ಯೋಗಸಾಹಿತ್ಯ

ಯೋಗಸಾಹಿತ್ಯ
ಭಾವನೆಗಳ ಅಂಗಳದಲಿ ಪದಗಳ ಓಡಾಟ...!!

Friday, September 18, 2015

ಋತುಗಾಲದೊಡತಿ..!!!

ಎಷ್ಟು ಋತುಗಳ ದರ್ಶನವೋ
ನಿನ್ನ ಮುಖಭಾವದಲ್ಲಿ..!?

ಕೋಪ ಬಂದಾಗ ಬೇಸಿಗೆಯು,
ಉರಿವ ಕಣ್ಣು ಸಿಡಿಮದ್ದು;
ತಲ್ಲಣಿಸೋ  ನಿನ್ನ ಯುದ್ಧ ಭೂಮಿಕೆಯು
ನೋಡಲೇಕೋ ಭಲೆ ಮುದ್ದು..

ದುಃಖತಪ್ತಳು ನೀನಾದರೆ ಅದೇ
ಜಡಿಯ ಮಳೆಗಾಲವಂತೆ;
ಮಗುವಿನಾ ತೆರದಿ ಮುಗ್ಧತೆ ಮೂಡಿ
ಚೆಂದ ಗೊಂಬೆಯಾದಂತೆ..

ನಗುವಿನಾ ಸಣ್ಣ ಸಿಂಚನವು ಸಾಕು
ನಲ್ಮೆಯ ವಸಂತದಂತೆ;
ಹೊಸ ಕಳೆ ಹೊಸತು ಭಾವ ಭಂಡಾರ
ಜೀವ ತಳೆದು ನಿಂತಂತೆ..

ಏನೂ ನುಡಿಯದ ಮುನಿಸು ರೂಪವದು
ಕೊರೆವ ಚಳಿಗಾಲದಂತೆ;
ಮಾತನಾಡದೆ ಕಾಡೊ ಘಳಿಗೆಯದು
ರಮಣೀಯ ತಪನೆಯಂತೆ..

ಎಷ್ಟು ಋತುಗಳ ದರ್ಶನವೋ
ನಿನ್ನ ಮುಖಭಾವದಲ್ಲಿ..!?
ಸಂಘಟಿತ ಋತು ಪರ್ವವಿಹುದು
ನಿನ್ನ ಸಾಂಗತ್ಯದಲ್ಲಿ..ನಿನ್ನ ಸಾಂಗತ್ಯದಲ್ಲಿ..

No comments:

Post a Comment