ಯೋಗಸಾಹಿತ್ಯ

ಯೋಗಸಾಹಿತ್ಯ
ಭಾವನೆಗಳ ಅಂಗಳದಲಿ ಪದಗಳ ಓಡಾಟ...!!

Sunday, October 9, 2016

ಅಮೂರ್ತ ಪ್ರೇಮ

ವೈಭವ ಇತಿಹಾಸದ ಅವಶೇಷಗಳ ನಡುವೆ ಚಿಗುರಿದ ಪ್ರೇಮ ಕಥೆ.

ಹಂಪಿ.. ವ್ಹಾ!! ಒಂದು ಕಾಲಕ್ಕೆ ವೈಭವಕ್ಕೆ ತದ್ರೂಪಿನಂತೆ ಹಿರಿಮೆಯ ಪತಾಕೆ ಹಾರಿಸಿದ ನಾಡು. ಈಗಿನ ಪರಿಸ್ಥಿತಿ ಆಗಿನ ಯಾರೂ ಊಹಿಸಲು ಅಸಾಧ್ಯ ಎಂಬಂತೆ ಆಗಿರುವುದು ವಿಪರ್ಯಾಸವೇ ಸರಿ.
ಹಾಗಿದ್ದರೂ, ಪಳೆಯುಳಿಕೆಗಳ ನಡುವೆಯೇ ನಮ್ಮ ಸಂಸ್ಕೃತಿ ವೈಶಿಷ್ಟ್ಯದ ಹಿರಿಮೆಯನ್ನು ಸಾರುತ್ತಿರುವುದಂತು ಅಷ್ಟೇ ಸತ್ಯ.

ಜಗತ್ತಿನ ಮೂಲೆ ಮೂಲೆಗಳಿಂದ ಹಂಪಿಯ ವೈಭವದ ನೆನಪುಗಳನ್ನು ಮೆಲುಕು ಹಾಕಲು ಎಷ್ಟೋ ಲಕ್ಷ ಮಂದಿ ಭೇಟಿ ಕೊಟ್ಟು, ಸುತ್ತಲೂ ಜನ-ನಿಬಿಡ ಪ್ರದೇಶವಾಗಿದ್ದರೂ, ಬೆಸೆದಿಹ ಬಾಂಧವ್ಯದ ಮೇಲಲ್ಲದೆ ಹುಟ್ಟಿನ ಮೂಲವನ್ನಷ್ಟೇ ಆಧರಿಸಿ ಅನಾಥರೆನಿಸಿಕೊಂಡಿದ್ದರೂ, ಜೀವಕ್ಕೆ ಜೀವ ಬೆಸೆದು, ಒಬ್ಬರ ಪ್ರಾಣಕ್ಕೆ ಒಬ್ಬರು ವಾಯುವಿನಂತೆ ಪ್ರೀತಿಸಿ ಜೀವಿಸುತ್ತಿರುವ ಪ್ರೇಮಿಗಳ ಕಥೆಯೇ ಇಲ್ಲಿ ಪ್ರಸ್ತುತ.

ಹಂಪಿಯ ಪ್ರತಿ ಮೂಲೆಯ ಪರಿಚಯ ಹೊಂದಿರುವ, ಜಾಗದ ಇತಿಹಾಸ ವೈಶಿಷ್ಟ್ಯತೆ ಎಲ್ಲವನ್ನೂ ಅರಿದು ಕುಡಿದ ಯುವಕ ಜಾನಿ. ಅಲ್ಲಿಗೆ ತಾನು ಹೇಗೆ ಬಂದು ಸೇರಿದ ಅಂತ ಯಾರಿಗೂ ಗೊತ್ತಿಲ್ಲ. ಅವನಿಗೂ ಕೂಡ. ಸುಮಾರು ಮೂರು ವರ್ಷದ ಸ್ಫುರದ್ರೂಪಿ ಬಾಲಕ ಹಸಿವಿನಿಂದ ಹಂಪಿಯ ಬೀದಿ ಬೀದಿಗಳಲ್ಲಿ ಅಲೆದು ಸಂತೆ ಬೀದಿ ತಲುಪಿದ. ಅಷ್ಟು ಜನಸಂದಣಿ ಇದ್ದರೂ, ಆ ಪುಟ್ಟ ಬಾಲಕನ ಕಂಡು ಮರುಗುವ ಜೀವತಂತು ಯಾರಲ್ಲೂ ಇರಲಿಲ್ಲ. ಒಬ್ಬ ಮಾಚಯ್ಯನನ್ನು ಬಿಟ್ಟು. ಮಾಚಯ್ಯ ಅಲ್ಲೇ ಸಂತೆ ಬೀದಿಯಲ್ಲಿದ್ದ ಅಕ್ಕಿ ಮಂಡಿಯಲ್ಲಿ ಕೂಲಿ ಮಾಡುತ್ತಿದ್ದ. ಅವನಿಗೂ ಜೊತೆಗಂತ ಯಾರೂ ಇರಲಿಲ್ಲ. ಆ ಪುಟ್ಟ ಬಾಲಕನ ರೋದನೆ ನೋಡಿ ತಾಳಲಾಗದೆ ಹೊತ್ತೊಯ್ದು ಅಲ್ಲೇ ಇದ್ದ ರಂಗಮ್ಮನ ಟಿಫಿನ್ ರೂಮಲ್ಲಿ ತಿಂಡಿ ಕೊಡಿಸಿ, ಯಾರೂ ದಿಕ್ಕು ಇಲ್ಲದ್ದನ್ನು ಗಮನಿಸಿದ ಮಾಚಯ್ಯ ಬಾಲಕನನ್ನು ತನ್ನಲ್ಲಿಯೇ ಇಟ್ಟುಕೊಳ್ಳಲು ನಿರ್ಧರಿಸಿದ. ಅದೇನು ತೋಚಿತೋ ಏನೋ, ಜನಾರ್ಧನ ಅಂತ ಹೆಸರಿಟ್ಟು ಸಲಹತೊಡಗಿದ. ರಂಗಮ್ಮನಿಗೂ ಜನಾರ್ಧನ ಎಂದರೆ ಭಲೇ ಪ್ರೀತಿ, ಅಕ್ಕರೆ.

