ಯೋಗಸಾಹಿತ್ಯ

ಯೋಗಸಾಹಿತ್ಯ
ಭಾವನೆಗಳ ಅಂಗಳದಲಿ ಪದಗಳ ಓಡಾಟ...!!

Friday, March 4, 2016

ಕ್ಷಮಾಭಾವ...

ಪ್ರಪಂಚದಲ್ಲಿ ಅತ್ಯುನ್ನತ, ಎಲ್ಲರೂ ಆರಾಧಿಸುವಂಥ ಸ್ಥಾನದಲ್ಲಿ ಇರುವುದು - ದೇವರು, ಅಮ್ಮ, ಗುರು. ಈ ಮೂವರಲ್ಲಿ ಸಾಮಾನ್ಯ ಅನಿಸುವಂಥ ಗುಣವಿದ್ದರೆ ಅದು ಕೊಂಚ ತಾಳ್ಮೆ, ಹಾಗೂ ಅಗಾಧವಾದ ಕ್ಷಮಾಗುಣ.
ಜನರು ಕೆಡುಕು ಮಾಡಿದ್ದರೂ, ತಪ್ಪನ್ನು ತಿದ್ದಿಕೊಂಡು ದೀನನಾದರೆ ಸಾಕು, ದೇವರು ಕ್ಷಮಿಸಿ ತನ್ನ ಕೃಪೆಯನ್ನು ಕರುಣಿಸದೆ ಇರಲಾರ..

ಮಕ್ಕಳು ತರಲೆ ಮಾಡಲಿ, ತೊಂದರೆ ಕೊಡಲಿ, ಕಾಡಿಸಿ-ಪೀಡಿಸಿ-ಬೇಸರ ಪಡಿಸಲಿ, ಬೇರೊಂದು ಕ್ಷಣಿಕದ ಹಿಂದೆ ದೂರ ಹೋಗಲಿ; ಎಲ್ಲೇ ಹೋದರೂ ಧ್ರುತಿಗೆಟ್ಟಾಗ ಅಮ್ಮನ ಮಡಿಲೊಂದೇ ದಿಕ್ಕೆಂದು ಬಳಿಗೆ ಹೋದರೆ, ಅಷ್ಟೂ ದಿನ ಕೊಂಚ ತಾಳ್ಮೆ ಇಂದ ಸಹಿಸಿಕೊಂಡು ಇದ್ದವಳು ಎಲ್ಲ ಮರೆತು ಕ್ಷಮಿಸಿ "ಏನೇನೂ ಆಗಿಲ್ಲ, ಇದೆಲ್ಲ ಚಿಕ್ಕ ವಿಷ್ಯ. ಇಷ್ಟುಕ್ಕೆ ಮನಸು ಕೆಡಿಸಿಕೊಂಡ್ರೆ ಹೆಂಗೆ!" ಅಂತ ಒಮ್ಮೆ ತಲೆ ನೇವರಿಸಿ ಕೊಡುವ ಧೈರ್ಯ ಆಕೆಯ ಅಖಂಡ-ಉತ್ಕೃಷ್ಟ ಕ್ಷಮಾಭಾವದ ದರ್ಶನ ಕೊಡುತ್ತೆ.

ಇನ್ನು ಗುರುಗಳಾದವರು, ತಪ್ಪು ಮಾಡಿದಾಗ ದಂಡಿಸೋದಲ್ಲದೆ, ತಪ್ಪಿನ ಅರಿವು ಮೂಡಿಸಿ ಕೊನೆಯಲ್ಲಿ ಕ್ಷಮಿಸಿ ಉತ್ತಮ ಬಾಳಿನ ದಾರಿ ರೂಪಿಸಿಕೊಳ್ಳೋದ್ರಲ್ಲಿ ಬಹುದೊಡ್ಡ ಪಾತ್ರ ವಹಿಸ್ತಾರೆ.

ನಮ್ಮಂಥ ಸಾಮಾನ್ಯರ ಮುಂದೆ ಇರುವ ಬೃಹತ್ ಗುಣಕೋಶ ಅಂದ್ರೆ ಇವರುಗಳೇ. ಕೊಂಚ ಮಟ್ಟಿಗಾದರೂ ಇವರಿಂದ "ಕ್ಷಮೆ"ಎಂಬುದನ್ನು ಎರವಲು ಪಡೆದರೆ, ಎಷ್ಟೋ ಜಗಳಗಳು ಅಂತ್ಯಗೊಂಡು ಸಹಬಾಳ್ವೆ ಮೆರೆಯುತ್ತದೆ. "ನಾನು-ನಂದು-ನಂಗೆ ಮಾತ್ರ" ಅನ್ನೋ 'ಅಹಂ'ಭಾವ ಕೊನೆಯಾಗಿ ಎಲ್ಲರೂ ನಮ್ಮವರೇ ಅನ್ನುವ ಭಾವ ಮೂಡುತ್ತದೆ.
ಎಷ್ಟೋ ಕವಿವರ್ಯರು ಹೇಳಿದ್ದು ಅದೇ ಅಲ್ವ?
ಡಿ.ವಿ. ಗುಂಡಪ್ಪನವರು ಹೇಳಿದ "ಎಲ್ಲರೊಳಗೊಂದಾಗು ಮಂಕುತಿಮ್ಮ", ವೇದ-ಉಪನಿಷದ್ದಿನಲ್ಲಿ ಉಲ್ಲೇಖಿಸಿದ "ಸರ್ವೇಜನ ಸುಖಿನೋಭವಂತು", ಕುವೆಂಪು ಅವರು ನೀಡಿದ "ವಿಶ್ವಮಾನವ" ಸಂದೇಶ, ಎಲ್ಲವೂ ಇದುನ್ನೇ ಸಾರುತ್ತೆ ಅಲ್ವ?
ಎಲ್ಲರೂ ಮನುಷ್ಯರೇ, ಯಾರು ತಾನೇ ತಪ್ಪು ಮಾಡೋದಿಲ್ಲ ಹೇಳಿ. ಅರ್ಥ ಮಾಡಿಕೊಳ್ಳೋಕೆ ಸ್ವಲ್ಪ ಸಹನೆ ಮತ್ತು ಕ್ಷಮಾಭಾವ ರೂಢಿಸಿಕೊಂಡರೆ ನೆಮ್ಮದಿಯ ಜೀವನ ಪ್ರಾಪ್ತವಾಗೋದ್ರಲ್ಲಿ ಸಂದೇಹಾನೆ ಇಲ್ಲ.
ಏನಂತೀರ?

3 comments: