ಯೋಗಸಾಹಿತ್ಯ

ಯೋಗಸಾಹಿತ್ಯ
ಭಾವನೆಗಳ ಅಂಗಳದಲಿ ಪದಗಳ ಓಡಾಟ...!!

Tuesday, July 28, 2026

ಬಾಳ ನಾವೆ..!

ಬಂದದ್ದು ಬರಲಿ ಸಿಕ್ಕಷ್ಟು ಸಿಗಲಿ,

ಎಂಬಂತೆ ಬದುಕುವುದು ನಾವೆ;

ಬಿರುಗಾಳಿ ಬಂದರೂ ಅಲೆ ಚಿಮ್ಮಿ ನಿಂತರೂ,

ಅಲುಗಾಡದು ನಮ್ ಬಾಳ ನಾವೆ..

Friday, January 16, 2026

ಏಕಮೇವ..!

 ಬೆರಳ ತಾಕಿಸಿ ಸನಿಹ ಸಾಗಲು

ಮನದಿ ಮೂಡಿದೆ ಪ್ರಳಯ,

ನಿನ್ನ ಮಯ್ಯದು ನನ್ನ ಆನಲು

ಹೇಳಲಾಗದ ಪ್ರಣಯ.. 

       ಅಚ್ಚುಮೆಚ್ಚು ಹುಚ್ಚು ಮೋಡಿ

       ನಿನ್ನ ತೋಳಿನ ಸಲುಗೆ,

       ಎಚ್ಚರಿಕೆಗೆ ಸ್ಥಳವದೆಲ್ಲಿ

       ನೇರ ಒಡಲೆಂಬ ಸುಳಿಗೆ..

ನಡುಕವೆಂಬ ಭಾವ ಪರಿಚಯ

ನಿನ್ನ ಕೈ ಹಿಡಿದಮೇಲೆ,

ಭಯದಿ ಬೆವರೊ ಹಂತ ದಾಟಿ

ಮಿಲನ ಸರಾಗಲೀಲೆ..

       ನಾನು-ನೀನು ಎಂಬ ಭಾಷೆಗೆ

       ಸ್ಥಳವದು ಇನ್ನೆಲ್ಲಿ!?

       ಏಕಮೇವವಿನ್ನದಮ್ಯ

       ಬಾಳ್ವೆ ಮೇಳವಿಲ್ಲಿ..

Sunday, November 16, 2025

ಕರ್ಮ ಸಿದ್ದಾಂತ..!!

ಕರ್ಮವೆಂಬುದು ಕೇವಲ ಕ್ರಿಯೆ ತಾನು ಅಲ್ಲ -

ಭವಿತದ ಕನ್ನಡಿಯು

ಫಲನೀಡೊ ಸಸಿಯು,

ಕಾರ್ಪಣ್ಯ ರಹಿತಕ್ಕೆ

ಹಚ್ಚಿಡುವ ಸೊಡರು.

ಕರ್ಮವೆಂಬುದು ಕೇವಲ ಕ್ರಿಯೆ ತಾನು ಅಲ್ಲ -

ಮುಂದಿರುವ ದಾರಿಗೆ

ನಕಾಶೆಯ ಸುಳುಹು,

ಪ್ರತಿ ಹೆಜ್ಜೆ- ತಿರುವಿಗದೇ

ಬೆಳಕಿನಾ ಕಿಡಿಯು.

ಕರ್ಮವೆಂಬುದು ಕೇವಲ ಕ್ರಿಯೆ ತಾನು ಅಲ್ಲ -

ಕೊಟ್ಟು ಪಡೆವುದರ

ಉಳಿತಾಯ ಖಾತೆ,

ಬಡ್ಡಿಯ ಏರಿಳಿಕೆಗೆ

ದಿಕ್ಸೂಚಿ ಗುರುವು..

Friday, August 15, 2025

ಮನೆ..!!

