ಅಮ್ಮ ಕುಮುದಾಳ ಪ್ರಪಂಚದಲ್ಲಿ ಯೋಚಿಸೋದ್ಕೆ ಇರೋದು
ಎರಡೇ; ತನ್ನ ಜೀವನ ವಾಸಕ್ಕೆಂದು ಬೆಂಗಳೂರಿನ ಬಸವನಗುಡಿಯಲ್ಲಿ ಇದ್ದ ಎರಡು bedroomನ ಮನೆಯ ನಿರ್ವಹಣೆ ಮತ್ತು ಆ ಮನೆಯಲ್ಲಿ ಜೀವ ತಂತುವಿನಂತೆ ಬೆಳೆದ 27 ವರ್ಷದ
ಸ್ಫುರದ್ರೂಪಿ, ಯಶಸ್ವಿ ಮಗ ಸಮನ್ಯು.
ಸಮನ್ಯುವಿಗೆ ಜೀವನದ ಎಲ್ಲಾ
ಆತಂಕ, ಗೊಂದಲ, ಅಂಜಿಕೆಗಳ fullstop ಎಂದರೆ
ಅಮ್ಮ. ಅಮ್ಮನ ಮಡಿಲು ಅವೆಲ್ಲವನ್ನೂ ದೂರಗೊಳಿಸಿ, ಸಂತೈಸಿ ತಮಾಷೆ ಮಾಡುತ್ತಾ ಮಗನ ಮುಖದ ಮೇಲೆ ನಗು
ಅನ್ನೋ ಹೂ ಅರಳಿಸದೆ ಇರ್ತಿರ್ಲಿಲ್ಲ. ನೆನಪೂ ಕೂಡ ಇಲ್ಲದ ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡಿದ್ದ
ಸಮನ್ಯುವಿಗೆ, ಅಮ್ಮನ ಅತೀವ ಪ್ರೀತಿ, ಎಣಿಕೆಗೂ ನಿಲುಕದ ತ್ಯಾಗದ ಸಂದರ್ಭಗಳು, ಸಮಾಜದಲ್ಲಿ ಒಂಟಿ
ಹೆಣ್ಣು ಬದುಕಲು ಪಡುವ ಪಡಿಪಾಟಲನ್ನೆಲ್ಲ ದಾಟಿ ಬಂದುದರ ದೃಷ್ಟಾಂತ, ಎಲ್ಲವೂ ಅವನಿಗೆ “ಅಮ್ಮ ಎಂದರೆ
ಎಲ್ಲ. ಅಮ್ಮ ಇಲ್ಲದೆ ಬೇರೇನೂ ಇಲ್ಲ. ಅಮ್ಮನಿಗಾಗೇ ಇನ್ನೆಲ್ಲ..” ಎಂಬಂಥ ಮನೋಭಾವನೆ ಆಳವಾಗಿ ಬೇರೂರಿ,
ಬಾಲ್ಯಾವಸ್ಥೆ ದಾಟಿದಾಗಿನಿಂದಲೂ ಅಮ್ಮನನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಪಾಡುತಿದ್ದ.
ಸಮನ್ಯು ಸಂಜೆ ಮನೆಗೆ
ಬಂದಿದ್ದೆ, ದಿನಚರಿ ಹಾಗೂ ತನ್ನ ಭಾವ ಲಹರಿಯನ್ನೆಲ್ಲ ಅಮ್ಮನಿಗೆ ಒಪ್ಪಿಸಿಬಿಡುತ್ತಿದ್ದ. ಹೇಳಲೇಬೇಕಂಬ
ನಿಯಮದಿಂದಲ್ಲ, ಅವನಿಗೂ ಕುಮುದಾಳಿಗಿಂತ ಬೇರೆ best friend ಇರಲಿಲ್ಲ. ಸಿನಿಮಾ, ನಾಟಕ, ಹೀಗೆ ಸ್ನೇಹಿತರ ಜೊತೆ ಸಮಯ ಕಳೆವ ರೀತಿಯಲ್ಲೇ ಅಮ್ಮನ
ಜೊತೆಯಲ್ಲೂ ಸುತ್ತಾಡುತ್ತಿದ್ದ. ದಾರಿಯಲ್ಲಿ ಹೋಗುವಾಗ ಚಂದನೆಯ ಹುಡುಗಿಯರು ಹಾದು ಹೋದರೆ ಕುಮುದಾಳೇ
ಸಮನ್ಯುವಿಗೆ ತೋರಿಸಿ ಗೇಲಿ ಮಾಡುವುದು ಕೂಡ ಸಾಮಾನ್ಯವೇ ಆಗುವಷ್ಟು ಸ್ನೇಹ ಸಂಬಂಧ ಅವರಿಬ್ಬರ
ಮಧ್ಯೆ ಬೆಳೆದು ನಿಂತಿತ್ತು.