ಭಾರಿ ಚುರುಕು ಹುಡುಗನಾಗಿದ್ದವ ಮುಂದೆ ಬೆಳೆದು, ಚಿಕ್ಕ ವಯಸ್ಸಿನಿಂದ ಆಟಾಡಿ, ಸುತ್ತಾಡಿ ಮೈಗೂಡಿಸಿಕೊಂಡಿದ್ದ ಹಂಪಿಯ ವಾತಾವರಣ ಅವನನ್ನು ಪ್ರವಾಸಿ ಮಾರ್ಗದರ್ಶಿಯನ್ನಾಗಿ ಮಾಡಿತು. ಅಲ್ಲಿಗೆ ಭೇಟಿ ಕೊಡುತ್ತಿದ್ದ ವಿದೇಶಿ ಪ್ರವಾಸಿಗರು ಅವನನ್ನು "ಜಾನಿ" ಅಂತಲೇ ಕರೆಯುತ್ತಿದ್ದರು. ಕಿಂಚಿತ್ತೂ ಮೋಸ-ವಂಚನೆ ಇಲ್ಲದೆ, ಪಡೆಯುತ್ತಿದ್ದ ಪಗಾರಕ್ಕೆ ಸರಿಯಾಗಿ ಕೆಲಸ ಮಾಡಿ ಹಂಪಿಯಲ್ಲಿ ತುಂಬಾ ಬೇಡಿಕೆಯ ಮಾರ್ಗದರ್ಶಿಯಾಗಿ ಬೆಳೆದು ನಿಂತ.

ಹಂಪಿಯ ಮುಖ್ಯ ಪ್ರೇಕ್ಷಣೀಯ ಸ್ಥಳ, ಅಂದಿನ ವೈಭವೋಪೇತ ವಿಜಯನಗರ ಸಾಮ್ರಾಜ್ಯದ ಆರಾಧ್ಯ ದೈವ ವಿರೂಪಾಕ್ಷ ದೇವಾಲಯ. ಅಲ್ಲೇ ದೇವಸ್ಥಾನದ ಹೊರಗೆ ಪೂಜೆಗೆಂದು ಹಣ್ಣು-ಕಾಯಿ ವ್ಯಾಪಾರ ಮಾಡುತ್ತ ಸಾಧಾರಣ ಜೀವನ ನಡೆಸುತ್ತಿದ್ದ ಶಾಂಭವಿ ಎಂದರೆ ಜಾನಿಗೆ ಪ್ರಾಣ. ಶಾಂಭವಿ ಕೂಡ ಜಾನಿಯನ್ನು ಮನಸಾರೆ ಪ್ರೀತಿಸುತ್ತಿದ್ದಳು. ಬಳ್ಳಾರಿಯಲ್ಲಿ ಯಾವುದೋ ಅನಾಥಾಶ್ರಮದಲ್ಲಿ ಬೆಳೆದು, ಬಾಲ್ಯಾವಸ್ಥೆಗೆ ಬಂದ ನಂತರ ಜೀವನೋಪಾಯವನ್ನು ಅರಸುತ್ತ ಹಂಪಿಗೆ ಬಂದು ಸೇರುತ್ತಾಳೆ. ಅಲ್ಲಿ ನೆರವಾಗೋದು ನಮ್ಮ ಜಾನಿಯ ಅನ್ನಪೂರ್ಣೇಶ್ವರಿ ರಂಗಮ್ಮ. ದುಡಿದು ಜೀವನ ಸಾಗಿಸಿ ಬಾಳ್ವೆ ಕಟ್ಟಿಕೊಳ್ಳುವ ಕನಸು ಹೊತ್ತು ಬಂದಿದ್ದ ಶಾಂಭವಿಗೆ ದೇವಸ್ಥಾನದ ಮುಂದೆ ಅಂಗಡಿ ಹಾಕಿಕೊಳ್ಳಲು ಅನುವು ಮಾಡಿಕೊಟ್ಟಳು. ಕಷ್ಟ, ನೋವು, ಬಾಂಧವ್ಯಹೀನ ಜೀವನವನ್ನೇ ನೋಡಿದ್ದ ಶಾಂಭವಿಗೆ ಆಸರೆ ಸಿಕ್ಕಿದ್ದು ದೈವ ನಿಶ್ಚಯವೇ ಸರಿ ಎಂದೆನಿಸಿತ್ತು.

