ಮನದ ಮದನಿಕೆಯು ಬೇಸರಗೊಂಡು,
ಲೌಕಿಕ ಭಾವ ಸಾಕನ್ಕೊಂಡು,
ಬೆಳ್ಳಂಬೆಳಿಗ್ಗೆ ಮನೆಯನು ಬಿಟ್ಟು
ಕೆರೆಯ ತಲುಪಿದನು ಮಾದಪ್ಪ.
ಏನೋ ಸಂಕ್ಟ, ಏನೋ ಗಲಿಬಿಲಿ,
ಕೆಚ್ಚೆದೆಯೊಳಗೂ ಕಾಣದ ಸರಪಳಿ,
ತನ್ನಂತಾನೆ ಪ್ರಶ್ನಿಸಿಕೊಳ್ಳುತಾ
ಕೆರೆಯ ನೀರಲಿ ಇಣುಕಿದನು.
ತನ್ನದೇ ಬಿಂಬ ಮೂದಲಿಸಿರಲು,
ವಿರಕ್ತಿ ಭಾವ ಮೈದುಂಬಿರಲು,
ಅಂಚಲ್ಲಿದ್ದ ಬಂಡೆಯ ಮೇಲೆ
ಜಪವ ಮಾಡಲು ಅಣಿಯಾದ.
ಏನೋ ವಟ ವಟ ಗೊಣಗಾಡ್ಕೊಂಡು,
ಅನಿಸಿದ್ದೆಲ್ಲ ಮಾತಾಡ್ಕೊಂಡು,
ನಿರಾಳವೆನಿಸಲು ಕಣ್ ಬಿಟ್ ನೋಡೆ
ಸುತ್ತಲೂ ಕೋಣದ ದಂಡಿತ್ತು..
ತಮ್ಮ ನಿತ್ಯದ ಸ್ನಾನದ ಹೊಂಡದಿ
ಯಾವನೋ ಬಂದು ಕೂತ್ಕೊಂಡವ್ನೆ!
ಎನ್ನುತ ಅವುಗಳು ಸುತ್ತುವರಿಯಲು-
ಕೋಣದ ಕಿಂದರಿ ಇವನಾದ;
"ಕೋಣದ ಮುಂದೆ ಕಿಂದರಿ ಬಾರಿಸು"
ಅನ್ನೋ ಮಾತಿಗೆ ಮೊದಲಾದ..

No comments:
Post a Comment