ಇಷ್ಟು ಒಡನಾಟ
ಇದ್ದದ್ದಕ್ಕೋ ಏನೊ, ಮಗನ ಅಭಿರುಚಿ ಅಮ್ಮನಿಗೆ ಬಹಳ ಚೆನ್ನಾಗಿ ಗೊತ್ತಿತ್ತು. ಎಲ್ಲ ವಿಷಯದಲ್ಲೂ. ಅವನು
ಅಷ್ಟಾಗಿ ಬಾಯಿಬಿಟ್ಟು ‘ನನಗಿದು ಬೇಕು..’ ಎಂದು ಕೇಳಿದ್ದು ಕೆಲವರು ಬಾರಿ ಮಾತ್ರ. ಮಿಕ್ಕೆಲ್ಲಾ
ಸಂದರ್ಭಗಳಲ್ಲಿ ಅಮ್ಮನೇ ಅರ್ಥ ಮಾಡಿಕೊಂಡು ಕೊಡಿಸಿದ್ದೇ.
ಮಗ ಬೆಳೆದು ನಿಂತು,
ಒಳ್ಳೆಯ ಕೆಲಸಕ್ಕೆ ಸೇರಿ, ತಾವು ಸ್ಥಿತಿವಂತರಾಗಿದ್ದೇವೆ ಎನಿಸಿದ ಮೇಲೆ ಕುಮುದಾಳಿಗೆ ಕಾಡುತ್ತಲೇ
ಇದ್ದ ಒಂದೇ ಯೋಚನೆ ಮಗನ ಮದುವೆ ಬಗ್ಗೆ. ಏಕೆಂದರೆ, ಮುಂಚೆ ಮದುವೆ ಬಗ್ಗೆ ಮತಾಡಿದಾಗೆಲ್ಲ ‘ಮನೆ
ಅಂತ ಹೆಂಗಿದ್ರು ಇದೆ, ಅದ್ರ ಬಗ್ಗೆ ಯೋಚ್ನೆ ಇಲ್ಲ. ಆದ್ರೆ ಮೊದ್ಲು ಒಂದ್ ಒಳ್ಳೆ ಸಂಬಳದ ಕೆಲ್ಸ
ಅಂತ ಸಿಕ್ಕಿ settle ಆಗೋಣ. ಆಮೇಲೆ
ಮದ್ವೆ ಮಕ್ಳು ಇದ್ದಿದ್ದೆ. ಅದು ಅಲ್ಲದೆ, ನಂಗೆ ಇರೋದು ಅಂತ ನೀನೋಬ್ಳೆ. ನಿನ್ನುನ್ನ ಮಹಾರಾಣಿ
ಹಾಗೆ treat ಮಾಡ್ಕೊಂಡು ನೋಡ್ಕೊಳೋವ್ಳು
ಅಲ್ದಿದ್ರೂ, ಮನೇಲಿ ಮನಃಸ್ತಾಪಗಳು ಆಗ್ದಿರೋಹಾಗೆ ಸಂಭಾಳಿಸ್ಕೊಂಡು ಹೋಗೋ ಹುಡುಗಿ ಸಿಗ್ಬೇಕಲ್ವ..’
ಅಂತ ಮುಂದೂಡ್ತಿದ್ದ. ಅದೂ ಸರೀನೆ ಅಂತ ಕುಮುದಾನು ಸುಮ್ಮನಾಗ್ತಿದ್ಲು. ಆದ್ರೆ, ಸಂಬಳ-ಕೆಲ್ಸ ಅಂತ
ಕಥೆ ಹೊಡ್ದು ಅದೆಲ್ಲ ಆದ್ಮೇಲೂ ಸುಮ್ಮನೆ ಇದಾನಲ್ಲ ಅಂತ ಆಕೇನೇ ತಿಳಿದವರ ಹತ್ರ ವಿಚಾರುಸ್ಕೊಂಡು ಹುಡುಗಿ
ಹುಡ್ಕೋಕೆ ಶುರು ಮಾಡಿದ್ಲು.