ಹಾಗೆ ಮೊದಲಾದ ಪರಿಚಯವು, ಅವರದ್ದೇ ಚಿಕ್ಕ ಪ್ರಪಂಚದಲ್ಲಿ ಬದುಕಿನ ಬಗೆಗಿನ ಕಾಳಜಿ, ಜಾಗ್ರತೆ ಹಾಗೂ ಸಂಬಂಧಗಳ ವ್ಯಾಖ್ಯಾನವನ್ನು ಅರಿಯುತ್ತಾ, ಒಬ್ಬರ ಮೇಲೆ ಒಬ್ಬರು ಭಾವುಕ ಸಂಬಂಧವನ್ನು ಬೆಳೆಸಿಕೊಂಡು ಪರಿಣಯದ ಹಾದಿ ಹಿಡಿಯಿತು. ಶ್ರೀಮಂತಿಕೆ ಅಲ್ಲದ, ಸಮಾಧಾನದ, ನೆಮ್ಮದಿಯ ಜೀವನ-ಪ್ರೇರಣೆ ಹೊತ್ತು ಸಾಧಾರಣ ಜೀವನ ನಡೆಸುತ್ತಿದ್ದರು.

ಹಂಪಿಯಲ್ಲಿರುವ ಮಾತಾಂಗ ಬೆಟ್ಟದ ವಿಶೇಷತೆ ಏನು ಅಂದರೆ, ಮೇಲಿನಿಂದ ನೋಡಿದರೆ ಪೂರಾ ಹಂಪಿ ನಗರ ಕಾಣಿಸುತ್ತದೆ. ಅದರಲ್ಲೂ, ರಾತ್ರಿ ಹೊತ್ತು ನೋಡಿದರಂತೂ ಆ ದೃಶ್ಯಾವಳಿಯನ್ನ ಬಣ್ಣಿಸೋದೇ ಅಸಾಧ್ಯ. ವಿಜೃಂಭಿಸುವ ವಿಹಂಗಮ ನೋಟ. ಹಂಪಿಯನ್ನು ಇನ್ನಷ್ಟು ಅಲಂಕರಿಸಲೆಂದೇ ನಿರ್ಧರಿಸಿ ಬಂದಂತೆ ದಿನಕ್ಕೊಂದು ಅಲಂಕಾರಿಕ ರೂಪುರೇಷೆ ತಾಳಿ ಆಗಸದಲ್ಲಿ ಹಾಜರಾಗುವ ನಕ್ಷತ್ರಗಳ ದಂಡು. ಆ ಚಂದನೆಯ ನೋಟವನ್ನು ಸವಿಯೋದಂದ್ರೆ ಶಾಂಭವಿಗೆ ಬಲು ಇಷ್ಟ. ಅದೇ ಕಾರಣಕ್ಕಾಗಿ ಜಾನಿ ಆಕೆಯನ್ನು ಆಗಾಗ ಕರೆತಂದು ಪ್ರೇಮ ನಿವೇದಿಸಿ, ಅಕ್ಕರೆಯ ಮಾತುಗಳಿಂದ ಆಕೆಯ ಪ್ರೇಮವನ್ನು ದುಪ್ಪಟ್ಟು ಮಾಡಿಕೊಳ್ಳುತ್ತಿದ್ದ. ಶಾಂಭವಿಗೋ, ಜಾನಿಯ ಹೆಗಲನ್ನು ಆನಿಸಿ, ತೋಳನ್ನು ಬಳಸಿ ಕೂತು ಹಂಪಿಯ ಸಡಗರವನ್ನು ನೋಡುತ್ತಿದ್ದರೆ ಜೀವನದ ಸಾರ್ಥಕತೆ ಪಡೆದಷ್ಟೇ ಆನಂದ. "ಎಲ್ಲಿದ್ದೆ ನಾನು, ಇಲ್ಲಿಗ್ಯಾಕೆ ಬಂದೆ? ಜಾನಿಯ ಪರಿಚಯ ಹೇಗೆ, ಯಾಕೆ ಆಯ್ತೋ? ನನ್ನ ಜನ್ಮ ಸಾರ್ಥಕ್ಯವು ಜಾನಿಯ ಮಡಿಲಲ್ಲೇ ಇದ್ದದ್ದೇನೋ?"  ಅಂತೆಲ್ಲ ಯೋಚಿಸುತ್ತ ಒಮ್ಮೆ ತಿರುಗಿ ಜಾನಿಯನ್ನೇ ದಿಟ್ಟಿಸಿ ನೋಡುತ್ತಿದ್ದರೆ, ಅವನಿಗೆ ಅವಳ ಭಾವನೆಯೆಲ್ಲ ಅರ್ಥ ಆದವನಂತೆ ಸಮ್ಮತಿಯ ನೋಟದಲ್ಲಿ ಆಕೆಯ ಹಣೆಗೊಂದು ಆಪ್ಯಾಯಮಾನದ ಮುತ್ತನ್ನಿಟ್ಟು ತಲೆ ನೇವರಿಸಿ ಮತ್ತೆ ಹೆಗಲಿಗೆ ಆನಿಸಿಕೊಳ್ಳುತ್ತ ಮೇಲಕ್ಕೊಮ್ಮೆ ನೋಡಿ, ಆ ಅದೃಶ್ಯ ಶಕ್ತಿಗೊಂದು ಧನ್ಯವಾದ ಹೇಳಿ ಮತ್ತೆ ಹಂಪಿಯನ್ನೇ ದಿಟ್ಟಿಸಿ ನೋಡುವತ್ತ ಮರಳುತ್ತಿದ್ದ.