ಮನೆಯೆಂದರೆ ಬರಿ ನೆಲೆಯಲ್ಲವದು -

ಕನಸು ನನಸಾದ ವಾಸ್ತವದ ಅರುಹು,

ಬಯಕೆ-ಬವಣೆಗಳ ಫಲಿತಕದೇ ಕುರುಹು,

ಭಾವಗಡಲ ಮಿಲನ ಸೂಚಿ

ತ್ಯಾಗದೊಪ್ಪಂದ ನದಿಯ ಸರಹು..


ಮನೆಯೆಂದರೆ ಬರಿ ನೆಲೆಯಲ್ಲವದು -

ಸ್ವಂತ ಸೂರಿನದ್ದೇ ಮೆಲುಕು,

ಆಸೆಯಳತೆಗೆ ಇಲ್ಲ ಅಳುಕು,

ಇಷ್ಟಾರ್ಜಿತಕ್ಕೆ ಕೈಯ ಚಾಚಿ

ಹಂತ-ಹಂತ ಜೀವಂತ ಸೆಳಕು.


ಮನೆಯೆಂದರೆ ಬರಿ ನೆಲೆಯಲ್ಲವದು -

ಪ್ರತಿ ಗೋಡೆಯಾ ಹಾಸ,

ನೆಲ-ಮಾಳಿಗೆ ಖಾಸಾ,

ಕಾರ್ಪಣ್ಯವೇ ಕೊಂಚ ನಾಚಿ

ಸಾಧನೆ-ಶಿಖರ ತಲುಪಿದ ಭಾಸ..


ಮನೆಯೆಂದರೆ ಬರಿ ನೆಲೆಯಲ್ಲವದು -

ನಿಟ್ಟುಸಿರಿನ ಅನಾವರಣ,

ಸೋಲೊಪ್ಪದ ನಿರಾಕರಣ,

ತೀವ್ರ ಸಾಧನೆಯ ಬಾಲಂಗೋಚಿ

ಫಲಿಸಿ ಶ್ರುತಿಸೋ ಅಂತಃಕರಣ..

Friday, August 8, 2025

ನಿಲ್ದಾಣರಹಿತ ಜೀವನ..!!

ಇರುವಿಕೆಯ ಅರಿವಿಲ್ಲ

ಬರುವಿಕೆಯ ಅರಿವಿಲ್ಲ

ನಿಲ್ದಾಣವಂತೂ ಎಲ್ಲುಂಟೊ ಅರಿವಿಲ್ಲ..

ತಡೆರಹಿತ ರೈಲೆಂಬ ಜೀವನದ ಬಂಡಿಯಿದು

ಎಳೆದು ನಿಲ್ಲಿಸಲು ಚೈನಂತು ಸಿಗಲಿಲ್ಲ!

ಬಂದಾಗ ಬಂದೆ, ಇದ್ದಾಗ ಇದ್ದೆ,

ಹಳೆ ನೆನಪು ಮೆಲುಕಾಕೋ 

ಕಾಲಕ್ಕೆ ಕಾದೆ..

Sunday, July 27, 2025

ಇನ್ನೆಲ್ಲಿ ಮಿತಿಯು..!?

ನಾಚಿಕೆಯೇ ನಿಲುವಾಗಿ,

ನನ್ನ ಸೆಳೆಯೋ ಸಲುವಾಗಿ,

ಬೆಳಕೊಂದು ರೂಪ ತಳೆದಂತೆ;

ತಾರಗಳೇ ಬೆರಗಾಗಿ,

ಬೇಡುತಲಿ ತಲೆಬಾಗಿ,

ಹೊಳಪೊಂದ ಕಾಡಿ ಪಡೆವಂತೆ;

ಸೀರೆಯಾ ಸೆರೆಯಲ್ಲಿ,

ಭಾವನೆಯ ತೊರೆಯಲ್ಲಿ,

ಸಂದಿಗ್ಧದಂತೆನ್ನ ಸ್ಥಿತಿಯು;

ಸೌಂದರ್ಯ ಚೇತನವೇ,

ನಡೆಯುತಲಿ ರಮಿಸಿರಲು,

ಆಲೋಚನೆಗಿನ್ನಿಲ್ಲ ಮಿತಿಯು..