ಇಲ್ಲಿ ಇವರ ಕಥೆ
ಹೀಗಿರೋವಾಗ; ಸಮನ್ಯು ಹಾಗೂ ಕುಮುದಾರ ಬಾಂಧವ್ಯವನ್ನ, ಸಂಬಂಧದ ಉತ್ಕೃಷ್ಠ ಗಟ್ಟಿತನವನ್ನ ಸುಮಾರು
ವರ್ಷಗಳಿಂದ observe
ಮಾಡುತ್ತಾ, ಮೆಚ್ಚುತ್ತಾ ಬಂದಿದ್ದ ಹುಡುಗಿಯೊಬ್ಬಳು, ಇಂಥ ಮನೆಗೆ ಸೊಸೆ ಆದ್ರೆ ಎಷ್ಟು ಚೆಂದ ಅನ್ನೋಂತ
ಕನಸನ್ನು ಕಾಣ್ತಿದ್ಲು. ಮಂದಸ್ಮಿತೆ, ಸೂಕ್ಷಮತಿ, ದಿಟ್ಟ ನಡೆ-ನುಡಿ ಇದ್ದ ಹಾಗೂ ಚೆಲುವೆಯೂ
ಆಗಿದ್ದ ಆಕೆಯ ಹೆಸರು ಸಾನ್ವಿ.
ಪಕ್ಕದ ಬೀದೀಲಿ ಕುಮುದಾಳಿಗೆ ಶಾಂಭವಿ ಎಂಬವರ ಪರಿಚಯವಿತ್ತು.
ಪರಿಚಯ ಅಂದ್ರೆ ಅಷ್ಟಾಗಿ ಏನೂ ಗೊತ್ತಿಲ್ದಿದ್ರೂ, ಹಬ್ಬ-ಹರಿದಿನಗಳಲ್ಲಿ ಮುತ್ತೈದೆಯರಿಗೆ ನೀಡುವ
ಅರಿಶಿನ-ಕುಂಕುಮದ ಜರೂರತ್ತಿನ ಪರಿಚಯ ಅಷ್ಟೆ. ಹಾಗಾಗಿ, ಆಗಾಗ ತರಕಾರಿ ಕೊಳ್ಳುವಾಗಲೋ, ಹಾಲಿನ
ಬೂತಲ್ಲೋ ಸಿಕ್ಕಾಗ ನಿಷ್ಕಳಂಕ ನಗುವಿನಿಂದ ಕೂಡಿದ ಮಾತುಕತೆ ಜರುಗುತ್ತಿತ್ತು. ಒಬ್ಬರ ಮೇಲೊಬ್ಬರಿಗೆ
ಒಳ್ಳೆಯ ಅಭಿಪ್ರಾಯವೇ ಇತ್ತು. ಈ ಶಾಂಭವಿಯವರ ಏಕಮಾತ್ರ ಪುತ್ರಿಯೇ ಸಾನ್ವಿ.
ಹೀಗೇ ಒಮ್ಮೆ ಭೇಟಿಯಾದ
ಸಂದರ್ಭದಲ್ಲಿ ಕುಮುದಾ ಶಾಂಭವಿಯೊಂದಿಗೆ ಸಮನ್ಯುವಿನ ಮದುವೆ ಯೋಚನೆಯನ್ನು ಪ್ರಸ್ತಾಪಿಸುತ್ತಾಳೆ.
ಶಾಂಭವಿಯು ಮನೆಯಲ್ಲಿ ಅದೇ ವಿಷಯವನ್ನು ಸುಮ್ಮನೆ ಏನೋ ಚರ್ಚಿಸುವುದರ ಮಧ್ಯೆ ಸಾನ್ವಿಯೊಂದಿಗೆ ಆ
ವಿಷಯವನ್ನು ತಿಳಿಸುತ್ತಾಳೆ. ಸಾನ್ವಿಗೆ ಆ ಕ್ಷಣಕ್ಕೆ ಏನನ್ನಿಸಿತೋ, ‘ಅಮ್ಮ, ನಾನು ಸಮನ್ಯುನ
ಮದುವೆ ಆಗ್ಲ? ಯಾಕೋ ತುಂಬಾ ಅನ್ನುಸ್ತಿದೆ, ಅವ್ರ ಮನೆಗೆ ಸೊಸೆ ಆಗಿ ಹೋದ್ರೆ ಚೆನ್ನಾಗಿರ್ತೀನಿ
ಅಂತ. ಹಂಗೇನೆ, ಅತ್ತೆ ಮನೆ ತವರು ಮನೆ ಒಂದೇ ರಸ್ತೆಯ ಅಳತೆ ದೂರದಲ್ಲಿ ಇರುತ್ತೆ. ಓಡಾಡಕೂ
ಅನುಕೂಲ..’ ಅಂತ ಕಿರುನಗೆ ಮಿಶ್ರಿತ ನಾಚಿಕೆ ಮುಖಭಾವದಲ್ಲಿ ಅಮ್ಮನ ಹತ್ರ ಹೇಳ್ತಾಳೆ. ಶಾಂಭವಿಗೆ
