತ ಸಕ್ಕರೆಯಂತ ಸಂಗಾತಿ ಸಿಕ್ಕರೆ ಎಂಥ ಚೆಂದ. ಇಂಥ ಬಯಕೆಯ ನಿರೀಕ್ಷೇಲಿ ಇದ್ದ ಎಷ್ಟೋ ಮಂದಿಯಲ್ಲಿ ನಾನೂ ಒಬ್ಬ..
           ಇಂಥದೇ ಎಂದಿನ ನಿರೀಕ್ಷೆ ಹೊತ್ತು, ಅವತ್ತು ಯಾಕೆ ಅಷ್ಟು ಬೇಗ ಮನೆಯಿಂದ officeಗೆ ಹೊರಟೆನೊ ಗೊತ್ತಿಲ್ಲ. ಯಾವಾಗ್ಲೂ 9:30 ರ ಅಷ್ಟೊತ್ತಿಗೆ ಹಾಜರಾತಿ ಕೊಡ್ತಿದ್ದವ್ನು ಅವತ್ತು 8:15 ಕ್ಕೆಲ್ಲ campusನ gate enter ಆಗ್ಬಿಟ್ಟಿದ್ದೆ.!! Main gate ಇಂದ ನನ್ನ officeನ buildingಗೆ 5 ರಿಂದ 7 ನಿಮಿಷಗಳ ನಡಿಗೆಯ ಹಾದಿ. ಆ ನಡಿಗೆಯ ಪೂರ ಭಾರದ ಹೆಜ್ಜೆ ಹಾಕ್ಕೊಳ್ತಾ, ಹೊಸತರ ನಿರೀಕ್ಷೆ ಮೈಗೂಡಿಸಿಕೊಳ್ತಾ, ಹಾಗೋ-ಹೀಗೋ buildingನ lift ಹತ್ರ ಬಂದೆ.
            ಮೂರನೇ ಮಹಡಿಯ liftನ ದ್ವಾರ ತೆರೆದ ತಕ್ಷಣ ಎಂದಿನಂತೆ ಹಸನ್ಮುಖರಾಗಿ ಬರಮಾಡಿಕೊಳ್ಳುವಂತ security guard. ನಮ್ಮ ಕಡೆಯಿಂದಲೂ ಒಂದು ಸಣ್ಣ ಸ್ನೇಹಪೂರ್ವಕ ನಗುವಿನ ಹೊರತು ಬೇರೇನೂ expectations ಇಲ್ದಿರ ನಮಸ್ಕಾರದೊಂದಿಗೆ 'good morning' ಹೇಳೋ ಅವರನ್ನ ನೋಡಿದಾಗೆಲ್ಲ ಮನಸ್ಸಿಗೆ ಏನೋ ಸಣ್ಣ ಉಲ್ಲಾಸ.
            ಆದ್ರೂ, campus entrance ಸರಿ, buildingನ entrance ಕೂಡ ಸರಿ, ಆದ್ರೆ floorಗೆ enter ಆಗೋ ಬಾಗಿಲ ಬಳಿಯಲ್ಲೂ security ಇರೋದನ್ನ ಮೊದಲ ಸರ್ತಿ ನೋಡಿದಾಗ, 'ಒಂದ್ಸರಿ ಕನ್ನಡಿಲಿ ನೋಡ್ಕೊಳೋಣ ನಾನೇನು ಕಳ್ಳನ ಹಾಗೆ ಕಾಣ್ತಿದೀನ.. ಅಥವಾ, ನಾನು ಮಾಡಲು ಹೊರಟಿರುವ ಕೆಲಸ ದೇಶದ ಸುರಕ್ಷೆತೆಗೆ ಸಂಬಂಧಿಸಿದ highly confidential ಇರೋ secret agent ಕೆಲಸನ..' ಅಂತ ಅನ್ಸಿತ್ತು. ಆಮೇಲೆ ಗೊತ್ತಾಗಿದ್ದು, ಅದು ಅಷ್ಟೊಂದು secrecyದು ಅಲ್ಲದಿದ್ರೂ ಸ್ವಲ್ಪ confidential data ಮೇಲೆ ಕೆಲಸ ಅಂತ.