ಮರೆತೋಯ್ತು ಮಾತು..!!

ಚೆಲುವಿನಾ ಉತ್ತುಂಗ,

ಮೋಹ ಭಾವತರಂಗ,

ಎನ್ನೊಡಲ ಸೀಳಿ ಬರುವಂತೆ;

ಕಡು ಚೇಷ್ಟೆಯ ಮಾರ್ಪು,

ಮಡಿವಂತಿಕೆಯ ಕಾಪು,

ಭೇದಿಸಿ ಸುಳಿ ಏಳುವಂತೆ;

ಆಷಾಢಕಿನ್ನು ಮೆಲುವಾದ ಗಡಿಪಾರು,

ಶ್ರಾವಣವು ಜೀವಕದೆ ಸಲೀಲ ಸೇತು;

ಮಾಸಮೊತ್ತದ ದೂರ ಕ್ಷಣಿಸೆ ಒಂಚೂರು,

ಬಾಹುಬಂಧನ ಶುರುವು ಇನ್ನೆಲ್ಲಿ ಮಾತು..

ಮರೆತೋಯ್ತು ಮಾತು..

ನೀನೇ ನೇರ ಹೊಣೆ..!!

ನಿನ್ನೊನಪು ಒಯ್ಯಾರ

ಗುಣಿಸುವಾ ಸಲುವೇ,

ಲೋಕದೆಲ್ಲಾ ಚೆಲುವ

ಮಣಿಸುವಾ ಸಲುವೇ,

ನೀನುಟ್ಟ ಸೀರೆಯದು ಬರಿ ಸೀರೆಯಲ್ಲ-

ನನ್ನುಸಿರ ಕ್ಷಣ ನಿಲಿಸೋ,

ಎದೆಬಡಿತ ಲಯ ಕೆಡಿಸೋ,

ಕಣ್ ಮಿಟುಕಿಸೊ ಸಹಜ ಕ್ರಿಯೆ

ಸ್ತಂಭಿಸಿ ಬೆರಗಾಗಿಸೋ,

ನಿನ್ನ ಕಡುಕೀಟಲೆಗೆ ಇಲ್ಲ ಕಡೆಗಣನೆ,

ಮುಂದಿನ ಪರಿಣಾಮಕೆಲ್ಲ ನೀನೆ ನೀರ ಹೊಣೆ..

ನೀನೇ ನೇರ ಹೊಣೆ..

Wednesday, July 16, 2025

ಮುಗಿವಿರದ ಯಾನ..

ಮಧುರ ರಮ್ಯವೀ ಅಮೂರ್ತ ಪ್ರೇಮ,
ದಶದಿಕ್ಕು ನೆಲೆಸೋ ಅಪೂರ್ವ ಧಾಮ;
ನಿಸ್ವಾರ್ಥ ಮೆರೆವ ಅಖಂಡನೀಯ,
ಒಳಿತನೇ ಬಯಸೋ ಅಭೇದ್ಯ ಮಾಯ..
ಮಾತು ಇಲ್ಲದೆ ಮೌನವೇ ತಿಳಿಸೋ
ಭಾವಲಹರಿಯದು ಚಂದ ರಮಣೀಯ;
ಅನಂತ ಸುನೀತ ನಿರ್ಮಲಾಲೀಲ
ಬಂಧ ಭಾವೈಕ್ಯದ ಉಲ್ಲಾಸಮೇಳ..
ಎದೆಬಡಿತ ಸಪ್ಪಳವ ಮೇಳೈಸೋ ಗಾನ,
ನಾ-ನೀನು ನೀ-ನಾನಾಗೋ ಮುಗಿವಿರದ ಯಾನ..