ಮಗಳ ದಿಟ್ಟತನದ ಬಗ್ಗೆ ಗೊತ್ತಿದ್ರೂ, ಇಂಥ ವಿಷಯಾನ ಹೆತ್ತವರ ಮುಂದೆ ಹಿಂಗೂ ಒಂದೇ ಸರ್ತಿ
ಹೇಳ್ಬಿಡ್ತಾರೆ ಅಂತ ಒಂದು ಕ್ಷಣಕ್ಕೆ ದಿಗ್ಭ್ರಾಂತಿ ಆಗಿ, ಮರುಕ್ಷಣ ಮಗಳ ಅನಿಸಿಕೆ ಏನೂ ತಪ್ಪಲ್ಲ
ಅನ್ನಿಸ್ತದೆ. ‘ಆದರೆ, ನಿಮ್ಮಪ್ಪ ಹಾಗೂ ಕುಮುದಾ ಅವರನ್ನ ಹೇಗೆ ಒಪ್ಸೋದು.!?’ ಅಂತ ಶಾಂಭವಿ ಕೇಳಿದ್ದೇ
ತಡ, ಅಮ್ಮನ support
ಸಿಕ್ತಲ್ಲ ಅನ್ಕೊಂಡು ‘ನಾನು ನೋಡ್ಕೋತೀನಿ ಬಿಡು ಅದುನ್ನೆಲ್ಲ.’ ಅಂದವಳೇ, complete strategy ready ಮಾಡ್ಕೊಳಕೆ ಹೋಗೋವ್ಳಂತೆ ಅಲ್ಲಿಂದ ಎದ್ದು
ಹೋಗ್ತಾಳೆ.
ರಾತ್ರಿಯ ಕೂಲಂಕುಷ
ಚಿಂತನೆಯ ನಂತರ ಗಟ್ಟಿಯಾಗಿ ನಿರ್ಧರಿಸಿ ಮರುದಿನ ಮಧ್ಯಾಹ್ನ ಕುಮುದಾರ ಮನೆಗೆ ಹೋಗ್ತಾಳೆ.
ಸಾನ್ವಿಯ ಪರಿಚಯ ಇದ್ದ ಕಾರಣ shock ಅಂತೇನು ಆಗ್ದಿರ
ಕುಶಲೋಪರಿ ಸಾಂಪ್ರತ ಎಂಬಂತೆ ಮಾತಾಡ್ತಾ ಕೂತಿರ್ತಾರೆ. ಸಾನ್ವಿ ಮತ್ತೆ ಒಮ್ಮೆಲೆಗೆ, ‘aunty, ನಾನು ನಿಮ್ಮ ಮಗನ್ನ ಮದುವೆ ಮಾಡ್ಕೊಬೇಕು ಅಂತ ಅನ್ಕೊಂಡಿದೀನಿ, please ಒಪ್ಪಿಗೆ ಕೊಡಿ. ನಿಮ್ಮ ಮಗನಿಗೂ ನಾನು ಅವನನ್ನ ಇಷ್ಟ ಪಡ್ತಿರೋ ವಿಷಯ ಹೇಳಿಲ್ಲ.
ನಮ್ಮ ಮನೆಯ ಅನುಮತಿ ಕೇಳಿ, ನಿಮ್ಮ ಅನುಮತಿ ಪಡುದ್ಮೇಲೆ, ಸಮನ್ಯುಗೆ ವಿಷ್ಯ ತಿಳಿಸೋಣ
ಅನ್ಕೊಂಡಿದ್ದೆ. ಯಾಕಂದ್ರೆ, ಸಮನ್ಯುವಿಗೆ ನೀವೇ ಜೀವ ಅಂತ ಗೊತ್ತು. ಅದುಕ್ಕೆ ಜೀವದ permission ತಗೊಂಡ್ ಬಿಟ್ರೆ ಜೀವನದ journeyಗೆ pass ಸಿಕ್ದಂಗೆ ಅಂತ ನಿಮ್ಮತ್ರ ಮೊದ್ಲು ಬಂದೆ.’ ಅನ್ನೋ sooper clarity ಮನೋಭಾವ ಹಾಗೂ ಸಂಬಂಧಗಳ ಬೆಲೆ ತಿಳಿದವರ ಹಾಗೆ ಮಾತಾಡಿದ ರೀತಿ ಕುಮುದಾಗೆ ಇಷ್ಟವಾಗಿ
ಸೊಸೆ ಅಂತ ಸ್ವೀಕರಿಸಿದ್ದೂ ಆಯ್ತು.