ಜಾನಿ, ದೈನಂದಿನ ಪ್ರಕ್ರಿಯೆಯಂತೆ ಅದೇ ಹುರುಪು-ಚೈತನ್ಯದಲ್ಲಿ ಮನೆಯಿಂದ ಹೊರಟು ಸಿಗುವ ಪ್ರವಾಸಿಗರಿಗೆ ಹಂಪಿಯನ್ನೆಲ್ಲ ಪರಿಚಯ ಮಾಡಿಸುತ್ತಿದ್ದರೆ, ಎಲ್ಲರೂ ಹುಬ್ಬೇರಿಸಿ ಉತ್ಸಾಹದಿಂದ ಆತನನ್ನು ಹಿಂಬಾಲಿಸುತ್ತ-ಆಲಿಸುತ್ತ ನಡೆಯುತ್ತಿದ್ದರು. ಹಂಪಿಯನ್ನು ವಿಶ್ವವೇ ಗಮನಿಸುವಂತೆ ಮಾಡಿದ ವಿಜಯನಗರ ಸಾಮ್ರಾಜ್ಯದಿಂದ ಮೊದಲುಗೊಂಡು, ವಿರೂಪಾಕ್ಷ ದೇವಾಲಯ, ಸಾಸಿವೆ ಕಾಳು ಗಣಪತಿ, ಉಗ್ರ ನರಸಿಂಹ, ಹಜಾರ ರಾಮ ದೇವಸ್ಥಾನ, ಆನೆಗೊಂದಿ, ಬಡವಿ ಲಿಂಗ, ಮಹಾನವಮಿ ದಿಬ್ಬ, ಆನೆ ಲಾಯ ಹೀಗೆ ಹಲವಾರು ಪ್ರೇಕ್ಷಣಿಯ ಸ್ಥಳಗಳನ್ನು ಪರಿಚಯಿಸಿ; ಅನನ್ಯ ಎನಿಸೋಂಥ ಸಪ್ತಸ್ವರ ಸಂಗೀತ ಹೊರಹೊಮ್ಮಿಸುವ ಕಲ್ಲಿನ ಕಂಭಗಳು, ವಿಶ್ವವಿಖ್ಯಾತ ಕಲ್ಲಿನ ರಥ ಹೀಗೆ ಮೊದಲಾದ ಸ್ಮಾರಕಗಳನ್ನು ತೋರಿಸುತ್ತ, ಸಮಯ ಸಿಕ್ಕಾಗಲೆಲ್ಲ ಶಾಂಭವಿಯನ್ನು ಭೇಟಿ ಮಾಡುತ್ತಿದ್ದ.

ಹಂಪಿಯ ಜನಪ್ರಿಯತೆಗೆ ಸುಂದರ-ಸೋಜಿಗ-ಮನೋಹರವಾದ ಇತಿಹಾಸ-ಪರಂಪರೆ ಎಷ್ಟು ಕಾರಣವೋ, ಅಲ್ಲಿ ಹಾಸು ಹೊಕ್ಕಾಗಿ ದಂಧೆಯಾಗಿ ಬೆಳೆದಿರುವ ಮಾದಕ ದ್ರವ್ಯ ವಹಿವಾಟು ಕೂಡ ಅಷ್ಟೇ ಕಾರಣ. ಇದನ್ನು ತಡೆಯಲು ತೀಕ್ಷ್ಣವಾದ ಕಾನೂನು ವ್ಯವಸ್ಥೆ ಇಲ್ಲ. ಬಹಳಷ್ಟು ವಿದೇಶಿಯರನ್ನು ಸೆಳೆಯುತ್ತಿರುವುದು ಕೂಡ ಅದೇ.

ಜಾನಿಗೆ ಒಮ್ಮೆ ವಿದೇಶಿಯರನ್ನು ಹಂಪಿ ಸುತ್ತಿಸುವ ಒಪ್ಪಂದ ಸಿಕ್ಕಾಗ ಶಾಂಭವಿ ಕೋಪಗೊಂಡು ಜಾನಿಯನ್ನು ತರಾಟೆಗೆ ತೆಗೆದುಕೊಂಡಳು. ಜಾನಿಗೆ ಏನಾಗಿತ್ತೋ ಅಂದು, ಸ್ವಲ್ಪ ಹತೋಟಿ ತಪ್ಪಿ ಆಕೆಯನ್ನು ಬೈದು ಹೋಗಿಬಿಟ್ಟಿದ್ದ. ಇದೇನು ಹೊಸತಲ್ಲ. ಜಾನಿಯ ವಾದ ಏನಂದ್ರೆ; ತನ್ನ ಕೆಲಸ ಎಷ್ಟೋ ಅಷ್ಟು ಮಾಡುವುದು, ಯಾರಾದರೇನು. ತಾನಂತೂ ಶಾಮೀಲು ಆಗೋದಿಲ್ಲ ಅಷ್ಟೇ. ಆದರೆ ಶಾಂಭವಿಯದ್ದು; ಇಂಥ ಜನರ ಸಹವಾಸವೇ ಸರಿ ಅಲ್ಲ ಎಂಬುದು.