            ಇರಲಿ, ವಿಷಯ ಅದಲ್ಲ. ಮೂರನೆ ಮಹಡಿಯ security sir ಜೊತೆ smile exchange ಆದ್ಮೇಲೆ, ಪಕ್ಕಕ್ಕೆ ತಿರುಗಿದ್ದೇ ಕಂಡದ್ದು; ಮೋಹಕತೆ, ಆಕರ್ಷಣೆ, ಚೆಲುವು, ಸಹಜತೆ, ಎಲ್ಲದರ package ಅನ್ಸೋಂತ ಹುಡುಗಿ. ಒಬ್ಬ ಹುಡುಗನ ಜೊತೆ ಮಾತಾಡ್ತಾ ಅಲ್ಲೇ ಕೂತಿದ್ಲು. ನೆಟ್ಟ ಕಣ್ಣು ನೆಟ್ಟಹಾಗೆ, ರೆಪ್ಪೆಗೆ ರಜಾ ಕೊಟ್ಟಿದಿನೇನೋ ಅನ್ನೋಹಾಗೆ ನೋಡ್ಕೊಳ್ತಾ ಅವಳ ಮುಂದೆ ಹಾದು ಹೋದೆ. ಆ ಕ್ಷಣಕ್ಕೆ ತಲೆ ಎತ್ತಿ ಅದೇ ಚೆಂದದ ನಗುವಲ್ಲಿ ನೋಡಿದಳು. 'Hi ..' ಅಂದೆ; 'Hello ..' ಅಂದ್ಲು. ಅಷ್ಟೊತ್ತಿಗೆ ನಾನು enter ಆಗಬೇಕಿದ್ದ ಬಾಗಿಲು ಸಿಕ್ಕಿಬಿಡ್ತು! ಇನ್ನೆಲ್ಲಿ ನಿಂತ್ಕೊಂಡು ಮಾತಾಡೋದು, ತಕ್ಷಣಕ್ಕೆ ಏನೂ ಹೊಳೀಲೆ ಇಲ್ಲ, ಅವಳ ನಗುವಲ್ಲಿ ದಂಗಾಗಿ ಮಂಕಾದ brainಗೆ.!!
            "ಉಗೀರಿ ಮಕ್ಕೆ..!" ಅನ್ನೋ ನನ್ನ friend ಒಬ್ಬನ ಬೈಗುಳ ನೆನಪಾಗಿ ನಂಗೆ ನಾನೇ ಹೇಳ್ಕೊಂಡೆ.
            ಗಲಿಬಿಲಿ, ಚಡಪಡಿಕೇಲೇ ಅವಳನ್ನ ಮಾತಾಡ್ಸೋಕೆ ಕಾರಣ ಹುಡುಕೊಳ್ತಾ common area ಗೆ ಹೋದೆ. ದೇವ್ರು ಕೂಡ 'ಥಟ್ ಅಂತ ಹೇಳಿ..' ಕಾರ್ಯಕ್ರಮಾನ ನೋಡಿ ಭಾರಿ influence ಆಗಿರೋ ಹಾಗಿದಾನೆ ಅನ್ನಿಸ್ತು. ಕಾರಣ, ನನ್ನ ಪ್ರಾರ್ಥನೆಯ ಪ್ರಶ್ನೆಗೆ ಥಟ್ ಅಂತ ಉತ್ತರ ಕೊಟ್ಟಿದ್ದ.
            ನಾನು ಹೊರಗೆ ಪುಳಕಿತನಾಗಲಿಕ್ಕೆ ಕಾರಣವಾದಂತ ಹುಡುಗಿಯ ID card common area ಲೇ ಇತ್ತು. ಆಕೆ ಹೊರಗೆ ಹೋಗೋ ಮುಂಚೆ ಮರೆತು ಹೋಗಿದಾಳೆ.  ನಮ್ಮ floor ಒಳಗೆ ಬರಲಿಕ್ಕೆ ಬಾಗಿಲ ಬಳಿ swipe ಮಾಡಿ ಬರಬೇಕು. Access restricted area. ಸಿಕ್ತಲ್ಲ chance. ಅದ್ನ ತಗೊಂಡ್ ಹೋಗಿ ಅವಳಿಗೆ ಕೊಟ್ಟು ಪರಿಚಯ ಮಾಡ್ಕೊಳ್ಳೋ bumper offer. ಹ್ಹಾ.. ಇದರಿಂದ ಖುಷಿ ಹೆಚ್ಚಾಗಲಿಕ್ಕೆ ಕಾರಣ ಏನಂದ್ರೆ, ಆಕೆ ಹೊಸದಾಗಿ ಕೆಲಸಕ್ಕೆ ಸೇರಿಕೊಂಡಿದ್ದು, ನಮ್ floor ನಲ್ಲೇ ಕೆಲ್ಸ ಅಂತ. ಪರಿಚಯ ಬೆಳೆಸಿಕೊಳ್ಳೋಕೆ ಅವಕಾಶದ ಭಂಡಾರನೇ ಸಿಕ್ಕಿದಷ್ಟು ಆನಂದ.
            ID card ತಗೊಂಡ್ ಹೋಗಿ, ಅವಳಿಗೆ ಕೊಟ್ಟು, "ಕುಶಲೋಪರಿ ಸಾಂಪ್ರತ" ಮುಗಿಸ್ಕೊಂಡು, ನಾಳೆಯಿಂದ ಏನೇನ್ ಮಾಡ್ಬೇಕು ಅವಳೊಟ್ಟಿಗೆ ಮಾತಾಡ್ಲಿಕ್ಕೆ, ಆಪ್ತನಾಗಲಿಕ್ಕೆ ಅಂತ ಒಂದು ರೂಪುರೇಷೆ ready ಮಾಡ್ಕೊಂಡೆ.
            ಇನ್ಮುಂದೆ office ಗೆ ಒಂದು ಹೊಸ ಹುಮ್ಮಸ್ಸಿನೊಂದಿಗೆ ಹೊರಡಲಿಕ್ಕೆ ಶುರು ಮಾಡಿದೆ.. :)