ಈ ಮಾತುಕತೆ ಆದ್ಮೇಲೆ,
ಸ್ವಲ್ಪ ಕಾಲಹರಣದ ನಂತರದಲ್ಲೂ ಕುಮುದಾಳಿಗೆ ಒಂದು ವಿಷಯ ಕಾಡ್ತಾನೆ ಇತ್ತು. ಅದನ್ನ ಸಾನ್ವಿಗೆ
ಹೇಳ್ದಿರ ಇರೋದ್ಕೂ ಆಗ್ದಿರ, ‘ಸಾನ್ವಿ. ನನ್ ಮಗ ಒಂದು ಪ್ರಶ್ನೇನು ಕೇಳ್ದಿರ ನಾನ್ ತೋರ್ಸಿದ್
ಹುಡುಗಿಗೆ ತಾಳಿ ಕಟ್ಬಿಡ್ತಾನೆ, ಅದ್ರಲ್ ನಂಗೇನು ಸಂಶಯ ಇಲ್ಲ. ಆದ್ರೆ, ನಾನ್ ಹೇಳ್ದೆ ಅಂತ
ಅವ್ನು ಮದ್ವೆ ಆಗಬಾರದು ಅಲ್ವ. ಅವನ ಸಂಗಾತಿ ಆಗೋವ್ಳು ಅವನಿಗೆ ಇಷ್ಟ ಆಗ್ಬೇಕು. ಹಂಗಾಗಿ, ಇನ್ನ
ನೀನುಂಟು ಅವನುಂಟು. ಅವ್ನು ಕೂಡ ನಿನ್ನ ಇಷ್ಟ ಪಡೋಹಾಗೆ ಏನಾದ್ರೂ ಆಗಿದ್ದೆ ಆದ್ರೆ ತಕರಾರೇ
ಇಲ್ದಿರ ಓಲಗ ಊದಿಸಿ ಬಿಡೋಣಂತೆ.’ ಅಂದದ್ದೇ, ಸಾನ್ವಿಗೆ ಪೀಕಲಾಟಕ್ಕೆ ಸಿಲುಕಿದ ಪರಿಸ್ಥಿತಿ ಅನ್ನುಸ್ತು.
ಆದ್ರೂ, ಆ logic
ಸರಿಯಾಗಿದೆ ಅನ್ಸಿ, ‘ಸರಿ aunty, ನೀವ್
ಹೇಳ್ದಂಗೆ ಆಗ್ಲಿ.’ಅಂತ ಅಲ್ಲಿಂದ ಹೊರಡುತ್ತಾಳೆ.
ಇನ್ಮೇಲೆ ಸಾನ್ವಿಗೆ ಶುರು
ಆಗಿದ್ದೇ, ಸಮನ್ಯುವನ್ನು ವರಿಸುವ ಕಾರ್ಯ.
ಹುಡುಗ್ರು ಹುಡುಗೀನ
ವರಿಸೋ ರೀತಿ coffee shop, date
ಇಂಥವೆಲ್ಲ ಇವನತ್ರ workout ಆಗಲ್ಲ
ಅಂತ, ಮನೆಯಿಂದ ಹೊರಗೆಲ್ಲೂ ಈ ಆಸಾಮಿನ impress ಮಾಡಕೆ
ಆಗಲ್ಲ ಅಂತ ಕುಮುದಾಳೊಂದಿಗೆ ಮಾತಾಡಿ, ಆಗಾಗ ಮನೆಗೆ ಬರುವ ಅನುಮತಿ ಪಡೆದು, ಸಮನ್ಯುವಿಗೆ ದಿನಾ
ದರ್ಶನ ಕೊಟ್ಟು ತಾನೂ ಕೂಡ ಆತನ ಸಾಮೀಪ್ಯದಲ್ಲೇ ಸುಳಿದಾಡೋ masterplan ಮಾಡಿದಳು.
ಮನೆಯಲ್ಲಿ ಓಡಾಡುತ್ತ, ಸಮನ್ಯು
ಮುಖತಃ ಸಿಕ್ಕಾಗ ಮೆಲುನಗೆ ಬೀರುತ್ತ, ಆತನು ಕೂಡ ನಗೆ ಬೀರಿದ್ದೆ ಆದಲ್ಲಿ ತನ್ಮಯಳಾಗುತ್ತಿದ್ದಳು.