ಎರಡು ದಿನಗಳ ಬಳಿಕ ಆಕೆಯನ್ನು ಸಮಾಧಾನ ಪಡಿಸಿ ಇನ್ಮೇಲೆ ಇಂಥ ಒಪ್ಪಂದಗಳನ್ನ ತಗೋಳೋದಿಲ್ಲ ಅಂತ ತಿಳಿಸಲು ಆಕೆಯ ಅಂಗಡಿಗೆ ಹೋಗುತ್ತಾನೆ. ಅಂಗಡಿಯ ಬಳಿ ಶಾಂಭವಿಯ ಸುಳಿವೇ ಇಲ್ಲ! ಕೋಪ ಇನ್ನು ತಣ್ಣಗೆ ಆಗಿಲ್ವೇನೋ, ಮನೆಗೆ ಹೋಗಿ ನೋಡುವ ಎಂದು ಮನೆ ಕಡೆಗೆ ಹೆಜ್ಜೆ ಹಾಕುತ್ತಾನೆ. ಅಲ್ಲಿಯೂ ಕಾಣುವುದಿಲ್ಲ. ರಂಗಮ್ಮನನ್ನು ಕೇಳಿದರೆ, " ಬೆಳಿಗ್ಗೇನೆ ಅಂಗಡಿಗೆ ಅಂತ ಹೋದ್ಲಪ್ಪ. ಯಾಕೆ ಅಂಗಡಿ ಹತ್ರ ಇರಲಿಲ್ವಾ?" ಎಂದು ಕೇಳಿದ್ದಕ್ಕೆ, ಸುಮ್ಮನೆ ಗಾಬರಿ ಆಗುತ್ತಾಳೆ ಎಂದು "ಅಂಗಡಿ ಹತ್ರ ಹೋಗಿ ನೋಡ್ಲಿಲ್ಲ,  ಸರಿ ಬರ್ತೀನಿ. ಅಲ್ಲೇ ಹೋಗಿ ಭೇಟಿ ಮಾಡ್ತೀನಿ" ಅಂತ ಸಣ್ಣ ಸುಳ್ಳನ್ನು ಹೇಳಿ ಮುನಿಸಿನ ಮನದನ್ನೆಯನ್ನು ಹುಡುಕಲು ಹೊರಡುತ್ತಾನೆ..

ದಾರಿಯಲ್ಲಿ ಉದ್ವೇಗದಿಂದ ಸಾಗುತ್ತ ಎದುರಿಗೆ ಸಿಕ್ಕ ಸ್ನೇಹಿತರನ್ನೆಲ್ಲ ವಿಚಾರಿಸುತ್ತಾ, ತಾವಿಬ್ಬರೂ ಸಂಧಿಸಿದ್ದ ತಾಣಗಳನ್ನೆಲ್ಲ ಹಾಗೇ ಒಮ್ಮೆ ಪರೀಕ್ಷಿಸುತ್ತ ಸಾಗುತ್ತಾನೆ. ಪ್ರತಿಯೊಂದು ಜಾಗಕ್ಕೆ ಹೋಗುತ್ತಿದ್ದಂತೆ 'ಇಲ್ಲಾದ್ರೂ ಇರ್ತಾಳೆ' ಅನ್ನೋ ನಿರೀಕ್ಷೆ ಬೆಟ್ಟದಷ್ಟಾಗಿ ಅಲ್ಲಿ ಇಲ್ಲದ್ದನ್ನು ಮನಗಂಡು ಸಿಡಿಲು ಬಡಿದವನಂತಾಗಿ ಬೇಸರಗೊಳ್ಳುತ್ತಿದ್ದ. ನಗರದ ಎಲ್ಲ ತಿಳಿದ ಜಾಗಗಳಲ್ಲಿ ಹುಡುಕಿದ ನಂತರ ಬದುಕಿನ ಕೊನೆಯ ಆಶಾಕಿರಣದಂತೆ ಕಾಣುತ್ತಿದ್ದ ಬೆಟ್ಟದ ಕಡೆಗೆ ಓಡುತ್ತಾನೆ. ಒಂದೇ ಉಸಿರಿನಲ್ಲಿ ಕಾಲ್ಕಿತ್ತು, ಬೆಟ್ಟದ ತುದಿಯಲ್ಲಿ ತಾವು ಕೂರುತ್ತಿದ್ದ ಜಾಗಕ್ಕೆ ಹೋಗಿ ನೋಡಿದರೆ ಅಲ್ಲೂ ಕಾಣಿಸುವುದಿಲ್ಲ. ದಿಕ್ಕೇ ತೋಚದಂತಾಗಿ, ಶಕ್ತಿಹೀನನಂತಾಗಿ, ಕುಸಿದು ಬೀಳುತ್ತಾನೆ. ಹಾಗೆ ಕಣ್ಮುಚ್ಚಿರಲು ಒಮ್ಮೆಲೆಗೆ ಶಾಂಭವಿಯೊಂದಿಗೆ ಕಳೆದಂತ ಮಧುರ ಕ್ಷಣಗಳೆಲ್ಲ, ದಿವ್ಯ ಸಂಜೀವಿನಿಯಂತಿದ್ದ ಅವಳ ಮಾತುಗಳೆಲ್ಲ, ಚೈತನ್ಯ ಚಿಲುಮೆಯಂತಿದ್ದ ಅವಳ ಬೆಚ್ಚನೆಯ ಅಪ್ಪುಗೆ, ಎಲ್ಲದರ ನೆನಪು ಒಂದು ಸಿನೆಮಾ ರೀಲನ್ನು ಎಷ್ಟು ವೇಗಕ್ಕೆ ಸಾಧ್ಯವೋ ಅಷ್ಟು ವೇಗವಾಗಿ ತಿರುವಿದರೆ ಕಾಣುವ ಹಾಗೆ ಜಾನಿಯ ಸ್ಮ್ರಿತಿಪಟಲದಲ್ಲಿ ಸುರುಳಿ ಹಾಕುತ್ತಿದ್ದರೆ ತಲೆ ಭಾರದಂತಾಗಿ ಸಿಡಿಯುವುದೊಂದೇ ಬಾಕಿ ಎಂದನಿಸುತ್ತದೆ. ಊರೆಲ್ಲ ಹುಡುಕಿದೆ, ಇನ್ನೆಲ್ಲಿ ಹೋಗಿದ್ದಾಳೋ, ಮುಖ್ಯವಾಗಿ ಹೇಗಿದ್ದಾಳೋ ಎಂದು ಚಿಂತೆಗೀಡಾಗುತ್ತಾನೆ.

