ಯೋಗಸಾಹಿತ್ಯ

ಯೋಗಸಾಹಿತ್ಯ
ಭಾವನೆಗಳ ಅಂಗಳದಲಿ ಪದಗಳ ಓಡಾಟ...!!

Monday, April 7, 2025

ಮನಸಿಲ್ಲವೇ ನಿಂಗೆ !!!?

ಮುಂಗುರುಳ ಉಯ್ಯಾಲೆ ಜೀಕುವಾ ಸಲಿಗೆ,

ಕಣ್ಣುಬ್ಬಿನ ಬಾಗಲಿ ಜಾರುವಾ ಸಲಿಗೆ,

ತುಟಿಯಂಚಲಿ ಗುಳಿಕೆನ್ನೆ ತಾಗುವಾ ಸಲಿಗೆ,

ಕರುಣಿಸೋ ಮನಸಿಲ್ಲವೇ ನಿಂಗೆ !?

          ಒಲವಿನಾ ಸಂತೇಲಿ ಕಳುವಾಗೋ ಘಳಿಗೆ,

          ಕಣ್ಮುಚ್ಚಿ ಕಣ್ತೆರೆಯೇ ನೀ ಕಂಡ ಘಳಿಗೆ,

          ನವಿರಾದ ನೆನಪನ್ನು ಮಾರುವಾ ಘಳಿಗೆ,

          ಎಷ್ಟೆಂದು ವ್ಯವಹರಿಸೋ ಮನಸಿಲ್ಲವೇ ನಿಂಗೆ !?

ಮನಸೊಂದು ಮಾರ್ದನಿಯ ಮಾಯಾವೀ ಮಳಿಗೆ,

ಕನಸನ್ನು ಕೊಳ್ಳುದಕೆ ಕಟ್ಟಿರುವ ಮಳಿಗೆ,

ಒಳಗೊಂದು ಓರೆಯಲಿ ಓಲೈಕೆ ಮಳಿಗೆ,

ತುಸು ಬಂದು ಓಡಾಡೋ ಮನಸಿಲ್ಲವೇ ನಿಂಗೆ !?

         ಕಣ್ ಕೋವಿ ಗುರಿಯಲ್ಲಿ ಸಿಕ್ಕಿರುವ ಸುಳಿಗೆ,

         ಏಕಮುಖ ಸಂಚಾರ ತಿರುವಿರದಾ ಸುಳಿಗೆ,

         ಉನ್ಮತ್ತ ನಿನ್ನತ್ತ ನಾ ಸುತ್ತೋ ಸುಳಿಗೆ,

         ದೂಡುತಲಿ ಕೈಚಾಚೊ ಮನಸಿಲ್ಲವೇ ನಿಂಗೆ !?

         ಕಾಡುತಲಿ ಬಿಗಿದಪ್ಪೊ ಮನಸಿಲ್ಲವೇ ನಿಂಗೆ !?

No comments:

Post a Comment