ಯೋಗಸಾಹಿತ್ಯ

ಯೋಗಸಾಹಿತ್ಯ
ಭಾವನೆಗಳ ಅಂಗಳದಲಿ ಪದಗಳ ಓಡಾಟ...!!

Monday, November 9, 2015

ವಿರಹ..!!!

ವಿರಹದಾs ನೋವನ್ನು ನಾ ತಾಳಲಾರೆ
ನನ್ನೇಕೆ ನೀ ಹೀಗೆ ಬಿಟ್ಟು ಹೋದೆ!
ನೀ ಮಾಡಿ ಕೊಟ್ಟಂತ ಉಪ್ಪಿಟ್ಟು, ಒಬ್ಬಟ್ಟು -
ನಿಪ್ಪಟ್ಟು ನೆನಪಾಗಿ ನಿಂಗೆ ಕಾದೆ..  
      ನೀನು ಬರದಿದ್ದರೂ ತೊಂದರೆಯು ಇಲ್ಲ,
      ಅದ ಮಾಡೊ recipeಯ ಕೊಟ್ಟು ಕಳಿಸು;
     ಅದನೆಲ್ಲಾ ಮಾಡಿ ನಾ ನಿಂಗೂನೂ ಕೂಡ,
     parcelಉ ಕಳಿಸುವೆನು ಕರುಣೆ ತೋರ್ಸು.. 

ಜೀವನ ಸೂತ್ರ..!!

ಅಂಗುಲ ಜಾಗ ಅನ್ನದ ಗಡಿಗೆ,
ಮೈಯ ಮುಚ್ಚಲು ಮಾನದ ಉಡುಗೆ,
ಸ್ವಚ್ಛ ಮನಸಿರುವ ಮೆಚ್ಚಿಸೊ ನಡಿಗೆ,
ಇದ್ದರದುವೆ ಸುಖ ಜೀವನವು;
     ನೆಮ್ಮದಿ ಭಾವ ಬಾಳಿನ ತೊಡುಗೆ,
     ಅಖಂಡ ಕರುಣೆ ದೇವರ ಕೊಡುಗೆ,
     ಮೆಚ್ಚಿದ ಮಡದಿ ಸಂಗದ ನಡಿಗೆ,
     ಇದ್ದರೆ ಜನುಮ ಪಾವನವು.. 

ಕರುನಾಡು

ಕರುನಾಡು ನಮ್ಮದೆಂದೇಳಿ
ಎಲ್ಲರೂ ಒಂದೇ ಕೂಗಿನಲಿ;
ಸಮಭಾವದಿಂದ ಎಲ್ಲರ ಪೊರೆವ
ಈ ಅಂಬೆ ಕಲ್ಪವಲ್ಲಿ..
     ತಿಳಿಯಾದ ಆಗಸದಿ ಬಿಡದಲೇ ಸಾಗಲಿ,
     ಕನ್ನಡಿಗರ ಐಕ್ಯತೆಯ ಘೋಷವಿರುವ ಬಾನುಲಿ.
"ಮನುಜ ಮತ ವಿಶ್ವ ಪಥ"
ಎನ್ನುವಂಥ ನಾಣ್ಣುಡಿ;
ಜನಿಸಿದಂಥ ಭೂಮಿ ಇದು,
ಸಹಿಷ್ಣು-ಸಹಬಾಳ್ವೆಗೆ ಹಿಡಿದಂತೆ ಕನ್ನಡಿ.  
     ಭಾಷೆಯ ಮೇಲೆ ಮೋಹವಲ್ಲ,
     ಹರಿಸಿ ಎಲ್ಲರೂ ಪ್ರೀತಿಯ ಕೋಡಿ;
     ಎಲ್ಲ ನಮ್ಮವರೆನ್ನುತ ಕಲಿಸಿ,
     ಬೆಳೆಸಿ-ಉಳಿಸಿ ಅಸ್ತಿತ್ವ ಕಾಪಾಡಿ.. 

ಪ್ರೇಮ ಪೀಠಿಕೆ..!!