ಹೀಗೆ ಧೃತಿಗೆಟ್ಟರೆ ಏನೂ ಪ್ರಯೋಜನವಿಲ್ಲವೆಂದು, ಧೈರ್ಯ ತಂದುಕೊಳ್ಳುತ್ತ ಏನು ಮಾಡೋದೆಂದು ಸರಿಯಾಗಿ ಯೋಚಿಸಲು ನಿರ್ಧರಿಸಿ ಕಣ್ ಮುಚ್ಚಿ ಯಾವುದಾದರೂ ಜಾಗ ಮರೆತನೋ, ಎಲ್ಲೆಲ್ಲಿ ಹುಡುಕಾಡಿದನೊ ಅಲ್ಲೆಲ್ಲ ಏನೇನು ಗಮನಿಸಿದನೊ ಎಂದು ನೆನಪು ಮಾಡಿಕೊಳ್ಳುತ್ತ ಇದ್ದಂತೆ ಒಂದು ಗಲ್ಲಿಯಲ್ಲಿ ಕಂಡೂ ಗಮನಿಸದೆ ಸಾಗಿದ ದೃಶ್ಯ ನೆನಪಾಗಿ ಕುತೂಹಲದಿಂದ ಕಣ್ ಬಿಡುತ್ತಾನೆ.

ಮೊನ್ನೆ ಸಂಜೆ ಆ ಮಾದಕ ದ್ರವ್ಯ ವ್ಯಸನಿ ವಿದೇಶೀಯರೊಂದಿಗೆ ಆದ ಇರಿಸು ಮುರಿಸಿನಿಂದ ನಡೆದ ಸಣ್ಣ ಜಗಳ ನೆನಪಾಗಿ, ದಾರಿಯಲ್ಲಿ ಹುಡುಕುತ್ತ ಬರುವಾಗ ಒಂದು ಗಲ್ಲಿಯಲ್ಲಿ ಅದೇ ವಿದೇಶೀಯರು ಜಾನಿಯನ್ನು ನೋಡಿದೊಡನೆ ಮುಖ ಮರೆಸಿ ಬೇರೆ ರಸ್ತೆಗೆ ತಿರುವು ಪಡೆದದ್ದು ನೆನಪಾಯ್ತು. ಜಾನಿಯೊಂದಿಗೆ ಶಾಂಭವಿ ಇರುತ್ತಿದ್ದದ್ದನ್ನು ಗಮನಿಸಿದ್ದ ವಿದೇಶೀಯರು, ಹಂಪಿಯನ್ನು ತೋರಿಸುತ್ತಿದ್ದ ಜಾನಿಯೊಂದಿಗೆ ಅಂದು ಶಾಂಭವಿಯ ವಿಷಯಯನ್ನು ಪ್ರಸ್ತಾಪಿಸಿ, ಅಮಲಿನಲ್ಲಿದ್ದವರು ಆಕೆಯ ತೇಜೋವಧೆ ಆಗುವಂತೆ ಅಶ್ಲೀಲವಾಗಿ ಮಾತಾಡುತ್ತ ಉನ್ಮತ್ತರಾಗಿದ್ದರು. ಜಾನಿಗೆ ಅದನ್ನೆಲ್ಲ ಸಹಿಕೊಂಡು ಅವರೊಂದಿಗೆ ಮುಂದುವರಿಯುವ ಯಾವುದೇ ಇರಾದೆ-ಕಾರಣ ಇರಲಿಲ್ಲ. ಅವರೆಲ್ಲರ ಮೈ ಮೂಳೆ ಮುರಿಯುವುದನ್ನು ಬಿಟ್ಟು. ಮೊದಲೇ ಅಮಲಿನಲಿದ್ದವರಿಗೆ ಬಡಿಯಲು ಕಷ್ಟವೆನಿಸಲಿಲ್ಲ. ಅಲ್ಲೇ ಇದ್ದವರಲ್ಲಿ ಕೆಲವರು ಬಂದು ಜಾನಿಯನ್ನು ಸಮಾಧಾನ ಪಡಿಸಿರದಿದ್ದರೆ, "ಹಂಪಿಯ ಸರ್ಕಾರಿ ಆಸ್ಪತ್ರೆಯಲ್ಲಿ ಮಾದಕ ವ್ಯಸನದ ವಿದೇಶೀಯರ ಭರ್ತಿ" ಎಂದು ಮರುದಿನದ ಪತ್ರಿಕೇಲಿ ಅಚ್ಚಾಗೋದು ಖಾತ್ರಿ ಆಗ್ತಿತ್ತು.