ಕುಮುದಾ ಕೂಡ ಆಗಾಗ ಹುಷಾರು ತಪ್ಪುವ ರೀತಿಯಲ್ಲಿ ಹಾಸಿಗೆ ಹಿಡಿದಂತೆ ನಟಿಸುತ್ತ, ಸಾನ್ವಿ ಆಕೆಯ
ಆರೈಕೆ-ಶುಶ್ರೂಷೆ ಮಾಡುವುದು, ಸಮನ್ಯುವಿನ ದೈನಂದಿನ ಕೆಲಸಗಳಲ್ಲಿ ಸಹಾಯ ಮಾಡುವುದು ಹೀಗೇ
ನಡೆದಿತ್ತು. ಇಲ್ಲಿ ಗಮನಿಸ ಬೇಕಾದ ವಿಷಯವೆಂದರೆ, ಕುಮುದಾ ಹಾಗೂ ಸಾನ್ವಿ ಸ್ವಲ್ಪ
ನಟಿಸುತ್ತಿದ್ದರೂ ಅವರ ಸಂಬಂಧ ಗಟ್ಟಿಯಾಗುತ್ತಾ, ಅತ್ತೆ-ಸೊಸೆ ಬಾಂಧವ್ಯ ಬಿಗಿಯಾಗುತ್ತಾ, ಮನೆ
ಮಗಳಂತೆ ಆದದ್ದು ಮಾತ್ರ ಸುಳ್ಳಲ್ಲ. ಹಾಗೇ ಸಮನ್ಯುವಿಗೂ ಮನಸಿನ ಮೂಲೆಯಲ್ಲೆಲ್ಲೋ ನಿಧಾನವಾಗಿ ಸಾನ್ವಿಯ
ಕಡೆಗೆ ಒಲವು ಮೂಡಿದ್ದು ಕೂಡ ನಿಜ.
ಒಮ್ಮೆ ಮನೆಗೆ ಬಂದಾಗ ಇವರಿಬ್ಬರೂ
ಏನೋ ಚರ್ಚಿಸುತ್ತಾ, ನಗೆಗಡಲಲ್ಲಿ ತೇಲುತ್ತಾ ಇದ್ದದ್ದನ್ನು ಗಮನಿಸಿದ ಸಮನ್ಯುವಿಗೆ, ಬಾಗಿಲಲ್ಲೇ
ಅವರನ್ನು ನೋಡುತ್ತಾ, ‘ಸಾನ್ವಿನ ನಾನು ಮದುವೆ ಆದ್ರೆ ಈ ಅನುಬಂಧ ಹೀಗೆ ಇರುತ್ತಲ್ವ..’ ಅನ್ನಿಸಿ
ಮೂಡಿದ ಮಂದಹಾಸದ ಮೊಗ್ಗು ಇನ್ನೇನು ಅರಳಿ ಹೂವಾಗ್ಬೇಕು ಅನ್ನೋಷ್ಟರಲ್ಲಿ ‘ನಾನೇನೋ ಇಷ್ಟ ಪಟ್ಟು
ಅಮ್ಮನ ಹತ್ರ ಕೇಳುದ್ರೆ, ನಾ ಕೇಳ್ದೆ ಅಂತ ಅಮ್ಮ ಒಪ್ಕೊಳೋದು ಸರಿ ಅಲ್ಲ ಅಲ್ವ. ಅವಳಿಗೂ
ಹಿಡಿಸ್ಬೇಕು.’ ಅಂತ ಯೋಚನೆ ಮಾಡುತ್ತಾ ಒಳಗೆ ಹೋಗ್ತಾನೆ.
ಕೆಲವು ದಿನಗಳ ನಂತರ,
ಅದೇ ಯೋಚ್ನೆ ಮತ್ತೆ ತಲೆ ಹೊಕ್ಕಿ, ‘ನನ್ನ ಆಲೋಚನೆ, ಆದ್ಯತೆಗಳ ಗುಣಕ್ಕೆ ಬಹಳ ಹೊಂದುವ ಹುಡುಗಿ
ಹಾಗೆ ತೋರೋ ಸಾನ್ವಿನ ಮದುವೆ ಆಗೋದೇ ಸರಿ. ಅಮ್ಮನ್ನ ಒಂದ್ಸಾರಿ ಕೇಳಿ ನೋಡ್ತೀನಿ. ವಿಷಯ ಹೇಳ್ದಾಗ
ಕಿಂಚಿತ್ತಾದ್ರೂ ನಿರಾಕರಣೆ ಭಾವ ವ್ಯಕ್ತ ಆದ್ರೆ drop ಆದ್ರೆ ಆಯ್ತು. ಪ್ರಯತ್ನ ಆದ್ರು ಪಡೋಣ.’ ಅಂತ ಅನ್ಸಿದ್ದೇ, ಮುಂದಿನ ಭಾನುವಾರ
