ನೂತನ-ನವನವೀನ,
ತಾರುಣ್ಯ ಚೇತನ ಸುವಿಹಾರ ಯಾನ,
ಭವ್ಯ-ಬಂಧನದ ಶ್ರುತಿ ತಿಲ್ಲಾನ,
ಭೃಂಗ-ಶೃಂಗಾರದಾಲಿಂಗನ,
ಹೊಸ ಶುರುವಾತಿನ ಪಲ್ಲವಿ ಗಾನ;
ಸೂಚಿಸೋ ಹೊಸ ವರ್ಷ..
ನೂತನ-ನವನವೀನ,
ತಾರುಣ್ಯ ಚೇತನ ಸುವಿಹಾರ ಯಾನ,
ಭವ್ಯ-ಬಂಧನದ ಶ್ರುತಿ ತಿಲ್ಲಾನ,
ಭೃಂಗ-ಶೃಂಗಾರದಾಲಿಂಗನ,
ಹೊಸ ಶುರುವಾತಿನ ಪಲ್ಲವಿ ಗಾನ;
ಸೂಚಿಸೋ ಹೊಸ ವರ್ಷ..
ಮುಂಗುರುಳ ಉಯ್ಯಾಲೆ ಜೀಕುವಾ ಸಲಿಗೆ,
ಕಣ್ಣುಬ್ಬಿನ ಬಾಗಲಿ ಜಾರುವಾ ಸಲಿಗೆ,
ತುಟಿಯಂಚಲಿ ಗುಳಿಕೆನ್ನೆ ತಾಗುವಾ ಸಲಿಗೆ,
ಕರುಣಿಸೋ ಮನಸಿಲ್ಲವೇ ನಿಂಗೆ !?
ಒಲವಿನಾ ಸಂತೇಲಿ ಕಳುವಾಗೋ ಘಳಿಗೆ,
ಕಣ್ಮುಚ್ಚಿ ಕಣ್ತೆರೆಯೇ ನೀ ಕಂಡ ಘಳಿಗೆ,
ನವಿರಾದ ನೆನಪನ್ನು ಮಾರುವಾ ಘಳಿಗೆ,
ಎಷ್ಟೆಂದು ವ್ಯವಹರಿಸೋ ಮನಸಿಲ್ಲವೇ ನಿಂಗೆ !?
ಮನಸೊಂದು ಮಾರ್ದನಿಯ ಮಾಯಾವೀ ಮಳಿಗೆ,
ಕನಸನ್ನು ಕೊಳ್ಳುದಕೆ ಕಟ್ಟಿರುವ ಮಳಿಗೆ,
ಒಳಗೊಂದು ಓರೆಯಲಿ ಓಲೈಕೆ ಮಳಿಗೆ,
ತುಸು ಬಂದು ಓಡಾಡೋ ಮನಸಿಲ್ಲವೇ ನಿಂಗೆ !?
ಕಣ್ ಕೋವಿ ಗುರಿಯಲ್ಲಿ ಸಿಕ್ಕಿರುವ ಸುಳಿಗೆ,
ಏಕಮುಖ ಸಂಚಾರ ತಿರುವಿರದಾ ಸುಳಿಗೆ,
ಉನ್ಮತ್ತ ನಿನ್ನತ್ತ ನಾ ಸುತ್ತೋ ಸುಳಿಗೆ,
ದೂಡುತಲಿ ಕೈಚಾಚೊ ಮನಸಿಲ್ಲವೇ ನಿಂಗೆ !?
ಕಾಡುತಲಿ ಬಿಗಿದಪ್ಪೊ ಮನಸಿಲ್ಲವೇ ನಿಂಗೆ !?
ಅಹಂ ಸ್ಥೂಲಮಿದಂ ಚಿತ್ತ
ನಿರ್ಮಲ ಶಾಂತಿ ಇರುವುದೆತ್ತ!!?
ಕ್ಷಣಿಕ ದುರ್ಬಲ ಕೋಪ ನಿಮಿತ್ತ,
ಭಾರವೀ ಮನಸು ದುಃಖ ಉದಾತ್ತ..
ಕ್ಷುಲ್ಲಕ ಕಾರಣ, ಕ್ಷೀಣಿತ ತಾಳ್ಮೆ,
"ನಾನೇ ಸರಿ" ಕೀಚಕ ಜಾಣ್ಮೆ;
ಮಸುಕು ನೋಟಕ್ಕೆ ಹಮ್ಮಿನ ಹೆಮ್ಮೆ -
ಬೀಳಬೇಕಿದೆ ಚಾಟಿಯೇಟೊಮ್ಮೆ !!
ಕಾಣದು ಎದುರಲಿ ನೋವಿನ ರಾಶಿ,
ಕೋಪಕೆ ಸಿಕ್ಕಿರೋ ಮೆದುಳೇ ವಿದೂಷಿ!
ಸಣ್ಣ ಕಿರುನಗೆಗೂ ಭಾರೀ ಚೌಕಾಶಿ -
ಛಲದ ಚಿಗುರದುವೆ ಜಡತೆಯ ದೋಷಿ..
ತಾಳ್ಮೆ-ಕರುಣೆ ಇರಲೆಂದೂ ಜೊತೆಗೆ,
ಕೋಪ ನಿಷ್ಕರುಣೆ ಜ್ವಲಿಸಲಿ ಚಿತೆಗೆ;
ನಗುವನುಣಬಡಿಸಿ ಸಹಚರರ ಕಥೆಗೆ,
ಸನ್ಮತಿಯ ಭಾವವೇ ಶ್ರಾದ್ಧವದು ವ್ಯಥೆಗೆ..!!
ದಿನ ಕಳೆದಂತೆ ನೀ ನನಗೆ ಸಿಗದಿರೆ
ಅದುವೇ ಸಂಜೆಗಾದಂತ ಗಾಯ;
ತಂಗಾಳಿಯ ಮಧ್ಯೆ ತಬ್ಬಿದಿಬ್ಬನಿಯಂತೆ
ಸಿಕ್ಕರದುವೇ ನಲ್ಮೆಯ ಸಹಾಯ..
ಬೆಳಕಿನೋಕುಳಿಯದು ನೇಸರನ ಇಂಗಿತವು
ನಾ-ನೀನು ರಂಗೇರಲೆಂದು;
ಇಣುಕಿಣುಕಿ ಬಂದಿಹನು ಚಂದಿರನು ನೋಡಲ್ಲಿ
ಪ್ರಣಯಕ್ಕೆ ಕಂದೀಲು ತಾನೆಂದು..
ಬೆರಳಿಗೆ ಬೆರಳನ್ನು ನೇಯ್ಗೆಯ ಮಾಡೋಂತ
ಕಸೂತಿ ಈಗಷ್ಟೇ ಕಲಿತೆ;
ಪ್ರಾವಿಣ್ಯತೇಗೂ ನಂಟಾಗಿರೋಂತ
ನಿಪುಣ ನಾನಾದೆನಂತೆ..!
ಇಳಿಸಂಜೆ ತಿಳಿಯಾಗಿ ನಳನಳಿಸಿದಂತಾಗಿ
ತಲುಪಿಸಿರೋ ಕಳಕಳಿಯು ಒಂದೇ;
ನನ್ ತೋಳು ನಿನ್ ತೋಳು ಬೇರಲ್ಲ ಅಂತ
ಆಗಬೇಕೊಪ್ಪಂದ ಇಂದೇ..!!