ನಗುವಾಗ ದಂತವದು ಬೆಳ್ಳಕ್ಕಿ ಸಾಲು,
ಬೈತಲೆಯೋ ಜಲಪಾತ ಮುಂಗುರುಳ ಕವಲು;
ನೀ ನಡೆಯೆ ನಾಚಿದೆ ನೋಡಲ್ಲಿ ನವಿಲು,
ನಿನ್ ಮೈಯ ನುಣುಪದುವೆ ಬಿಳಿ ಮೋಡದೊಡಲು...
ಉಸ್ಸಪ್ಪ ಸಾಕಾಯ್ತು ಹಾಕಿ ನಾ ಕಾಳು,
ನುಡಿಯುತಲಿ ಸುಸ್ತಾಯ್ತು ಹೊಗಳಿಕೆಯ ಸೊಲ್ಲು;
ಸಿಕ್ಕಿದ್ರೆ ನಿನಗೆ ಖುಷಿಯೆಂಬ feelಉ,
ಸಾರ್ಥಕವು ಇಷ್ಟೊತ್ತು ಬಿಟ್ಟಿದ್ಕೆ ರೈಲು,
ಎಲ್ಲಾನು ಸುಳ್ಳಲ್ಲ ಸ್ವಲ್ಪಾನೆ ಓಳು..ಸ್ವಲ್ಪಾನೆ ಓಳು.. 

ದೇಶ ನಮ್ಮದು - ಭಾರತ

ದೇಶ ನಮ್ಮದು
ದೇಶ ನಮ್ಮದು
ದೇಶ ನಮ್ಮದು ಭಾರತ,
ಎನಿದೆಂತದು, ದುಷ್ಟ ನೀತಿಯು;
ಭ್ರಷ್ಟವಾಗಿದೆ ಅವಿರತ..
     ಯುವ ಜನಾಂಗವು ತುಂಬಿ ತುಳುಕಿದೆ,
     ಏಕತೆಗೆ ಕೊರತೆಯು;
     ಬಿಸಿಯ ನೆತ್ತರು ಫಲವನೀಯದೆ,
     ಮಲಗೆ ದೇಶ ಜರ್ಜರಿತವು..
ಅವನು ಅಲ್ಲಿರೆ, ಇವನು ಇಲ್ಲಿರೆ
ಅವರು ಎಲ್ಲೋ ಇರುತಿರೆ;
ದೇಶ ಉನ್ನತಿ ಮಾರ್ಗ-
ಕಾಣುವುದೆಲ್ಲಿ ಸಾಧ್ಯ ಗೆಳೆಯರೇ!?
     ಜಡತೆ ಬಿಡುತಲಿ ಧ್ಯೇಯ ನೆಡುತಲಿ,
     ಒಟ್ಟಿಗೇಳುವ ಎಲ್ಲರೂ;
     ಭ್ರಷ್ಟ ಮುಕ್ತದ ದೇಶ ನೋಡಲು
     ಸಮರ ಸಾರುವ ಯೋಧರು,
     ನಾವ್ ಯುವ ಜನಾಂಗದ ಯೋಧರು,
     ಭಾವಿತ ಬರೆಯೆ ಸನ್ನದ್ಧರು.. ಜೈ ಹಿಂದ್

ನಾಡ ಋಣ...!!

ಹಸಿರದೇ ಮಡಿಲಲಿ ನಮ್ಮಯ ಜನ್ಮವು,
ಗುಡಿ ಗೋಪುರಗಳೇ ಕಾವಲಿದೆ;
ಜನತೆಯ ಸಾಗರ, ಮಮತೆಯ ಆಗರ,
ಕರುಣೆ-ಪ್ರೀತಿ ಜಲ ಬತ್ತದಿದೆ..
     ಗಾಳಿ ಸುಗಂಧ, ಮಾನವ ಬಂಧ,
     ಸಡಿಲಿಸದಂತೆ ಕಠಿಣವಿದೆ;
     ಪ್ರೀತಿಯ ಬಟ್ಟಲು, ಅಕ್ಕರೆ ತೊಟ್ಟಿಲು,
     ಇಲ್ಲಿ ಬರುವರಿಗೂ ಮೀಸಲಿದೆ.
ಸಮತೆಯ ಮಾದರಿ, ಆಗುತ ಸದರಿ,
ನಮ್ಮ ರಾಜ್ಯವೇ ಬೆಳಗುತಿದೆ;
ಕರ್ನಾಟಕವದೆ  ಏಕತೆ ತಾಣವು
ಎನ್ನುವ ವಾಣಿ ಮೊಳಗುತಿದೆ..
     ಅನ್ಯರು ಎನ್ನದೆ ಎಲ್ಲರೂ ಒಂದೆ,
     ಎನ್ನುತ ತೋಳಲಿ ಬಂಧಿಸಿದೆ;
     ಕನ್ನಡಾಂಬೆಯ ಋಣ ತೀರಿಸಲು,
     ಭಾಷೆಯ ಬೆಳಕನು ಹರಡಿಸಿರಿ,
     ನೀವ್, ಸಂಸ್ಕೃತಿ ಮರೆಯದೆ ಜೀವಿಸಿರಿ...
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ.. 

ನನ್ನ ಶಾಲೆ..