ಆಗ ರಸ್ತೆ ತಿರುವಿನಲ್ಲಿ ಭಯದಿಂದ ಹೋದರೇನೋ ಎಂಬ ಅಸಡ್ಡೆಯಲ್ಲಿ ಮುಂದೆ ಸಾಗಿದ ಜಾನಿಗೆ ಈಗ ಅದು ನೆನಪಾಗಿ ಅದೇ ಜಿದ್ದನ್ನು ಸಾಧಿಸಿ ಅವರೇನಾದರು ಶಾಂಭವಿಯನ್ನು ಹೊತ್ತೊಯ್ದರೇನೋ ಎಂಬ ಸಂಶಯ ಬಂದು ಧಡಕ್ಕನೆ ಎದ್ದು ಓಡತೊಡಗಿದ.

ಆ ರಸ್ತೆಯ ಆಸುಪಾಸಲ್ಲೆಲ್ಲ ಹುಡುಕಿದ ನಂತರ ಎಲ್ಲೂ ಕಾಣದಿದ್ದಾಗ ಅಲ್ಲೇ ಮೂಲೆಯಲ್ಲಿದ್ದ ಬೀಡ ಅಂಗಡಿಗೆ ಹೋಗಿ 'ಇಲ್ಲಿ ಯಾರಾದರೂ ವಿದೇಶಿಯರನ್ನು ಕಂಡ್ಯ ಅಣ್ಣ?' ಎಂದು ಕೇಳುತ್ತಾನೆ. ಅದಕ್ಕೆ ಬೀಡ ಅಂಗಡಿಯವ, 'ಹೌದು ಕಣಪ್ಪ. ಒಂದು ತಾಸಿನ ಮುಂಚೆ ವಿದೇಶೀಯರ ಒಂದು ಗುಂಪು ತಮ್ಮ ಚೀಲವನ್ನೆಲ್ಲಾ ಹೊತ್ಕೊಂಡು ಇಲ್ಲಿಗೆ ಬಂದ ಬಸ್ಸಿನಲ್ಲಿ ಹೋದ್ರು' ಎಂದು ಹೇಳುತ್ತಾನೆ. ಕೇಳಿದವನೆ ಜಾನಿಗೆ ಮತ್ತೆ ದಿಕ್ಕು ತೋಚದಂತಾಗುತ್ತದೆ. ಬೀಡ ಅಂಗಡಿಯನು ಜಾನಿಯನ್ನು ಗಮನಿಸಿ 'ಏನಾಯ್ತಪ್ಪ, ದುಡ್ಡು ಕೊಡದಿರ ಮೋಸ ಮಾಡಿ ಹೋಗ್ಬಿಟ್ರ!' ಅಂತ ಕೇಳುತ್ತಾನೆ. ಜಾನಿಗೆ ಶಾಂಭವಿಯ ಯೋಚನೆ ಬಿಟ್ಟು ಬೇರೆ ಏನೂ ತೋಚದೆ, ಯಾರ ಮಾತೂ ಕಿವಿಗೆ ಬೀಳದೆ ಇದ್ದಾಗ ಅಲ್ಲಿ ಒಂದು ಬಸ್ ಬಂದು ನಿಲ್ಲುತ್ತದೆ.