ಬೆಳಿಗ್ಗೆ ಅಮ್ಮನ ಜೊತೆ coffee ಕುಡಿಯುವ
ಸಮಯದಲ್ಲಿ ವಿಷಯ ಪ್ರಸ್ತಾಪಿಸಿದ್ದೆ, ಕುಮುದಾ ಆ ಕ್ಷಣಕ್ಕೆ ಏನೂ ಮಾತಾಡದೆ ಒಳಗೊಳಗೇ ಖುಷಿಯಿಂದ
ನಗುತ್ತ, coffee
ಹೀರುತ್ತಾ, ಸಂತುಷ್ಟ-ಸಮಾಧಾನದ ಭಾವದಲ್ಲಿ ಮೌನವಾಗಿದ್ದದ್ದನ್ನು ಅಸಮ್ಮತಿಯೆಂದು ಭಾವಿಸಿದ
ಸಮನ್ಯು ತಡ ಮಾಡದೆ, ‘ಅಮ್ಮ ನಿಂಗೆ ಇಷ್ಟ ಇಲ್ಲಾಂದ್ರೆ ಏನೂ ತೊಂದ್ರೆ ಇಲ್ಲ, just ಅನ್ನುಸ್ತು ಹೇಳ್ದೆ ಅಷ್ಟೇ’ ಅಂದು ಸುಮ್ಮನೆ ಕೂರುತ್ತಾನೆ. ಕುಮುದಾಳಿಗೆ
ಒಮ್ಮೆಲೆಗೆ ಭಯದಂತಾದರೂ ಅದನ್ನು ತೋರಿಸಿಕೊಳ್ಳದೆ ಶಾಂತಚಿತ್ತಳಾಗಿ, ‘ಹೇ, ಹಾಗಲ್ವೋ. ಹುಡುಗಿಯನ್ನ
ಮತ್ತೆ ಅವರ ಮನೆಯವರನ್ನ ಹೆಂಗೆ ಮಾತಾಡಿ ಒಪ್ಸೋದು ಅಂತ ಯೋಚುಸ್ತಿದ್ದೆ ಅಷ್ಟೇ.’ ಅಂದಳು. ಆ ಮಾತು
ಕೇಳಿ ಹಿಗ್ಗ್ಗಿದ ಸಮನ್ಯು, ‘ಅದುನ್ನ ನಾನ್ ನೋಡ್ಕೋತೀನಿ ಬಿಡಮ್ಮ. ನೀನ್ ಒಪ್ಕೊಂಡ್ಯಲ್ಲ ಅಷ್ಟೇ
ಸಾಕು.’ ಅಂತ ಒಲವನ್ನೇ ಜಯಿಸಿದ ಹುರುಪಿನಲ್ಲಿ ಎದ್ದು ಹೋಗುತ್ತಾನೆ. ಇತ್ತ ಕುಮುದಾ ಒಂದು ಸಣ್ಣ
ನಗೆಯನ್ನು ಬೀರಿ ಸಾನ್ವಿಗೆ phone
ಹಚ್ಚುತ್ತಾಳೆ.
ಆ ವಿಷಯ ತಿಳಿದ ಕ್ಷಣ ಸಾನ್ವಿಗೆ;
ಬೆಂದಿದ್ದ ಭೂಮಿಯು ವರುಣನ ಸಾಮೀಪ್ಯ ಬಯಸಿ ತಂಪಿಗಾಗಿ ಹಾತೊರೆದು ಕಾದಿರುವಾಗ ಅಕಾಲಿಕ ಮಳೆಯಾದಾಗ
ಆಗುವ ಚಿರಂತನ ರೋಮಾಂಚನ ಆದಹಾಗೆ, ಹೂವು ಇರುಳೆಲ್ಲಾ ಮಂಜಿನ ಶೀತದಲ್ಲಿ ಶೇಖರಿಸಿಟ್ಟ ಒಡಲ ಮೇಲಿನ ಸಣ್ಣದೊಂದು
ಬಿಂದುವು ಮುಂಜಾವಿನಲ್ಲಿ ಸೂರ್ಯನ ಬೆಚ್ಚನೆಯ ಶಾಖ ಸೋಕಿದೊಡನೆ ಮಿಂಚೊಂದು ಮೂಡಿ ಸಂತೃಪ್ತಿಯ
ಭಾವದಲ್ಲಿ ಮಿನುಗುವ ಹಾಗೆ, ಮಂದಾರವೇ ಮಂದಹಾಸವಾದಂತ ನಗೆ ಬೀರುತ್ತಾ, ಶ್ರಮದ ಸಾರ್ಥಕತೆ ಫಲಿಸಿದ್ದಕ್ಕೆ
ಸಹಕರಿಸಿದ ಕುಮುದಾಳಿಗೊಂದು thanks ಹೇಳಿ phone ಕೆಳಗಿಡುತ್ತಾಳೆ.