ವಿದ್ಯೆ-ಶಿಸ್ತಿನ ಆಗರ, ವ್ಯಕ್ತಿ ವಿಕಸನದ ಆಧಾರ,
ನನ್ನ ರೂಪಿಸಿದ ಗುರುಕುಲಕ್ಕೆ ನನ್ನದಿದೋ ವಂದನೆ.

ಅಕ್ಷರ ಜ್ಞಾನವನ್ನಷ್ಟೇ ಅಲ್ಲದೆ;
ಜೀವನ ಮೌಲ್ಯಗಳ ಅರಿವಿನ ಮೇವು,
"ನಾನು" ಅಲ್ಲವದು ಎಂದಿಗೂ "ನಾವು",
ಸ್ನೇಹ-ಪ್ರೀತಿಗಳೇ ಬಾಳ್ವೆಯ ಬುನಾದಿ ಎಂದು,
ನನ್ನ ರೂಪಿಸಿದ ಗುರುಕುಲಕ್ಕೆ ನನ್ನದಿದೋ ವಂದನೆ.

ಅಕ್ಷರ ಜ್ಞಾನವನ್ನಷ್ಟೇ ಅಲ್ಲದೆ;
ಸಹಬಾಳ್ವೆ, ಸಹಾಯಗಳ ಕುರಿತು,
ಕೋಪ, ದ್ವೇಷ, ವಿಕೃತಿಗಳ ಮರೆತು-
ಬಾಳುವ ಭಾವನೆಗೆ ಅಡಿಪಾಯ ಹಾಕಿ,
ನನ್ನ ರೂಪಿಸಿದ ಗುರುಕುಲಕ್ಕೆ ನನ್ನದಿದೋ ವಂದನೆ.

ಅಕ್ಷರ ಜ್ಞಾನವನ್ನಷ್ಟೇ ಅಲ್ಲದೆ;
ಸ್ಥಿತ ಪ್ರಜ್ಞೆ, ಸಮಂಜಸ ಚಿಂತನೆ,
ಸೂಕ್ಷ್ಮದ ಅರಿವು ಇರುವ ಮನರಂಜನೆ,
ಉಲ್ಲಾಸಭರಿತ ಜೀವನೋತ್ಸಾಹದ ಬಾಳ್ವೆ ನಡೆಸಲು,
ನನ್ನ ರೂಪಿಸಿದ ಗುರುಕುಲಕ್ಕೆ ನನ್ನದಿದೋ ವಂದನೆ. 

ದೇವರ ಉತ್ತರ

ಎಂದೂ ಬೇಸರವು ಕಾಡದಿರುವಂಥ,
ಮನದಿ ಗೊಂದಲದ ಗುರುತು ಇರದಂಥ,
ಚಂದ ಸಂತಸದ ಸ್ಫೂರ್ತಿ ತೋರೆನ್ನಲು;
ದೈವ ತೋರಿದ ಆ ನಿನ್ನ ನಗುವ...

ಆಯಸ್ಕಾಂತ

ಆಯಸ್ಕಾಂತೀಯ ಮಂದಸ್ಮಿತೆ ನೀನು,
ಮೋಹಗೊಂಡ ಮೂಕವಿಸ್ಮಿತ ನಾನು..

ಸಕಲವೂ ನೀನೆ..!!

ಗಾಳಿಯಲ್ಲಿ ನಿನ್ನಾಕಾರ ಬಿಡಿಸಿ
ನಿನ್ನ ಸ್ಪರ್ಶಿಸಿದ ಅನುಭೂತಿ ಪಡೆವಂತೆ,
ಹಾರೋ ಹಕ್ಕಿಗಳ ಕುಶಲ ಕೇಳಿ
ನಿನ್ನ ಬಗೆಗಿನ ವರದಿ ತಿಳಿವಂತೆ,
ಮಿನುಗೋ ತಾರೆಗಳ ಹೊಳಪ ನೋಡಿ
ನಿನ್ನ ಕಂಗಳದೇ ಪ್ರತಿಯ ಪಡೆದಂತೆ,
ನಲ್ಮೆ-ಅನುರಾಗ, ಜೀವನದ ಸುಯೋಗ
ಎಲ್ಲ ನಿನ್ನಲ್ಲೇ ವಿಲೀನಗೊಂಡಂತೆ,
ಭಾವ ಮೂಡಿಸೋ ತೆರದಿ ನೀನಿರಲು;
ನನ್ನ ಊಹೆಗಳಿಗೆಲ್ಲಿ ಕಡಿವಾಣ?
ಸಕಲವೂ ನನಗೆ ನಿನ್ನದೆ ಪ್ರತಿಬಿಂಬ.