ಆ ಬಸ್ಸಿಂದ ಒಂದು ಪರಿಚಿತ ಆಕಾರ ಇಳಿದು ಬರುತ್ತಿರುವುದನ್ನು ಗಮನಿಸಿದ ಜಾನಿಗೆ; ಎದೆಗೂಡಿನ ಪ್ರಾಣ ಪಕ್ಷಿ ಹೇಳದೆ ಎಲ್ಲೋ ವಿಹಾರಕ್ಕೆಂದು ಹೋಗಿ ಬಂದ ಹಾಗೆ, ಸಂತೆಯ ದೊಂಬಿಯಲ್ಲಿ ಕೈ ಬಿಡದೆ ಸಾಗುತ್ತಿದ್ದ ಮಗುವೊಂದು ಅಚಾನಕ್ಕಾಗಿ ಕಳೆದು ಹೋಗಿ ಮತ್ತೆ ಕಂಡ ಹಾಗೆ, ಕಳೆದುಕೊಂಡ ಆಟಿಗೆಯು ಮಗುವಿಗೆ ಸಿಕ್ಕಾಗ ಆಗುವ ಅನುಭವದ ಹಾಗೆಲ್ಲ ಅನ್ನಿಸಿ, ಅದು ಶಾಂಭವಿಯೇ ಎಂದು ಖಾತ್ರಿ ಮಾಡಿಕೊಳ್ಳಲು ಕಣ್ಣುಜ್ಜಿಕೊಂಡು ಓಡಿ ಹೋಗಿ ಆಕೆಯ ಮುಂದೆ ನಿಂತುಕೊಂಡನು. ಶಾಂಭವಿಯು ಅನಿರೀಕ್ಷಿತವಾಗಿ ಜಾನಿಯನ್ನು ಕಂಡೊಡನೆ "ನೀ ಇಲ್ಲೇನು ಮಾಡುತ್ತಿದೀಯಾ? ಇವತ್ತು ಕೆಲಸಕ್ಕೇನು ರಜೆನ, ಇಷ್ಟು ಬೇಗ ಕೆಲಸದಿಂದ ಬಂದಿದಿಯ! ಇಲ್ಲ ನೀನೇ ಬಿಡುವು ಮಾಡಿಕೊಂಡೆಯ? ನಂಗೆ ಬೇಕಾದಾಗ ಮಾತ್ರ ದಮ್ಮಯ್ಯ ಅಂದ್ರು ಪುರುಸೊತ್ತು ಮಾಡ್ಕೊಳೋದಿಲ್ಲ, ಅಷ್ಟೇ ಬಿಡು ನನ್ ಮೇಲೆ ಎಲ್ಲಿ ಪ್ರೀತಿ ನಿಂಗೆ!!? ನಂಗಂತೂ ಸಮಯ...." ಅಂತೆಲ್ಲ ಮಾತಿನ ಮೇಲೆ ಮಾತಾಡುತ್ತಿದ್ದರೆ, ಜಾನಿ ತನ್ನ ಅಂಗೈಯ್ಯಿಂದ ಆಕೆಯ ಬಾಯಿ ಮುಚ್ಚಿ, "ಸಾಕು ಮಾಡು ಮಾರಾಯ್ತಿ. ಆಗ್ಲಿಂದ ನಿಂಗಾಗಿ ಹುಡುಕಿ ಹುಡುಕಿ ತುಂಬಾ ದಣಿವಾಗಿದೀನಿ. ನಿನ್ನ ನೋಡಿ ಎಲ್ಲೋ ಹೋದ ಜೀವ ಬಂದಂತಾಗಿದೆ." ಎಂದು ಬಿಕ್ಕುತ್ತಾ ಶಾಂಭವಿಯನ್ನು ಬಿಗಿದು ಅಪ್ಪಿಕೊಳ್ಳುತ್ತಾನೆ.


"ಅಯ್ಯೋ, ನಿನ್ನನ್ನು ಬಿಟ್ಟು ಎಲ್ಲಿ ಕಳೆದು ಹೋಗ್ಲಿ. ನಾಳೆ ನಿನ್ನ ಜನುಮ ದಿನ ಅಲ್ವಾ. ಪೇಟೆಗೆ ಹೋಗಿದ್ದೆ ಉಡುಗೊರೆ ತರೋಣ ಅಂತ. ಹಾಗೇ ಅಲ್ಲಿ ಪರಿಚಯದವ್ರು ಸಿಕ್ಕಿದ್ರಿಂದ ಕಾಲಹರಣ ಆಗೋಯ್ತು. ಅದ್ಕೆ ನಿಧಾನ ಬಂದೆ." ಎನ್ನುತ್ತ ಜಾನಿಯ ಕೆನ್ನೆಗಳನ್ನು ತನ್ನ ಬೊಗಸೆಯಲ್ಲಿ ಹಿಡಿದು ನಲ್ಮೆಯ ನಗೆ ಬೀರುತ್ತಾ "ಬಾ ಮನೆಗೆ ಹೋಗುವ. ಬೆಳಿಗ್ಗೆ ಬೇಗ ಎದ್ದು ವಿರೂಪಾಕ್ಷನ ದರ್ಶನ ಮಾಡಿ ಆಶೀರ್ವಾದ ಪಡೆಯುವ. ನಮಗೆ ಬೇಗ ಮದ್ವೆ ಆಗ್ಲಿ ಅಂತ.." ಎಂದು ಸಣ್ಣ ನಾಚಿಕೆಯ ನಗೆ ಬೀರುತ್ತಾ, ಇಬ್ಬರೂ ಕಿರುಬೆರಳುಗಳಿಗೆ ಪ್ರೇಮದ ಬೀಗ ಜಡಿದು ಮನೆಯ ಕಡೆ ನಡೆದು ಹೋದರು.

7 comments:

  1. This comment has been removed by the author.

    ReplyDelete
  2. This comment has been removed by the author.

    ReplyDelete
  3. ಅದ್ಭುತ.. ದೊಡ್ಡ ಪುಸ್ತಕದ ಪ್ರಕಾಶಕ ಆಗಲು ಇದೇ ನಾಂದಿ

    ReplyDelete
  4. This comment has been removed by the author.

    ReplyDelete
  5. Liked the style, amazing narration, keep it up, Good luck

    ReplyDelete