ಇನ್ನೊಂದು ಬಾರಿ
ಸಮನ್ಯುವನ್ನು ನೋಡಿದರೂ ಸಾಕು, ‘ತಡೆದಿಟ್ಟ ಪ್ರೇಮವನ್ನೆಲ್ಲಾ ಅವನಿಗೆ ಹೇಳಿಬಿಡುವುದೇ..’ ಅನ್ನುವ
ರೀತಿಯಲ್ಲಿ ಇದ್ದಾಗಲೇ, phone
ಸಣ್ಣದಾಗಿ ರಿಂಗಣಿಸುತ್ತದೆ. ‘ನಾಳೆ ಸಂಜೆ ಸಿಗೋಣ. ಸ್ವಲ್ಪ ಮಾತಾಡುವುದಿದೆ..’ ಎಂಬ ಚೊಕ್ಕವಾದ, ಭಾವಾತಿರೇಕವಿಲ್ಲದ
ಒಂದು ಮೆಸೇಜ್ ಸಮನ್ಯುವಿನಿಂದ ಬಂದದ್ದೇ ‘ಇದೇ ಕಾರಣಕ್ಕೆ ನಂಗೆ ನೀನು ಅಷ್ಟು ಇಷ್ಟ ಆಗೋದು. ಭಾವ
ಲಹರಿಯ ಸರಿಯಾದ ಬಳಕೆ ಗೊತ್ತಿರೋದೇ ನಿಂಗೆ..’ ಅಂದುಕೊಳ್ಳುತ್ತಾ ನಾಳೆ ಸಂಜೆ ಜರುಗಲಿರುವ ಆ
ಅಮೂರ್ತ ಘಳಿಗೆಯ ನಿರೀಕ್ಷೇಲಿ ನಿದ್ದೆ ಬಾರದ ನಿದ್ದೇಲಿ ಮಲಗುತ್ತಾಳೆ.
ಸಂಜೆ ಭೇಟಿಯಾಗಿ ಸ್ವಲ್ಪ
ಕಾಲಹರಣ ಮಾಡುತ್ತಾ ಇದ್ದಾಗಲೇ ಸಮನ್ಯು ಯಾವುದೇ ತಡ ಮಾಡದೆ ತನ್ನ ಮನಸಿನ ಮಾತನ್ನೆಲ್ಲ ಹೇಳಿ
ಮದುವೆಯ ಪ್ರಸ್ತಾಪಿಸುತ್ತಾನೆ. ಆಕೆಗಂತೂ ಹಿಗ್ಗೋ ಹಿಗ್ಗು. ಎಲ್ಲಿಲ್ಲದ ಸಂತೋಷ. ಮೊದಲು ಎದ್ದು
ಹೋಗಿ ತಕ್ಷಣಕ್ಕೆ ಸಮನ್ಯುವನ್ನು ತಬ್ಬಿ ಎದೆಗೆ ಒರಗಿ ಹೃದಯ ಬಡಿತದ ಏರಿಳಿತವನ್ನು ಆಲಿಸಿ,
ಪಿಸುಮಾತಲ್ಲೊಮ್ಮೆ ಆ ಹೃದಯಕ್ಕೆ ಧನ್ಯವಾದ ಹೇಳಬೇಕೆಂದು ಅನಿಸಿದರೂ; ಕುಂತಲ್ಲೇ ನಾಚುತ್ತಾ ಸಮ್ಮತಿಯನ್ನು
ಸೂಚಿಸಿದಳು.
ಮುಂದಿನ ದಿನಗಳಲ್ಲಿ ಅಮ್ಮನ ಜೊತೆಗೆ ಸಾನ್ವಿಯ
ಮನೆಗೆ ಹೋಗಿ ಹೆಣ್ಣನ್ನು ಕೇಳುವ ಶಾಸ್ತ್ರ ಮುಗಿಸಿ ಮದುವೆಯ ಮುಹೂರ್ತವನ್ನೂ ಗೊತ್ತುಮಾಡುತ್ತಾನೆ.
ಇಲ್ಲಿ, ಸಾನ್ವಿ-ಸಮನ್ಯು-ಕುಮುದಾ ಎಲ್ಲರಿಗೂ ಅವರವರದೇ
ರೀತಿಯಲ್ಲಿ ಜಯಿಸಿದ ಸಂತೋಷ.
ಈ ಗೆಲುವಿನ ಉಮ್ಮಳ
ಸಂತೋಷದ ನಡುವೆ ಸಾನ್ವಿ ಮತ್ತು ಸಮನ್ಯು ಪ್ರೇಮ ಪೋಷಾಕಿನಲ್ಲಿ ಮದುವೆಯ ಸಂಭ್ರಮಕ್ಕೆ ಅಣಿಯಾಗುತ್ತ
ಅದಕ್ಕೆ ಬೇಕಾದ ಎಲ್ಲಾ ತಯ್ಯಾರಿಯಲ್ಲಿ ತಲ್ಲೀನ. :)
No comments:
Post a Comment