ಬದುಕು ಹೊಲಿಗೆ ಕಳಚಿದ ತುಂಡು ಬಟ್ಟೆ -
ತೇಪೆ ಕಾರ್ಯವೇ ನಿರಂತರ ಕಸುಬು;
‘ಈಗ ಸರಿ’ ಎಂದರದೇ -
ಮುಂದಿನ ರಂಧ್ರದ ಬುನಾದಿ!
ಬಾಳೊಂದು ಏಕತಾನತೆಯ ಅರಿವೆ
ಅಂದುಕೊಂಡದ್ದೆ ಸುಳ್ಳಾಯ್ತೆ.!?
ಸಾವಿರ-ಸಾವಿರ ಬಣ್ಣ-ಬಣ್ಣದ
ಓರೆಕೋರೆಗಳ ದಂಡಂಥ ಕೌದಿಯದು..!
‘ಚಿತ್ತಾರ ಬಣ್ಣಗಳ ಚೆಂದವದು ಆಹಾ’ -
ಎಂದು ಖುಷಿಯಲ್ಲಿ ಬೀಗುವುದೋ?
ಇಲ್ಲ, ಹುಳುಕಿನ ರಂಧ್ರಗಳ ಮುಚ್ಚಿರುವ
ನೊಂದ ಹಲವು ಭಾವಗಳ ಗೋರಿಗಳೋ !?
ತೇಪೆ ಸಹಿತ ಬಾಳ್ವೆಯಲ್ಲಿ ಬಿರುಕು ರಹಿತ ಬಾಳಲು,
ನೆಮ್ಮದಿಯೇ ನೂಲು ಸಾಂತ್ವನವೇ ಸೂಜಿ..
No comments:
Post a Comment